ಹೊಳೆನರಸೀಪುರ: ಪಟ್ಟಣದ ಸಮುದಾಯ ಭವನ ಗಣಪತಿ ಪೆಂಡಾಲ್‌ನಲ್ಲಿ ಹೆಗ್ಗೋಡಿನ ನೀನಾಸಂ ನಾಟಕ ತಂಡದ ಕಲಾವಿದರು ಶನಿವಾರ ಸಂಜೆ ಪ್ರದರ್ಶಿಸಿದ ಬಾನು ಮುಷ್ತಾಕ್ ವಿರಚಿತ ‘ಎದೆಯ ಹಣತೆ’ ನಾಟಕ ನೋಡುಗರನ್ನು ಬೆರಗಾಗಿಸಿತು.
ಕಣ್ಣು ಮುಚ್ಚದೇ ನಾಟಕ ನೋಡುತ್ತಿದ್ದ ಕೆಲವು ವೀಕ್ಷಕರ ಕಣ್ಣಾಲೆಗಳು ತುಂಬಿ ಬಂದಿದ್ದವು. ಮುಸ್ಲಿಂ ಕುಟುಂಬವೊಂದರ ಮಹಿಳೆಯೊಬ್ಬಳು ಅನುಭವಿಸುವ ತೊಳಲಾಟವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕಲಾವಿದರ ಅಭಿನಯ, ಬೆಳಕಿನ ಸಂಯೋಜನೆ ಅಚ್ಚುಕಟ್ಟಾಗಿತ್ತು.
5 ಹೆಣ್ಣು ಮಕ್ಕಳನ್ನು ಹೆತ್ತ ಮಹಿಳೆಯೊಬ್ಬಳು, ಗಂಡನ ಕಿರುಕುಳ, ತಲಾಖ್‌ನ ಬೆದರಿಕೆಯಿಂದ ಜರ್ಝರಿತವಾಗಿದ್ದು, ಹಸುಗೂಸಿನೊಂದಿಗೆ ತವರು ಮನೆಗೆ ಬರುತ್ತಾಳೆ. ಹಾಸಿಗೆ ಹಿಡಿದ ಅಪ್ಪ, ವಯಸ್ಸಾದ ಅಮ್ಮ, ಒಡಹುಟ್ಟಿದ ಅಣ್ಣಂದಿರು, ಏನೇ ಆದರೂ ನೀನೇ ಅನುಸರಿಕೊಂಡು ಹೋಗು, ನಾವಿನ್ನೂ ನಿನ್ನ ತಂಗಿಯರಿಗೆ ಮದುವೆ ಮಾಡಬೇಕಿದೆ. ನೀನು ಬಂದು ಮನೆಯಲ್ಲಿ ಕುಳಿತರೆ ಅವರನ್ನು ಯಾರು ಮದುವೆ ಆಗುತ್ತಾರೆ ಎಂದು ತವರು ಮನೆಯವರು, ಕರೆದುಕೊಂಡು ಹೋಗಿಬಿಟ್ಟು ಬಂದ ನಂತರದ ಕ್ಲೈಮಾಕ್ಸ್ ಜನರ ಹೃದಯವನ್ನು ಕಲಕಿತು.
ಮೊದಲ ಮಗಳು ಹೆಚ್ಚಿನ ವಿದ್ಯಾಭ್ಯಾಸದ ಕನಸನ್ನು ಹೊತ್ತು, ಇತರ ಮಕ್ಕಳನ್ನು ಸಲಹುತ್ತಿದ್ದರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಹಿಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಮೊದಲ ಮಗಳ ಪರಿಸ್ಥಿತಿ, ಹಸುಗೂಸಿನ ಮುಂದಿನ ಭವಿಷ್ಯದ ಚಿಂತೆಯಲ್ಲಿ ಆತ್ಮಹತ್ಯೆ ನಿರ್ಧಾರ ಕೈ ಬಿಟ್ಟ ಘಟನಾವಳಿಗಳು ಚೆನ್ನಾಗಿ ಮೂಡಿಬಂದವು.
ಮುಸ್ಲಿಂ ಮಹಿಳೆಯ ಅಭಿನಯ ಹಾಗೂ ಈಕೆಯ ಹತ್ತನೇ ತರಗತಿ ಮಗಳ ಅಭಿನಯ ಅತ್ಯುತ್ತಮವಾಗಿ ಮೂಡಿಬಂತು. ಇಂತಹ ಪರಿಸ್ಥಿತಿಗಳು ಎಲ್ಲ ಧರ್ಮದ ಕುಟುಂಬಗಳಲ್ಲೂ ನಡೆಯುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು. ನಾಟಕವನ್ನು ನೀನಾಸಂನ ಪ್ರಾಂಶುಪಾಲ ಡಾ. ಗಣೇಶ್ ನಿರ್ದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.