ADVERTISEMENT

ಎತ್ತಿನಹೊಳೆ: ಸೋರಿಕೆ ನೀರಿನ ‘ಪ್ರವಾಹ’

13 ಮನೆಗಳಿಗೆ ನುಗ್ಗಿದ ನೀರು: ಗ್ರಾಮಸ್ಥರ ಪ್ರತಿಭಟನೆ; ಉಪ ವಿಭಾಗಾಧಿಕಾರಿ ಭೇಟಿ

ಜಾನೆಕೆರೆ ಆರ್‌.ಪರಮೇಶ್‌
Published 2 ಡಿಸೆಂಬರ್ 2023, 23:59 IST
Last Updated 2 ಡಿಸೆಂಬರ್ 2023, 23:59 IST
ಸಕಲೇಶಪುರ ತಾಲ್ಲೂಕು ಹಾರ್ಲೆ ಕೂಡಿಗೆ ಬಳಿ ಎತ್ತಿನಹೊಳೆ ಪೈಪ್‌ನಿಂದ ನೀರು ಉಕ್ಕಿ ರಸ್ತೆಯಲ್ಲಿ ಹರಿಯಿತು ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್
ಸಕಲೇಶಪುರ ತಾಲ್ಲೂಕು ಹಾರ್ಲೆ ಕೂಡಿಗೆ ಬಳಿ ಎತ್ತಿನಹೊಳೆ ಪೈಪ್‌ನಿಂದ ನೀರು ಉಕ್ಕಿ ರಸ್ತೆಯಲ್ಲಿ ಹರಿಯಿತು ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್. ಪರಮೇಶ್   

ಸಕಲೇಶಪುರ (ಹಾಸನ ಜಿಲ್ಲೆ): ಎತ್ತಿನಹೊಳೆ ಯೋಜನೆ ಪೈಪ್‌ಲೈನ್‌ನಲ್ಲಿ ಶನಿವಾರ ಮತ್ತೆ ಭಾರಿ ಪ್ರಮಾಣದ ನೀರು ಪ್ರವಾಹದಂತೆ ಉಕ್ಕಿ ಹರಿದಿದ್ದು, 13 ಮನೆ, ರಸ್ತೆ, ಕಾಫಿ ತೋಟಗಳಿಗೆ ಹಾನಿ ಉಂಟಾಗಿದೆ.

ಯೋಜನೆಯ ಕಾಡಮನೆ ಚೆಕ್‌ಡ್ಯಾಂ 4 ಮತ್ತು 5ರಿಂದ ಪರೀಕ್ಷಾರ್ಥವಾಗಿ ಶನಿವಾರ ಮಧ್ಯಾಹ್ನ ಹರಿಸಿದ ನೀರು, ತಾಲ್ಲೂಕಿನ ಹಾರ್ಲೆ ಕೂಡಿಗೆ ಬಳಿ ಹಳ್ಳಿಮನೆ ಗ್ರಾಮದಲ್ಲಿ ಪ್ರವಾಹ ಸೃಷ್ಟಿಸಿತ್ತು. ನೀರು ರಭಸವಾಗಿ ಮನೆಯೊಳಕ್ಕೆ ನುಗ್ಗಿತ್ತು. ಮನೆ ಮುಂದೆ ಬಿಸಿಲಿಗೆ ಒಣಗಲು ಹಾಕಿದ್ದ ಕಾಫಿ ಬೀಜಗಳು ಕೊಚ್ಚಿಹೋದವು. ಹೂವಿನ ಕುಂಡಗಳು, ಅಂಗಳದಲ್ಲಿದ್ದ ಎಲ್ಲ ವಸ್ತುಗಳು, ನೀರಿನೊಂದಿಗೆ ತಗ್ಗು ಪ್ರದೇಶದತ್ತ ಹೋಗಿದ್ದವು.

ಎರಡು ಗಂಟೆ ರಭಸವಾಗಿ ನೀರು ನುಗ್ಗಿದ್ದರಿಂದ ಮನೆಗಳ ಗೋಡೆಗಳಿಗೆ, ತಳಪಾಯಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ಎಚ್‌.ಸಿ. ಮೋಹನ್‌ ಎಂಬವರು ಮರದ ಕೆಲಸ ಮಾಡುವ ಯಂತ್ರಗಳು, ಮರದ ನಾಟಾಗಳು, ಪೀಠೋಪಕರಣಗಳು ನೀರಿನಲ್ಲಿ ಮುಳುಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳ ಬಳಿ ಅಳಲು ತೋಡಿಕೊಳ್ಳುತ್ತಿದ್ದುದು ಕಂಡುಬಂತು.

ADVERTISEMENT
ಸಕಲೇಶಪುರ ತಾಲ್ಲೂಕು ಹಾರ್ಲೆ ಕೂಡಿಗೆ ಗ್ರಾಮಸ್ಥರು ಶನಿವಾರ ಪ್ರತಿಭಟಿಸಿದರು

ಮೋಹನ್‌, ರಾಜಮಣಿ, ರಾಧಾಕೃಷ್ಣ, ಸಜ್ಜು, ಎಸ್‌.ವಿ. ಮಂಜುನಾಥ್, ಯಮುನಾ, ಸೀತಮ್ಮ, ಚಂದ್ರಿಕಾ, ನಾರಾಯಣ ಅವರ ಮನೆಗಳು ಜಲಾವೃತಗೊಂಡಿದ್ದವು.

ಕಾಂಕ್ರೀಟ್‌ ರಸ್ತೆ ಹಾನಿ: 2 ಸಾವಿರ ಎಚ್‌.ಪಿ. ಪಂಪ್‌ನಿಂದ ಹರಿದ ನೀರು ಭೂಮಿಯೊಳಗಿದ್ದ ಪೈಪ್‌ನಿಂದ ಮೇಲೆ ಚಿಮ್ಮಿ, ಹಾರ್ಲೆ ಕೂಡಿಗೆ–ಕಾಡಮನೆ ಮುಖ್ಯ ರಸ್ತೆಯ ಒಳಭಾಗದಲ್ಲಿ 150 ಅಡಿ ಉದ್ದದ ಸುರಂಗವೇ ಸೃಷ್ಟಿಯಾಗಿದೆ.

ಬಸ್‌, ಲಾರಿ ಸೇರಿದಂತೆ ವಾಹನಗಳು ಈ ರಸ್ತೆಯಲ್ಲಿ ಚಲಿಸುವುದು ಅಪಾಯಕಾರಿಯಾಗಿದೆ. ರಸ್ತೆಯ ಮೇಲೂ ನೀರು ಹರಿದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ರಸ್ತೆಯ ಬದಿಯಲ್ಲಿ ಕೊರಕಲು ಉಂಟಾಯಿತು.

ಎತ್ತಿನಹೊಳೆ ನೀರು ಗೋಡೆ, ತಳಪಾಯಕ್ಕೆ ಭಾರಿ ರಭಸವಾಗಿ ನುಗ್ಗಿರುವುದರಿಂದ ಗೋಡೆಗಳು, ತಳಪಾಯ ಅಪಾಯದಲ್ಲಿದೆ. ಮಳೆಯಾದರೆ ಬಿದ್ದು ಹೋಗುತ್ತದೆ ಎನ್ನುವ ಆತಂಕ ಶುರುವಾಗಿದೆ
–ರಾಧಾ, ಸಂತ್ರಸ್ತೆ
ಸಕಲೇಶಪುರ ತಾಲ್ಲೂಕು ಹಾರ್ಲೆ ಕೂಡಿಗೆ ಬಳಿ ಎತ್ತಿನಹೊಳೆ ಪೈಪ್‌ನಿಂದ ಹರಿದ ನೀರು ಮನೆಯೊಂದಕ್ಕೆ ನುಗ್ಗಿತ್ತು

ಉಪ ವಿಭಾಗಾಧಿಕಾರಿ ಶ್ರುತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ, ಗ್ರಾಮಸ್ಥರ ಎದುರು ವಿಚಾರಣೆ ನಡೆಸಿದರು. ಮನೆಗಳಿಗೆ ಹಾಗೂ ಬೆಳೆಗಳಿಗೆ ಆಗಿರುವ ನಷ್ಟದ ವರದಿ ನೀಡುವಂತೆ ಸೂಚಿಸಿದರು.

ಪ್ರತಿಭಟನೆ: ಮನೆಗಳು, ರಸ್ತೆ, ಕಾಫಿ ತೋಟ ಸೇರಿದಂತೆ ಇಡೀ ಊರಿಗೆ ನೀರು ನುಗ್ಗಿರುವುದರಿಂದ ಆತಂಕಗೊಂಡ ಗ್ರಾಮಸ್ಥರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

‘ರಾತ್ರಿ ಮಲಗಿದ್ದಾಗ ಏನಾದರೂ ಈ ರೀತಿ ನೀರು ನುಗ್ಗಿದ್ದರೆ, ನಾವೆಲ್ಲಾ ಸಮಾಧಿ ಆಗುತ್ತಿದ್ದೆವು. ನಾವೆಲ್ಲಾ ಕಾರ್ಮಿಕರು. ಬಡವರು ಕಷ್ಟಪಟ್ಟು ಒಂದು ಮನೆ ಕಟ್ಟಿಕೊಂಡಿದ್ದೇವೆ. ಎಲ್ಲಿಗೋ ನೀರು ಬಿಡುತ್ತೇವೆಂದು ನಮ್ಮನ್ನೆಲ್ಲಾ ಹಾಳು ಮಾಡಿಬಿಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೈಪ್‌ಲೈನ್ ಉದ್ದಕ್ಕೂ ಸೋರಿಕೆ ಆಗುತ್ತಿದೆ. ಒಂದು ಪಂಪ್‌ನಿಂದ ನೀರು ಹರಿಸಿ ಇಷ್ಟು ನಷ್ಟ ಉಂಟಾಗಿದೆ. ಈಗ ಆಗಿರುವ ನಷ್ಟವನ್ನು ಗುತ್ತಿಗೆ ನೀಡಿದ ಕಂಪನಿಯಿಂದಲೇ ಕೊಡಿಸಬೇಕು
–ಕ್ಯಾನಗಳ್ಳಿ ಸುಬ್ರಹ್ಮಣ್ಯ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ
ಸಕಲೇಶಪುರ ತಾಲ್ಲೂಕು ಹಾರ್ಲೆ ಕೂಡಿಗೆ ಬಳಿ ಎತ್ತಿನಹೊಳೆ ಪೈಪ್‌ನಿಂದ ಹರಿದ ನೀರು ಮನೆಗೆ ನುಗ್ಗಿತು
ಉಪ ಮುಖ್ಯಮಂತ್ರಿ ಅವರು ಚುನಾವಣಾ ಗಿಮಿಕ್‌ಗಾಗಿ ತರಾತುರಿಯಲ್ಲಿ ನೀರು ಹರಿಸಿ 13 ಮನೆಗಳು ರಸ್ತೆ ಕಾಫಿ ತೋಟ ಆಸ್ತಿಗೆ ಹಾನಿ ಮಾಡಿದ್ದಾರೆ
–ಎಚ್‌.ಕೆ. ಕುಮಾರಸ್ವಾಮಿ, ಮಾಜಿ ಶಾಸಕ

ಎತ್ತಿನಹೊಳೆ ಯೋಜನೆಯಿಂದ ಆಗುತ್ತಿರುವ ಹಾನಿಯನ್ನು ಗ್ರಾಮಸ್ಥರು ಉಪ ವಿಭಾಗಾಧಿಕಾರಿ ಶ್ರುತಿ ಅವರಿಗೆ ತಿಳಿಸಿದರು

ದುರಸ್ತಿ ಮಾಡುವವರೆಗೆ ನೀರು ಹರಿಸದಂತೆ ಸೂಚನೆ ನೀಡಿದ್ದರೂ ಏಕಾಏಕಿ ನೀರು ಹರಿಸಲಾಗಿದೆ. ಕಾಂಗ್ರೆಸ್‌ ಸರ್ಕಾರದ ದಬ್ಬಾಳಿಕೆ ವಿರುದ್ಧ ಜನರೊಂದಿಗೆ ಹೋರಾಟ ನಡೆಸಲಾಗುವುದು
–ಸಿಮೆಂಟ್ ಮಂಜು, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.