ADVERTISEMENT

ಹಾವೇರಿ: ಉಪ ತಹಶೀಲ್ದಾರ್‌ ಸೇರಿ 13 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 288ಕ್ಕೆ ಏರಿಕೆಯಾದ ಪ್ರಕರಣಗಳು: ಕನವಳ್ಳಿಯ 45 ವರ್ಷದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 15:21 IST
Last Updated 11 ಜುಲೈ 2020, 15:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಉಪತಹಶೀಲ್ದಾರ್, ಇಬ್ಬರು ಗರ್ಭಿಣಿಯರು, ಪೊಲೀಸ್ ಕಾನ್‌ಸ್ಟೆಬಲ್‌, ಸ್ಟೆನೊ ಸೇರಿದಂತೆ ಶನಿವಾರ ಜಿಲ್ಲೆಯ 13 ಮಂದಿಗೆ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕನವಳ್ಳಿ ಮಹಿಳೆ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 288 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಈ ಪೈಕಿ 134 ಮಂದಿ ಸೋಂಕಿನಿಂದ ಈವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 150 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಶನಿವಾರ ದೃಢಪಟ್ಟ ಪ್ರಕರಣಗಳ ಪೈಕಿ ಹಾವೇರಿ ತಾಲ್ಲೂಕಿನಲ್ಲಿ 4, ಬ್ಯಾಡಗಿ ತಾಲ್ಲೂಕಿನಲ್ಲಿ 6, ಹಾನಗಲ್ ತಾಲ್ಲೂಕಿನಲ್ಲಿ 2 ಹಾಗೂ ಶಿಗ್ಗಾವಿ ತಾಲ್ಲೂಕಿನಲ್ಲಿ 1 ಪ್ರಕರಣಗಳು ಪಾಸಿಟಿವ್ ಬಂದಿವೆ.

ಸೋಂಕಿತರ ವಿವರ:ಬ್ಯಾಡಗಿ ತಾಲ್ಲೂಕಿನ ಮೊಟೇಬೆನ್ನೂರಿನ 35 ವರ್ಷದ ಪುರುಷ (ಎಚ್.ವಿ.ಆರ್-276), ಕಾಗಿನೆಲೆ ಗ್ರಾಮದವರಾದ 27 ವರ್ಷದ ಮಹಿಳೆ (ಎಚ್.ವಿ.ಆರ್ -279), 37 ವರ್ಷದ ಪುರುಷ (ಎಚ್.ವಿ.ಆರ್ -280), 32 ವರ್ಷದ ಪುರುಷ (ಎಚ್.ವಿ.ಆರ್ 281), 6 ವರ್ಷದ ಬಾಲಕಿ (ಎಚ್.ವಿ.ಆರ್ 282), 28 ವರ್ಷದ ಪುರುಷ (ಎಚ್.ವಿ.ಆರ್ -286) , ಹಾವೇರಿ ನಗರದ 31 ವರ್ಷದ ಪುರುಷ (ಎಚ್.ವಿ.ಆರ್-278), 38 ವರ್ಷದ ಪುರುಷ (ಎಚ್.ವಿ.ಆರ್-284), ಗುತ್ತಲದ 40 ವರ್ಷದ ಪುರುಷ (ಎಚ್.ವಿ.ಆರ್-285) ಹಾಗೂ ಕನವಳ್ಳಿಯ 45 ವರ್ಷದ ಮಹಿಳೆ (ಎಚ್.ವಿ.ಆರ್-288), ಹಾನಗಲ್ ತಾಲ್ಲೂಕು ಅಕ್ಕಿಆಲೂರಿನ 21 ವರ್ಷದ ಗರ್ಭಿಣಿ (ಎಚ್.ವಿ.ಆರ್-277) ಹಾಗೂ ಹಾನಗಲ್ ನಗರದ 30 ವರ್ಷದ ಗರ್ಭಿಣಿ (ಎಚ್.ವಿ.ಆರ್-283) ಹಾಗೂ ಶಿಗ್ಗಾವಿಯ 74 ವರ್ಷದ ಪುರುಷ (ಎಚ್.ವಿ.ಆರ್-287) ಸೇರಿ 13 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ.

ADVERTISEMENT

ಕಾನ್‌ಸ್ಟೆಬಲ್‌ಗೆ ಸೋಂಕು:ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸುತ್ತಿರುವ 31 ವರ್ಷದ ಪುರುಷ (ಎಚ್.ವಿ.ಆರ್-278) ನಗರದ ಪೊಲೀಸ್ ಕ್ವಾಟರ್ಸ್‍ನಲ್ಲಿ ವಾಸವಾಗಿದ್ದು, ಪಿ-19943ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜುಲೈ 6ರಂದು ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಜುಲೈ 10ರಂದು ಪಾಸಿಟಿವ್ ಬಂದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾನಗಲ್ ಉಪತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿರುವ 38 ವರ್ಷದ ಪುರುಷ (ಎಚ್.ವಿ.ಆರ್-284) ಹಾವೇರಿ ನಗರದ ಉರ್ದು ಶಾಲಾ ಹಿಂಭಾಗದಲ್ಲಿ ವಾಸವಾಗಿದ್ದು, ಪಿ-31795ರ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಜುಲೈ 6ರಂದು ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಜುಲೈ 10ರಂದು ಪಾಸಿಟಿವ್ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾನಗಲ್ ಸಿವಿಲ್ ನ್ಯಾಯಾಲಯದಲ್ಲಿ ಸ್ಟೆನೋಗ್ರಾಫರ್‌ ಆಗಿ ಕೆಲಸ ಮಾಡುತ್ತಿರುವ ಮೂಲತಃಬ್ಯಾಡಗಿ ತಾಲ್ಲೂಕು ಕಳಕೊಂಡ ಗ್ರಾಮದ 28 ವರ್ಷದ ಪುರುಷ (ಎಚ್.ವಿ.ಆರ್.-286) ಐದು ದಿನಗಳ ಹಿಂದೆ ಬೆಂಗಳೂರಿಗೆ ಪ್ರಯಾಣಿಸಿದ ಮಾಹಿತಿ ಹೊಂದಿರುತ್ತಾನೆ. ಜ್ವರದಿಂದ ಬಳಲುತ್ತಿರುವ ಕಾರಣ ಜುಲೈ 7 ರಂದು ಗಂಟಲು ಮಾದರಿ ಪರೀಕ್ಷೆ ನಡೆಸಲಾಗಿತ್ತು. ಜುಲೈ 10ರಂದು ರಾತ್ರಿ ಪಾಸಿಟಿವ್ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಣೆಬೆನ್ನೂರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಸಾವು:ಕನವಳ್ಳಿಯ 45 ವರ್ಷದ ಮಹಿಳೆ (ಎಚ್.ವಿ.ಆರ್.-288) ಪಿ-23227ರ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಜುಲೈ 2ರಂದು ಗಂಟಲು ದ್ರವ ಪರೀಕ್ಷೆ ಮಾಡಿಸಲಾಗಿತ್ತು. ಜುಲೈ 3 ರಂದು ಹುಬ್ಬಳ್ಳಿ ಕಿಮ್ಸ್‌ಗೆ ತೆರಳಿ ಚಿಕಿತ್ಸೆ ಪಡೆದು ಹಿಂದಿರುಗಿದ್ದರು. ಅಂದು ಈ ಮಹಿಳೆಗೆ ಪಾಸಿಟಿವ್ ದೃಢಪಟ್ಟಿತ್ತು. ಜುಲೈ 4ರಂದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 10ರಂದು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.