ADVERTISEMENT

ಜೂನ್‌ ವೇಳೆಗೆ ವೇದಾವತಿ ಕೊಳ್ಳಕ್ಕೆ ನೀರು: ಸಚಿವ ರಮೇಶ್‌ ಜಾರಕಿಹೊಳಿ

ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಶೇ 90ರಷ್ಟು ಪೂರ್ಣ: ಸಚಿವ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 14:07 IST
Last Updated 22 ಜನವರಿ 2021, 14:07 IST
ಬೇಲೂರು ತಾಲ್ಲೂಕಿನ ಬೆಟ್ಟದಾಲೂರು ಬಳಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ವೀಕ್ಷಿಸಿದರು. ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‌, ಶಾಸಕರಾದ ಶಿವಲಿಂಗೇಗೌಡ, ಲಿಂಗೇಶ್‌ ಇದ್ದಾರೆ.
ಬೇಲೂರು ತಾಲ್ಲೂಕಿನ ಬೆಟ್ಟದಾಲೂರು ಬಳಿ ಎತ್ತಿನ ಹೊಳೆ ಯೋಜನೆ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ವೀಕ್ಷಿಸಿದರು. ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‌, ಶಾಸಕರಾದ ಶಿವಲಿಂಗೇಗೌಡ, ಲಿಂಗೇಶ್‌ ಇದ್ದಾರೆ.   

ಹಾಸನ: ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಶೇಕಡಾ 90ರಷ್ಟು ಪೂರ್ಣಗೊಂಡಿದ್ದು, ಜೂನ್‌ ವೇಳೆಗೆ ವೇದಾವತಿ ಕೊಳ್ಳಕ್ಕೆ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

ಬೇಲೂರು ತಾಲ್ಲೂಕಿನ ಬೆಟ್ಟದಾಲೂರಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ. ಬೈರಗೊಂಡ್ಲು ಜಲಾಶಯದ ಕಾಮಗಾರಿ ನಡೆಯದ ಕಾರಣ ಪ್ರಾಯೋಗಿಕವಾಗಿ ಈ ರೀತಿ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಭೂ ಸ್ವಾಧೀನ ಪರಿಹಾರಕ್ಕೆ ₹ 236 ಕೋಟಿ ಅಗತ್ಯವಿದ್ದು, ಈಗಾಗಲೇ ₹100 ಕೋಟಿ ಬಿಡುಗಡೆ ಮಾಡಲಾಗಿದೆ. ಬಾಕಿ ಹಣವನ್ನು ಶೀಘ್ರ ನೀಡಲಾಗುವುದು ಎಂದು ತಿಳಿಸಿದರು.

₹12,912 ಕೋಟಿ ವೆಚ್ಚದ ಯೋಜನೆ ಪೈಕಿ ಈಗಾಗಲೇ ₹7013 ಕೋಟಿ ವೆಚ್ಚವಾಗಿದೆ. ಉಳಿದ ಅನುದಾನವನ್ನು ಹಂತ ಹಂತವಾಗಿ ನೀಡಲಾಗುವುದು. ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಂಡಿದ್ದು, ಯೋಜನೆಗೆ ಭೂಮಿ ನೀಡಿದ ರೈತರಿಗೆ ನಿಯಮದ ಪ್ರಕಾರ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು.

ADVERTISEMENT

ನಿಯಮದ ಪ್ರಕಾರ ಅರಸೀಕೆರೆ 1.3 ಟಿಎಂಸಿ ನೀರು ನೀಡಲಾಗುವುದು. ಸಚಿವನಾದ ಬಳಿಕ ಎರಡು ಬಾರಿ ಭೂಮಿ ಪರಿಹಾರ ನೀಡಲಾಗಿದೆ. ಮುಂದಿನ ವಾರ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಬಾಕಿ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು. ಚಿಕ್ಕಬಳ್ಳಾಪುರ, ಕೊರಟಗೆರೆಯಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್‌, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್‌.ಲಿಂಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.