ಹಿರೀಸಾವೆ: ಎರಡು ದಿನದಿಂದ ಹೋಬಳಿಯಲ್ಲಿ ಹದವಾದ ಮಳೆ ಬೀಳುತ್ತಿದ್ದು, ರೈತರು ರಾಗಿ, ಜೋಳ ಸೇರಿ ಇತರೆ ಬೆಳೆಗಳನ್ನು ಉಳಿಸಿಕೊಳ್ಳಲು ಯೂರಿಯಾ ಗೊಬ್ಬರದ ಅಗತ್ಯ ಹೆಚ್ಚಾಗಿದೆ. ಹೋಬಳಿಯಲ್ಲಿ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.
ಎರಡು ತಿಂಗಳಿನಿಂದ ಹೋಬಳಿಯಲ್ಲಿ ಮಳೆಯಾಗದೇ, ರಾಗಿ, ಜೋಳ ಸೇರಿದಂತೆ ಹಲವು ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿದ್ದವು. ಈಗ ಬಿದ್ದ ಮಳೆಯಿಂದ ಭೂಮಿ ಹಸಿಯಾಗಿದ್ದು, ಪೈರಿಗೆ ಯೂರಿಯಾ ಹಾಕಿದರೆ, ಅಲ್ಪಸ್ವಲ್ಪ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಹೋಬಳಿಯ ರೈತರಿದ್ದಾರೆ.
‘ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶುಕ್ರವಾರ ಮಧ್ಯಾಹ್ನ ಗೊಬ್ಬರ ಬರುತ್ತದೆ ಎಂದು ಮಾಹಿತಿ ತಿಳಿದ ರೈತರು, ಲಾರಿ ಬರುವ ಮೊದಲೇ ಮಹಿಳೆಯರು ಸೇರಿದಂತೆ ನೂರಾರು ರೈತರು ಸರತಿಯಲ್ಲಿ ಕಾಯುತ್ತಿದ್ದರು. ನೂರಕ್ಕೂ ಹೆಚ್ಚು ರೈತರು ಗೊಬ್ಬರ ಕೊಂಡರು. 10 ಟನ್ ಯೂರಿಯಾ ತರಿಸಲಾಗಿತ್ತು, ಪ್ರತಿ ರೈತರಿಗೆ 2 ಚೀಲದಂತೆ ವಿತರಣೆ ಮಾಡಲಾಯಿತು’ ಎಂದು ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ತಿಳಿಸಿದರು.
‘60 ದಿನದ ಹಿಂದೆ ಬಿತ್ತನೆ ಮಾಡಿದ್ದ ರಾಗಿಗೆ ಯೂರಿಯಾ ರಸಗೊಬ್ಬರ ಹಾಕಿದರೆ, ಪೈರು ಬೆಳೆಯುತ್ತದೆ, ಫಸಲು ಕಡಿಮೆ ಆದರೂ ಜಾನುವಾರುಗಳಿಗೆ ಮೇವು ಆಗುತ್ತದೆ. 40 ದಿನದ ಹಿಂದೆ ಬಿತ್ತನೆ ಮಾಡಿರುವ ರಾಗಿ, ಗೊಬ್ಬರ ಹಾಕುವುದರಿಂದ ಅಲ್ಪಸ್ವಲ್ಪ ಫಸಲು ಬರುತ್ತದೆ’ ಎನ್ನುತ್ತಾರೆ ರೈತ ನಾರಾಯಣಪ್ಪ.
‘ಗೊಬ್ಬರ ಬಂದ ಕೆಲವೇ ಗಂಟೆಯಲ್ಲಿ ಖಾಲಿಯಾಗುತ್ತಿದೆ. ಹೆಚ್ಚಿನ ಯೂರಿಯಾ ಸರಬರಾಜು ಮಾಡಬೇಕಿದೆ’ ಎನ್ನುವುದು ರೈತರ ಆಗ್ರಹ.
ಮಳೆ ಆಗಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಇಂದು ದಿಡಗ, ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮತ್ತು ಗೊಬ್ಬರ ವರ್ತಕರಿಗೆ ಗೊಬ್ಬರ ಸರಬರಾಜು ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯೂರಿಯಾ ಗೊಬ್ಬರದ ಬದಲು ನ್ಯಾನೋ ಯೂರಿಯಾವನ್ನು ಬಳಸುವಂತೆ ರೈತರಿಗೆ ಮನವರಿಕೆ ಮಾಡಲಾಗುತ್ತಿದೆ.-ಜಾನ್ ತಾಜ್, ಹಿರೀಸಾವೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.