ADVERTISEMENT

ಕೇಂದ್ರ ಬಜೆಟ್‌ | ಹಾಸನಕ್ಕೆ ಮತ್ತೆ ನಿರಾಸೆ: ಕೈಗೂಡದ ಐಐಟಿ, ಕೈಗಾರಿಕೆಯ ಕನಸು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:44 IST
Last Updated 2 ಫೆಬ್ರುವರಿ 2026, 4:44 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

– ಪಿಟಿಐ ಚಿತ್ರ

ಹಾಸನ: ಬಹುದಿನಗಳ ಬೇಡಿಕೆ ಈಡೇರಲಿಲ್ಲ. ಜೊತೆಗೆ ಹೊಸ ಯೋಜನೆಗಳೂ ಜಿಲ್ಲೆಗೆ ಸಿಗಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಜಿಲ್ಲೆಯ ಮಟ್ಟಿಗೆ ನಿರಾಸೆ ಮೂಡಿಸಿದೆ.

ADVERTISEMENT

ಬಿಜೆಪಿ–ಜೆಡಿಎಸ್‌ ಮೈತ್ರಿ ಇರುವ ಸಂದರ್ಭದಲ್ಲಾದರೂ ಜಿಲ್ಲೆಯ ಹಲವು ಬೇಡಿಕೆಗಳಿಗೆ ಪುರಸ್ಕಾರ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಐಐಟಿ, ಕಾಡಾನೆ ಸಮಸ್ಯೆ, ಬೃಹತ್‌ ಕೈಗಾರಿಕೆಗಳ ಬೇಡಿಕೆಗಳು ಈಡೇರಿಲ್ಲ.

ಐಐಟಿ ಸ್ಥಾಪನೆಗೆ ಸುಮಾರು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಪದೇ ಪದೇ ಐಐಟಿ ಸ್ಥಾಪನೆ ಸಂಬಂಧ ಕೇಂದ್ರದ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಅದಾಗ್ಯೂ ಈ ಬಾರಿಯೂ ಐಐಟಿಯ ಕನಸು, ಕನಸಾಗಿಯೇ ಉಳಿಯುವಂತಾಗಿದೆ.

ಇನ್ನು ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿರುವ ಕಾಡಾನೆ ಹಾವಳಿ ನಿವಾರಣೆಗೆ ಯಾವುದೇ ಪ್ರಸ್ತಾಪವಾಗಿಲ್ಲ. ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು, ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಆನೆಗಳಿಂದಾಗಿ ಜನರು ಕಂಗೆಟ್ಟಿದ್ದಾರೆ. ಒಂದೆಡೆ ಬೆಳೆ ಹಾಳಾಗುತ್ತಿದ್ದು, ಇನ್ನೊಂದೆಡೆ ಜೀವಕ್ಕೂ ಸಂಚಕಾರ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಆನೆಗಳ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಇಲ್ಲಿನ ಜನರದ್ದು.

ಕೇಂದ್ರ ಸರ್ಕಾರದ ಕಾಂಪಾ ನಿಧಿಯಡಿ ಆನೆ ಕಾರಿಡಾರ್‌ ನಿರ್ಮಾಣ ಮಾಡಬೇಕು. ಆನೆಗಳಿಗೆ ಅರಣ್ಯದಲ್ಲಿಯೇ ಆಹಾರ, ನೀರು ಒದಗಿಸುವ ಮೂಲಕ ನಾಡಿಗೆ ಬರದಂತೆ ಮಾಡಬೇಕಾಗಿದೆ. ಅದಕ್ಕಾಗಿ ಸಕಲೇಶಪುರ ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳ ಜನರು ತಮ್ಮ ಜಮೀನು ನೀಡಲು ಮುಂದೆ ಬಂದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

ಕೈಗೂಡದ ಕೈಗಾರಿಕೆ:

ಜಿಲ್ಲೆಯವರೇ ಆದ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಕೈಗಾರಿಕೆ ಸಚಿವರಾಗಿದ್ದು, ಜಿಲ್ಲೆಗೆ ಬೃಹತ್‌ ಕೈಗಾರಿಕೆಗಳನ್ನು ತರಬಹುದು ಎನ್ನುವ ನಿರೀಕ್ಷೆ ಇತ್ತು. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ಆಧಾರಿತ ಉತ್ಪನ ಹಾಗೂ ಆಹಾರ ಸಂಸ್ಕರಣೆ ಉದ್ಯಮ ಆರಂಭಿಸಬೇಕು. ಜೊತೆಗೆ ಗಾರ್ಮೆಂಟ್‌ ಕೈಗಾರಿಕೆಗಳನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವ ಬೇಡಿಕೆ ಬಹಳ ದಿನಗಳದ್ದು.

ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿರುವುದರಿಂದ ಹಾಗೂ ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಇರುವುದರಿಂದ ಈ ಬಾರಿ ಜಿಲ್ಲೆಗೆ ಹೊಸ ಕೈಗಾರಿಕೆ ಸಿಗಬಹುದು ಎನ್ನುವ ನಿರೀಕ್ಷೆ ತುಸು ಹೆಚ್ಚಾಗಿಯೇ ಇತ್ತು.

ಇದೆಲ್ಲದರ ಮಧ್ಯೆ ತೆಂಗು ಪ್ರೋತ್ಸಾಹ ಯೋಜನೆಯಡಿ ತೆಂಗಿನ ಉತ್ಪಾದನೆ ಹೆಚ್ಚಳಕ್ಕೆ ಉತ್ತೇಜನ ಕೊಡಲಾಗಿದೆ. ಗೋಡಂಬಿ ಮತ್ತು ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಗ್ಲೋಬಲ್ ಬ್ರಾಂಡ್ ಆಗಿ ರೂಪಿಸುವ ಅಂಶವು ಮುಂಗಡ ಪತ್ರದಲ್ಲಿ ಸೇರಿದೆ.

ಕೇಂದ್ರ ಬಜೆಟ್‌ನಲ್ಲಿ ಮತ್ತೊಮ್ಮೆ ಜಿಲ್ಲೆಯ ಅನ್ಯಾಯ ಮಾಡಲಾಗಿದೆ. ಕಾಡಾನೆ ಸಮಸ್ಯೆ ಐಐಟಿ ಕೈಗಾರಿಕೆಗಳ ಸ್ಥಾಪನೆಯಂತಹ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೂ ಗಮನ ನೀಡಿಲ್ಲ. ನೀರಸ ಬಜೆಟ್‌
ದೇವರಾಜೇಗೌಡ ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ
ಕೃಷಿ ನೀರಾವರಿ ಶಿಕ್ಷಣ ಆರೋಗ್ಯ ಸೇರಿದಂತೆ ಜನಸಾಮಾನ್ಯರಿಗೆ ಹತ್ತಿರವಾಗಿರುವ ಯಾವ ಕ್ಷೇತ್ರಗಳಿಗೂ ನಿರೀಕ್ಷಿತ ಅನುದಾನ ಯೋಜನೆ ಘೋಷಿಸಿಲ್ಲ. ಶ್ರೀಮಂತರನ್ನು ಖುಷಿಪಡಿಸುವ ಸಲುವಾಗಿ ಬಜೆಟ್ ಮಂಡಿಸಿದಂತಿದೆ.
ಎಂ.ಎ. ಗೋಪಾಲಸ್ವಾಮಿ ವಿಧಾನ ಪರಿಷತ್ ಮಾಜಿ ಸದಸ್ಯ
ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಗೊಳಿಸಲು ರೂಪಿಸಿರುವ ವಂಚನೆಯ ನೀಲನಕ್ಷೆ. ಆಧುನೀಕರಣದ ಸೋಗಿನಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಹಿಂದೆ ಸರಿಯುವ ಅಕ್ರಮಣಕಾರಿ ಖಾಸಗೀಕರಣದ ಸರ್ಕಾರದ ಕಾರ್ಯಸೂಚಿಯನ್ನು ಮರೆಮಾಚುತ್ತಿದೆ.
ಸುಷ್ಮಾ ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯದರ್ಶಿ
ಭಾರತವನ್ನು ವಿಶ್ವ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ ಮಾಡುವ ಗುರಿ ಉತ್ತಮ.‌ ಪ್ರತಿ ರಾಜ್ಯದಲ್ಲಿ ಮೂರು‌ ರಾಸಾಯನಿಕ ಉದ್ಯಾನಗಳನ್ನು‌ ಸ್ಥಾಪಿಸಲು‌ ಬೆಂಬಲ ನೀಡುವ ಯೋಜನೆಯ ಬಜೆಟ್‌ನಲ್ಲಿ ಸೇರಿಸಿರುವುದು ಸ್ವಾಗತಾರ್ಹ.
ಜಿ.ಎಸ್. ರಾಜ್‌ಕುಮಾರ್ ಭೂಮಿ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಚನ್ನರಾಯಪಟ್ಟಣ
ಆರೋಗ್ಯ ಶಿಕ್ಷಣ ಕೃಷಿ ಕೈಗಾರಿಕಾ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೆಚ್ಚಿನ ಹಣ ನೀಡುವ ಮೂಲಕ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮೇರೆಗೆ ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ತೋಟಿ ನಾಗರಾಜ್ ಚನ್ನರಾಯಪಟ್ಟಣ ಟಿಎಪಿಎಂಎಸ್ ನಿರ್ದೇಶಕ
ಶಿಕ್ಷಣಕ್ಕೆ ಆದ್ಯತೆ ದೊರಕಿದೆ. 15ಸಾವಿರ ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಷಯವಾರು ಪ್ರಯೋಗಶಾಲೆ ಸ್ಥಾಪಿಸಲು ಉದ್ದೇಶಿಸಿರುವುದು ಒಳ್ಳೆಯ ಬೆಳವಣಿಗೆ. 700 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಆರಂಭಿಸಲು ಹಣ ಮೀಸಲಿಡಲಾಗಿದೆ.
ಚೇತನ್ ವರ್ತಕ ಹಳೇಬೀಡು
20 ವರ್ಷಗಳ ದೀರ್ಘಾವಧಿ ಬೆಳವಣಿಗೆ ದೃಷ್ಟಿಕೋನ ಇಟ್ಟುಕೊಂಡು ಆತ್ಮನಿರ್ಭರತೆ ಮೂಲಸೌಕರ್ಯ ಇಂಧನ ಐಟಿ ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದೆ. ದೇಶದ ಆರ್ಥಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡುವಂಥದ್ದಾಗಿದೆ.
ಎಚ್.ಎ. ಕಿರಣ್ ಎಫ್‌ಕೆಸಿಸಿಐ ನಿರ್ದೇಶಕ

ಉಪ್ಪು–ಖಾರವಿಲ್ಲದ ಊಟದಂತಿದೆ

ಕೇಂದ್ರ ಬಜೆಟ್‌ ಉಪ್ಪು–ಖಾರ ಇಲ್ಲದ ಊಟದಂತಿದ್ದು ಹಾಸನ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೇಂದ್ರ ಸರ್ಕಾರ ರಾಜ್ಯ ಹಾಗೂ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ವಿರೋಧ ಪಕ್ಷದವರು ಸಂಸದರಾಗಿರುವುದೇ ತಪ್ಪು ಎಂಬಂತೆ ವರ್ತಿಸಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಕನಸುಗಳೊಂದಿಗೆ ಮೊದಲ ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಆದರೆ ಈ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸಮಾವೇಶ ನಡೆಸಿದ ಜೆಡಿಎಸ್ ನಾಯಕರು ಈ ಬಜೆಟ್‌ ಬಗ್ಗೆ ಏನು ಹೇಳುತ್ತಾರೆ ಕಾದು ನೋಡಬೇಕಿದೆ. ಎನ್‌ಡಿಎ ಮೈತ್ರಿಯಲ್ಲಿರುವ ಕಾರಣ ಜಿಲ್ಲೆಗೆ ವಿಶೇಷ ಯೋಜನೆ ಘೋಷಣೆಯಾಗುತ್ತವೆ ಎಂಬ ನಿರೀಕ್ಷೆಯಿತ್ತು. ಐಐಟಿ ಸ್ಥಾಪನೆಗೆ 3 ಬಾರಿ ಮನವಿ ಸಲ್ಲಿಸಿದ್ದೇನೆ. ಕಾಡಾನೆ–ಮಾನವ ಸಂಘರ್ಷ ತಡೆಗೆ ಆನೆ ಕಾರಿಡಾರ್‌ ನಿರ್ಮಾಣಕ್ಕೆ ಹಲವು ಬಾರಿ ಪ್ರಸ್ತಾವ ನೀಡಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಜಿಲ್ಲೆಯ ವಿಶ್ವಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯಾವುದೇ ಅನುದಾನ ಘೋಷಿಸಿಲ್ಲ. ತೆಂಗು ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.