ADVERTISEMENT

ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ಜಾನುವಾರುಗಳಿಗೂ ಕುಡಿಯುವ ನೀರಿಲ್ಲ: ಆಲೂರು ಪಟ್ಟಣದಲ್ಲಿ ಟ್ಯಾಂಕರ್‌ ಪೂರೈಕೆ

ಎಂ.ಪಿ.ಹರೀಶ್
Published 20 ಏಪ್ರಿಲ್ 2024, 5:04 IST
Last Updated 20 ಏಪ್ರಿಲ್ 2024, 5:04 IST
ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು.
ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು.   

ಆಲೂರು: ತಾಲ್ಲೂಕಿನಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ಒಂದೆಡೆ ಯಗಚಿ, ಮತ್ತೊಂದೆಡೆ ಹೇಮಾವತಿ ನದಿ ಹರಿಯುತ್ತಿದೆ. ಯಗಚಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಬತ್ತಿ ಹೋಗಿದೆ. ಹೇಮಾವತಿ ನದಿಯಲ್ಲಿ ಅತಿ ಸಣ್ಣದಾಗಿ ನೀರು ಹರಿಯುತ್ತಿದೆ.

ಎಂದಿನಂತೆ ಮಳೆಯಾಗುತ್ತದೆ ಎಂಬ ಕಲ್ಪನೆಯಿಂದ ಮತ್ತು ಕಳೆದ ವರ್ಷ ಶುಂಠಿ ಬೆಲೆ ಅತ್ಯಧಿಕ ಆಗಿದ್ದರಿಂದ ಹಲವು ರೈತರು ಲಕ್ಷಗಟ್ಟಲೆ ಹಣ ಸಂಪಾದಿಸಿದರು. ಬೆಲೆ ಅಧಿಕವಾದ ಕಾರಣ ಪ್ರಸಕ್ತ ಸಾಲಿನಲ್ಲಿ ಶೇ 90 ಕ್ಕೂ ಹೆಚ್ಚು ರೈತರು ಶುಂಠಿ ನಾಟಿ ಮಾಡಲು ಮುಂದಾಗದ್ದಾರೆ.

ಕೆರೆಗಳಲ್ಲಿ ಸಂಗ್ರಹವಾಗಿದ್ದ ನೀರು ಹಾಗೂ ಕೊಳವೆ ಬಾವಿಯಲ್ಲಿರುವ ನೀರನ್ನು ನಂಬಿದ ಅನೇಕ ರೈತರು ಶುಂಠಿ ನಾಟಿ ಮಾಡಿದರು. ಹಣವಂತ ರೈತರು ಇತರೆ ರೈತರ ಭೂಮಿಯನ್ನು ಬಾಡಿಗೆಗೆ ಪಡೆದು ಶುಂಠಿ ನಾಟಿ ಮಾಡಿದ್ದಾರೆ.

ADVERTISEMENT

ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ಒಂದು ಹನಿ ಮಳೆಯಾಗದೇ ಕೆರೆಯಲ್ಲಿ ನೀರು ಖಾಲಿಯಾಗಿದೆ. ಕೊಳವೆ ಬಾವಿಯಲ್ಲಿ ನೀರು ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ದಿಕ್ಕು ತೋರದ ಅನೇಕ ರೈತರು ಕೊಳವೆಬಾವಿ ಕೊರೆಯುವುದರಲ್ಲಿ ತೊಡಗಿದ್ದಾರೆ.

ಯಗಚಿ ನದಿ ದಂಡೆಯಲ್ಲಿರುವ ಚಿಕ್ಕಕಣಗಾಲು, ಹೊಸಳ್ಳಿ, ಬಯಲಹಳ್ಳಿ, ಕಾಳೇನಹಳ್ಳಿ, ಉಮಾದೇವರಹಳ್ಳಿ, ತಿಮ್ಮನಹಳ್ಳಿ, ಜನ್ನಾಪುರ, ಹೊಳೆಬೆಳ್ಳೂರು, ಬಿಂಡಿ ತಿಮ್ಮನಹಳ್ಳಿ, ತೊರಳ್ಳಿ, ಹುಣಸವಳ್ಳಿ, ದೊಡ್ಡಕಣಗಾಲು, ದೊಡ್ಡಿಹಳ್ಳಿ, ಪಡವಳಲು ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ಸುಮಾರು 3ಸಾವಿರ ಎಕರೆ ಪ್ರದೇಶದಲ್ಲಿ ರೈತರು ಶುಂಠಿ ನಾಟಿ ಮಾಡಿದ್ದಾರೆ. ಹೇಮಾವತಿ ನದಿ ದಂಡೆಯಲ್ಲಿರುವ ಸಾವಿರಾರು ರೈತರು ಈಗಾಗಲೇ ಶುಂಠಿ ಮತ್ತು ಅಡಿಕೆ ಗಿಡ ನಾಟಿ ಮಾಡಿದ್ದಾರೆ. ಶುಂಠಿ ಮತ್ತು ಅಡಿಕೆ ಬೆಳೆಗೆ ಅಧಿಕವಾಗಿ ನೀರು ಬೇಕು. ಪ್ರತಿದಿನ ಕನಿಷ್ಠ ನಾಲ್ಕು ಬಾರಿ ನೀರು ಸಿಂಪಡಿಸಬೇಕು. ದಿನದಲ್ಲಿ ಒಂದು ಬಾರಿ ನೀರು ಸಿಂಪಡಿಸಲೂ ನೀರು ಇಲ್ಲವಾಗಿದೆ.

ಯಗಚಿ ನದಿಯಲ್ಲಿ ನೀರು ಹರಿವು ನಿಂತಿರುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೊಳವೆಬಾವಿ ಹುಡುಕಿಕೊಂಡು ಹೋಗಿ ದಾಹ ಇಂಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮಗಳಲ್ಲೂ ಕಲ್ಲು ಬಾವಿ, ಸೇದುವ ಬಾವಿಗಳಿದ್ದವು. ಕೊಳವೆ ಬಾವಿಗಳು ಸಂಖ್ಯೆ ಅಧಿಕವಾಗುತ್ತಿದ್ದಂತೆಯೇ ಬಾವಿಗಳಲ್ಲಿಯೂ ನೀರು ಇಂಗಿ ಹೋಗಿದೆ.

ತಾಲ್ಲೂಕಿಗೆ ಕಿರೀಟದಂತಿರುವ ವಾಟೆಹೊಳೆ ಜಲಾಶಯದಲ್ಲಿ ಉಪಯೋಗಿಸಿಕೊಳ್ಳಲಾರದ ಅತ್ಯಲ್ಪ ನೀರು ಉಳಿದಿದೆ. ಕುಡಿಯುವ ನೀರಿಗೆ ತೀವ್ರವಾಗಿ ಹಾಹಾಕಾರ ಎದುರಾದ ಸಂದರ್ಭದಲ್ಲಿ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ನೀರನ್ನು ನಾಲೆಯಲ್ಲಿ ಹರಿ ಬಿಟ್ಟಾಗ ಅಕ್ಕಪಕ್ಕದ ರೈತರು ಕೃಷಿಗೆ ಬಳಸಲು ಮುಂದಾಗುತ್ತಾರೆ. ಕುಡಿಯುವ ನೀರಿಗೆ ಹಾಹಾಕಾರ ಮುಂದುವರಿಯಲಿದೆ ಎನ್ನುತ್ತಾರೆ ರೈತರು.

‘ಸದ್ಯ ಕೊಳವೆ ಬಾವಿಗಳಲ್ಲಿ ದೊರಕುತ್ತಿರುವ ನೀರನ್ನು ಟ್ಯಾಂಕರ್ ಮೂಲಕ ಕುಡಿಯಲು ಸರಬರಾಜು ಮಾಡುತ್ತಿದ್ದೇವೆ. ಯಗಚಿ ನದಿಯಲ್ಲಿ ನೀರು ಬಿಟ್ಟ ಸಂದರ್ಭದಲ್ಲಿ ಕುಡಿಯುವ ನೀರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಜನಸಾಮಾನ್ಯರು ಸಹಕರಿಸಬೇಕು’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ರವರು.

ಜನರಿಗೆ ಕುಡಿಯಲು ಅಲ್ಪಸ್ವಲ್ಪ ನೀರು ಸಿಕ್ಕುತ್ತಿದ್ದರೂ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

ಚಿಕ್ಕಕಣಗಾಲು ಹೊಸಳ್ಳಿ ರೈತ ಆನಂದ್ ಅರರು ಜಾನುವಾರುಗಳನ್ನು ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಗುಂಡಿಗಳಲ್ಲಿ ನೀರು ಕುಡಿಸಲು ಕರೆದೊಯ್ಯುತ್ತಿರುವುದು.
ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಗಚಿ ನದಿಯಲ್ಲಿ ನೀರು ಹರಿಬಿಟ್ಟರೆ ಮಾತ್ರ ಜನ ಜಾನುವಾರುಗಳು ಸದ್ಯಕ್ಕೆ ಪ್ರಾಣ ಉಳಿಸಿಕೊಳ್ಳಬಹುದಾಗಿದೆ.
-ಸಿ.ಎಸ್. ನಾಗಭೂಷಣ ಚಿಕ್ಕಕಣಗಾಲು ಹೊಸಳ್ಳಿ ರೈತ
ಯಗಚಿ ನದಿಯಿಂದ ನೀರು ಬಿಡುವಂತೆ ಈಗಾಗಲೇ ಶಾಸಕರು ತಹಶೀಲ್ದಾರ್ ಮತ್ತು ನಾನು ಮೌಖಿಕವಾಗಿ ಮನವಿ ಮಾಡಿದ್ದೇವೆ. ತುರ್ತಾಗಿ ಪತ್ರ ಬರೆಯಲಾಗಿದೆ.
ಸ್ಟೀಫನ್ ಪ್ರಕಾಶ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.