ADVERTISEMENT

ಐವರ ಸಾವಿಗೆ ಕಾಣವಾಗಿದ್ದ ಸಲಗಗಳ ಸೆರೆ: ಅಭಯಾರಣ್ಯಕ್ಕೆ ಸ್ಥಳಾಂತರಕ್ಕೆ ಸಿದ್ಧತೆ

ಸಾಕಾನೆಗಳ ತಂಡದಿಂದ ಕಾರ್ಯಾಚರಣೆ: ಐವರ ಸಾವಿಗೆ ಕಾಣವಾಗಿದ್ದ ಸಲಗಗಳ ಸೆರೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:41 IST
Last Updated 10 ಜೂನ್ 2021, 14:41 IST
ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದಲ್ಲಿ ಗುರುವಾರ ಸೆರೆಯಾದ ಮೌಂಟೈನ್‌ ಕಾಡಾನೆ ಸಿಟ್ಟಿನಲ್ಲಿ ಮಾವುತರ ಮೇಲೆ ಮಣ್ಣು ಎಸೆಯುತ್ತಿರುವುದು ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್‌. ಪರಮೇಶ್‌
ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದಲ್ಲಿ ಗುರುವಾರ ಸೆರೆಯಾದ ಮೌಂಟೈನ್‌ ಕಾಡಾನೆ ಸಿಟ್ಟಿನಲ್ಲಿ ಮಾವುತರ ಮೇಲೆ ಮಣ್ಣು ಎಸೆಯುತ್ತಿರುವುದು ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್‌. ಪರಮೇಶ್‌   

ಸಕಲೇಶಪುರ: ತಾಲ್ಲೂಕಿನ ಆದರವಳ್ಳಿ ಗ್ರಾಮದಲ್ಲಿ ಮನೆ ಅಂಗಳದಲ್ಲಿಯೇ ರಾಜಯ್ಯ ಅವರನ್ನು 8 ದಿನಗಳ ಹಿಂದೆ ತುಳಿದು ಕೊಂದು ಹಾಕಿದ್ದ ಮೌಂಟೈನ್‌ ಹೆಸರಿನ ಗಂಡು ಕಾಡಾನೆ ಹಾಗೂ ಗುಂಡ ಹೆಸರಿನ ಮತ್ತೊಂದು ಗಂಡು ಆನೆಯನ್ನು ತಾಲ್ಲೂಕಿನ ಹಳೆಕೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಗುರುವಾರ ಸೆರೆ ಹಿಡಿದು ಅರಣ್ಯ ಇಲಾಖೆಯವರುಸ್ಥಳಾಂತರಕ್ಕೆ ಮುಂದಾಗಿದ್ದಾರೆ.

ಬೆಳಿಗ್ಗೆ 8 ಗಂಟೆ ಸುಮಾರಿಗೆ ದಸರಾ ಆನೆಗಳಾದ ಅರ್ಜುನ, ಅಭಿಮನ್ಯು, ಭೀಮ, ಗಣೇಶ, ಮಹೇಂದ್ರ ಇವುಗಳಿಗೆ ವಡೂರು ಆನೆ ಕ್ಯಾಂಪ್‌ನಲ್ಲಿ ಪೂಜೆ ಸಲ್ಲಿಸಿ ಕಾರ್ಯಾಚರಣೆ ಶುರು ಮಾಡಿದರು. 8.30 ರ ಸುಮಾರಿಗೆ ಹಳೆಕೆರೆ ಗ್ರಾಮದ ತೋಟದಲ್ಲಿ ಮೌಂಟೈನ್‌ ಒಂಟಿ ಸಲಗ ಪತ್ತೆಯಾಯಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಕೆ.ಎನ್‌. ಬಸವರಾಜು ನೇತೃತ್ವದಲ್ಲಿ ದಲಾಯತ್‌ ಅಕ್ರಂ, ಡಾ.ಮುಜೀಬ್‌, ಡಾ.ಮುರುಳಿ, ಡಾ.ಆಶೀಸ್‌ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸುವಲ್ಲಿ ಯಶಸ್ವಿಯಾದರು.

ಸುಮಾರು 20 ವರ್ಷದ ದಷ್ಟಪುಷ್ಟವಾಗಿದ್ದ ಮೌಂಟೈನ್‌ ಸಲಗವನ್ನು ಬಗ್ಗಿಸಿ ಕರೆತರಲು ಐದು ಆನೆಗಳು ಹರಸಾಹಸ ಪಟ್ಟವು. ಸಾಕಾನೆಗಳೊಂದಿಗೆ ಕಾದಾಟಕ್ಕೆ ಇಳಿದು ಹಠ ಮಾಡಿತು. ಅರ್ಜುನ ಹಾಗೂ ಅಭಿಮನ್ಯು ಆನೆಗಳ ಪರಾಕ್ರಮದ ಮುಂದೆ ಮೌಂಟೈನ್ ಆಟ ನಡೆಯಲಿಲ್ಲ. ನಂತರ ಕ್ರೇನ್‌ ಮೂಲಕ ಬಹಳ ಸುಲಭವಾಗಿ ಎತ್ತಿ ಲಾರಿ ಹತ್ತಿಸಲಾಯಿತು.

ADVERTISEMENT

ಮೌಂಟೈನ್ ಆನೆ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ಕೂಗಳತೆ ದೂರದಲ್ಲಿಯೇ ಗುಂಡ ಸಹ ಸಿಟ್ಟಿನಲ್ಲಿಯೇ ಅಡ್ಡಾಡುತ್ತಾ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದ. ಮಧ್ಯಾಹ್ನ 1.30ಕ್ಕೆ ಒಂದು ಆನೆ ಸೆರೆ ಕಾರ್ಯಾಚರಣೆ ಮುಗಿದು ಊಟದ ನಂತರ ಎರಡನೇ ಆನೆ ಸೆರೆ ಕಾರ್ಯಾಚರಣೆಗೆ ಇಳಿದ ತಂಡ ಕೇವಲ 15 ನಿಮಿಷಗಳಲ್ಲಿ ಗುಂಡನಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಅಭಯಾರಣ್ಯಕ್ಕೆ ಸ್ಥಳಾಂತರ: ಸೆರೆ ಹಿಡಿದ ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲಾಗಿದೆ. ಇವುಗಳನ್ನು ಅಭಯಾರಣ್ಯಕ್ಕೆ ಬಿಡಲಾಗುವುದು, ಯಾವ ಅರಣ್ಯ ಎಂಬುದು ಇನ್ನೂ ನಿರ್ಧಾರ ಆಗಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್‌.ಬಸಬರಾಜು ‘ಪ್ರಜಾವಾಣಿ’ಗೆ ಹೇಳಿದರು.

ಕಾರ್ಯಾಚರಣೆಗೂ ಮೊದಲು ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಹಾಗೆಯೇ ಎಲ್ಲರಿಗೂ ಕೋವಿಡ್‌ ಪರೀಕ್ಷೆ ಸಹ ನಡೆಸಿದ ನಂತರವೇ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಎಂ. ಗಿರೀಶ್‌ ನಂದನ್‌, ಎಸಿಎಫ್‌ ಲಿಂಗರಾಜು, ತಹಶೀಲ್ದಾರ್‌ ಎಚ್‌.ಬಿ. ಜೈಕುಮಾರ್‌, ಡಿವೈಎಸ್‌ಪಿ ಬಿ.ಆರ್‌. ಗೋಪಿ, ಯಸಳೂರು ಆರ್‌ಎಫ್ಒ ಮೋಹನ್‌, ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಅಗಸೆ, ಅರಕಲಗೂಡು ಆರ್‌ಎಫ್ಒ ಅರುಣ್‌, ಆಲೂರು ಆರ್‌ಎಫ್ಒ ವಿನಯ್‌ಚಂದ್ರ, ಭದ್ರಾ ಅರಣ್ಯ ವನ್ಯ ಜೀವಿ ವಿಭಾಗದ ಡಾ. ಯಶಸ್ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.