ADVERTISEMENT

363 ಕಾರ್ಮಿಕರಿಗೆ ಸಿಗದ ‘ಶ್ರಮ ಸಮ್ಮಾನ’

ಮೂರು ಜಿಲ್ಲೆಗಳಲ್ಲಿ ನಡೆಯದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಸಿದ್ದು ಆರ್.ಜಿ.ಹಳ್ಳಿ
Published 1 ಅಕ್ಟೋಬರ್ 2020, 3:43 IST
Last Updated 1 ಅಕ್ಟೋಬರ್ 2020, 3:43 IST
ಅಸಂಘಟಿತ ವಲಯಕ್ಕೆ ಸೇರುವ ಚಿಂದಿ ಆಯುವವರು (ಸಾಂದರ್ಭಿಕ ಚಿತ್ರ)
ಅಸಂಘಟಿತ ವಲಯಕ್ಕೆ ಸೇರುವ ಚಿಂದಿ ಆಯುವವರು (ಸಾಂದರ್ಭಿಕ ಚಿತ್ರ)   

ಹಾವೇರಿ: ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ 363 ಅಸಂಘಟಿತ ಕಾರ್ಮಿಕರನ್ನು ಪ್ರಸಕ್ತ ವರ್ಷ ಕಾರ್ಮಿಕ ಇಲಾಖೆಯಿಂದ ‘ಶ್ರಮ ಸಮ್ಮಾನ’ ವಿಶೇಷ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಮಾರ್ಚ್‌ನಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ 7 ತಿಂಗಳು ಕಳೆದರೂ ಇನ್ನೂ ಕಾಲ ಕೂಡಿ ಬಂದಿಲ್ಲ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ‘ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ’ಯಡಿ ‘ಶ್ರಮ ಸಮ್ಮಾನ ಹಾಗೂ ವಿಶೇಷ ಪುರಸ್ಕಾರ ಪ್ರಶಸ್ತಿ’ಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೇಲರ್‌ಗಳು, ಮೆಕ್ಯಾನಿಕ್‌, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಮತ್ತು ಭಟ್ಟಿ ಕಾರ್ಮಿಕರು ಸೇರಿ 11 ಅಸಂಘಟಿತ ವಲಯಗಳು ಬರುತ್ತವೆ.

ಪ್ರಶಸ್ತಿಗೆ ಜನವರಿಯಲ್ಲಿ ಅರ್ಜಿಯನ್ನು ಕರೆಯಲಾಗಿತ್ತು. ಹಾವೇರಿಯಲ್ಲಿ 250ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. 121 ಅಂತಿಮಗೊಳಿಸಿ, ಪೊಲೀಸ್‌ ವೆರಿಫಿಕೇಷನ್‌ಗೂ ಕಳುಹಿಸಲಾಗಿತ್ತು. ಪಟ್ಟಿ ಸಿದ್ಧವಾಗಿದ್ದರೂ ಪ್ರಶಸ್ತಿ ಪ್ರದಾನಕ್ಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

11 ಅಸಂಘಟಿತ ವಲಯಗಳಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ, ಪ್ರತಿ ವಲಯದಲ್ಲಿ 11 ಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 121 ಕಾರ್ಮಿಕರನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಕಾರ್ಮಿಕ ಸಮ್ಮಾನ’ ದಿನಾಚರಣೆ ಆಯೋಜಿಸಿ ಸನ್ಮಾನಿಸಲಾಗುತ್ತಿತ್ತು. ಪ್ರಥಮ ಪ್ರಶಸ್ತಿಗೆ ₹15 ಸಾವಿರ ಮೌಲ್ಯದ ಚಿನ್ನದ ಪದಕ, ದ್ವಿತೀಯ ಪ್ರಶಸ್ತಿಗೆ ₹10 ಸಾವಿರ ಮೌಲ್ಯದ ಬೆಳ್ಳಿಯ ಪದಕ ಹಾಗೂ ತೃತೀಯ ಪ್ರಶಸ್ತಿಗೆ ₹8 ಸಾವಿರ ಮೌಲ್ಯದ ಬೆಳ್ಳಿಯ ಪದಕ, ಪ್ರಶಂಸಾ ಪತ್ರಗಳನ್ನು ನೀಡಲಾಗುತ್ತಿತ್ತು.

ಪ್ರತಿ ವಲಯದಲ್ಲಿ 8 ಕಾರ್ಮಿಕರಿಗೆ ₹1 ಸಾವಿರ ನಗದು ಹಾಗೂ ಪ್ರಶಂಸಾ ಪತ್ರವನ್ನೊಳಗೊಂಡ ‘ವಿಶೇಷ ಪುರಸ್ಕಾರ’ ನೀಡಿ ವೃತ್ತಿಯನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಈ ವರ್ಷವೂ ಮೂರು ಜಿಲ್ಲೆಗಳಲ್ಲಿ 363 ಕಾರ್ಮಿಕರ ಪಟ್ಟಿ ಅಂತಿಮಗೊಳಿಸಿ, ಮಾರ್ಚ್‌ 1ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಕಾರಣಾಂತರದಿಂದ ಕಾರ್ಯಕ್ರಮ ಮುಂದೂಡಲಾಯಿತು. ಲಾಕ್‌ಡೌನ್‌ ಘೋಷಣೆಯಾದ‌ ಕಾರಣ ಸಮಾರಂಭ ನಡೆಯಲಿಲ್ಲ ಎನ್ನುತ್ತಾರೆ ಕಾರ್ಮಿಕ ಇಲಾಖೆ ನೌಕರರು.

ಸಚಿವರ ನಿರ್ಧಾರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಕ್ಷೇತ್ರವಾದ ಯಲ್ಲಾಪುರದಲ್ಲಿ, ಮೂರು ಜಿಲ್ಲೆಗಳಲ್ಲಿ ಆಯ್ಕೆಯಾದ ಅಸಂಘಟಿತ ಕಾರ್ಮಿಕರಿಗೆ ಒಟ್ಟಿಗೆ ಪ್ರಶಸ್ತಿ ಪ್ರದಾನ ಮಾಡಲು ಸಚಿವರು ನಿರ್ಧರಿಸಿದ್ದಾರೆ. ಆದರೆ, ಕೋವಿಡ್‌ ಕಾರಣದಿಂದ ಕಾರ್ಯಕ್ರಮ ಆಯೋಜಿಸಲು ತೊಡಕಾಗುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.