ADVERTISEMENT

ತುಂಗಭದ್ರಾ ನದಿಗೆ ತಾತ್ಕಾಲಿಕ ತಡೆಗೋಡೆ: ನದಿ ನೀರು ಸಂಗ್ರಹಕ್ಕೆ ನಗರಸಭೆ ಸಜ್ಜು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 8:21 IST
Last Updated 8 ಏಪ್ರಿಲ್ 2024, 8:21 IST
ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನೀರು ಸಂಗ್ರಹಿಸಲು ನಗರಸಭೆಯಿಂದ ತಾತ್ಕಾಲಿಕವಾಗಿ ಮರಳಿನ ಚೀಲದ ತಡೆಗೋಡೆಯನ್ನು ನಿರ್ಮಿಸುತ್ತಿದ್ದಾರೆ
ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನೀರು ಸಂಗ್ರಹಿಸಲು ನಗರಸಭೆಯಿಂದ ತಾತ್ಕಾಲಿಕವಾಗಿ ಮರಳಿನ ಚೀಲದ ತಡೆಗೋಡೆಯನ್ನು ನಿರ್ಮಿಸುತ್ತಿದ್ದಾರೆ   

ರಾಣೆಬೆನ್ನೂರು: ಮುಂಗಾರು ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ ಮತ್ತು ಕುಮದ್ವತಿ ನದಿ ನೀರು ಸಂಪೂರ್ಣ ಬರಿದಾಗಿದ್ದರಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನಗರಸಭೆಯ 24X7 ಯೋಜನೆ ಸ್ಥಗಿತಗೊಳಿಸಲಾಗಿತ್ತು. ಗ್ರಾಮೀಣ ಪ್ರದೇಶ ಮತ್ತು ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಬೋರ್‌ವೆಲ್‌ ನೀರೇ ಗತಿಯಾಗಿತ್ತು. ಸುತ್ತಮುತ್ತಲಿನ ಎಲ್ಲ ಕೆರೆ ಕಟ್ಟೆಗಳು ಕೂಡ ಬರಿದಾಗಿದ್ದವು. ಕಳೆದ ಬಾರಿ ಸಕಾಲಕ್ಕೆ ಮಳೆಯಾಗದೆ ರೈತರು ಹಾಗೂ ನಾಗರಿಕರು ನೀರಿನ ತೊಂದರೆ ಅನುಭವಿಸಿದ್ದರು.

ನಗರದ ಸಂಜೀವಿನಿಯಾಗಿದ್ದ ಕೊಟ್ಟೂರೇಶ್ವರಮಠದ ಸಮೀಪದ ದೊಡ್ಡಕೆರೆ ಪೂರ್ಣ ಬತ್ತಿ ಹೋಗಿದ್ದರಿಂದ ನಗರದ ವ್ಯಾಪ್ತಿಯ ಬೋರ್ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ತುಂಗಭದ್ರಾ ನದಿಯನ್ನೇ ನಗರಸಭೆಯವರು ನೀರಿನ ಮೂಲಕ್ಕಾಗಿ ಅವಲಂಬಿಸಬೇಕಾಗಿದೆ.

ನದಿ ನೀರು ಸಂಪೂರ್ಣ ಕಾಲಿಯಾಗಿದ್ದರಿಂದ ಗ್ರಾಮೀಣ ಪ್ರದೇಶಗಳಿಗೆ ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಂದಾಗಿದ್ದವು. ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಇಲಾಖೆ ಅಧಿಕಾರಿಗಳು ಬಹುಗ್ರಾಮ ನೀರು ಪೂರೈಕೆಯ ನೀರು ಸಂಗ್ರಹಿಸುವಲ್ಲಿ ಮಷಿನರಿ ದುರಸ್ಥಿ ಮತ್ತು ವಾರ್ಷಿಕ ನಿರ್ವಹಣೆಗೆ ಮುಂದಾಗಿದ್ದರು.

ADVERTISEMENT

ಜನತೆಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದಕ್ಕೆ ವಿವಿಧ ಸಂಘಟನೆಗಳು ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದವು. ಕೂಡಲೇ ಶಾಸಕ ಪ್ರಕಾಶ ಕೋಳಿವಾಡ ಅವರು ಸರ್ಕಾರಕ್ಕೆ ಮನವಿ ಮಾಡಿ ಭದ್ರಾ ಆಣೆಕಟ್ಟಿನಿಂದ 2 ಟಿಎಂಸಿ ನೀರು ಬಿಡಿಸಿದ್ದಕ್ಕಾಗಿ ಈಗ ನದಿಗೆ ನೀರು ಬಂದಿದೆ.

ಕುಡಿಯುವ ನೀರಿಗೆ ಮುಂಜಾಗೃತ ಕ್ರಮವಾಗಿ ಮುಂದಿನ ಎರಡು ತಿಂಗಳಿಗೆ ಆಗುವಷ್ಟು ನೀರನ್ನು ಸಂಗ್ರಹಿಸುವ ದೊಡ್ಡ ಸಾಧನೆಗೆ ನಗರಸಭೆ ಮುಂದಾಗಿದೆ. ಏ.1 ಒಂದರಿಂದ ಮತ್ತೆ ನಗರಕ್ಕೆ ನಿರಂತರ ನೀರು ಪೂರೈಕೆ ಆರಂಭವಾಗಿದೆ. ನೀರನ್ನು ಕುದಿಸಿ ಆರಿಸಿ ಕುಡಿಯಬೇಕು ಹಿತಮಿತವಾಗಿ ಬಳಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನೀರಿಲ್ಲದೆ ಪೂರ್ಣವಾಗಿ ಬತ್ತಿದ್ದ ತುಂಗಭದ್ರ ನದಿಗೆ ಭದ್ರಾ ಡ್ಯಾಮ್ ನಿಂದ ಮಾ.29 ರಿಂದ ಏಪ್ರಿಲ್ 6 ರವರೆಗೆ ಪ್ರತಿದಿನ 3000 ಕ್ಯೂಸೆಕ್ಸ ನೀರು ಸೇರಿದಂತೆ ಒಟ್ಟು ಎರಡು ಟಿಎಂಸಿ ನೀರನ್ನು ಬಿಡಲಾಗಿದೆ.

ನಗರದ ಜನತೆ 24X7 ನೀರಿನ ಯೋಜನೆ ಸ್ಥಗಿತಗೊಂಡಿದ್ದರಿಂದ ಕಳೆದ 15 ದಿನಗಳಿಂದ ನಗರದ ನಾಗರಿಕರು ನೀರಿಗಾಗಿ ಹಾಹಾಕಾರ ಅನುಭವಿಸಿದ್ದರು. ಈಗ ತುಂಗಭದ್ರಗೆ ನೀರು ಹರಿದು ಬಂದಿದ್ದರಿಂದ ಜನತೆ ನಿಟ್ಟುಸಿರು ಬಿಟ್ಟಂತಾಗಿದೆ.

ಬೇಸಿಗೆ ಇನ್ನು ಎರಡು ಮೂರು ತಿಂಗಳು ಇರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ತಾಲ್ಲೂಕಿನ ಮುದೇನೂರು ಬಳಿ ಮರಳಿನ ಚೀಲದಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸುವ ಕಾರ್ಯ ಭರದಿಂದ ಸಾಗಿದೆ ಎಂದು ನಗರಸಭೆ ವಾಟರ್‌ ಸಪ್ಲೈ ಎಂಜಿನಿಯರ್‌ ಸುರೇಶ ಚಲವಾದಿ ತಿಳಿಸಿದರು.

ನಗರಸಭೆಯಿಂದ ಈಗಾಗಲೇ ನಗರದ ಜನತೆಗೆ ನಿರಂತರ ನೀರು ಪೂರೈಕೆ ಮಾಡುತ್ತಿದ್ದಾರೆ. ಮುದೇನೂರು ಬಳಿ ಇರುವ ಜಾಕ್ ವೆಲ್ ಹತ್ತಿರ ತುಂಗಭದ್ರ ನದಿಗೆ ಅಡ್ಡಲಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ಬ್ಯಾಡಗಿ ಮತ್ತು ನಗರಸಭೆ ರಾಣೆಬೆನ್ನೂರು ಇವರ ಆಶ್ರಯದಲ್ಲಿ ₹ 10 ಲಕ್ಷ ಅನುದಾನ ಖರ್ಚು ಮಾಡಿ ಮುದೇನೂರು ಬಳಿ ಮರಳಿನ ಚೀಲದಿಂದ 350 ಪೂಟ್‌ ಉದ್ದ, ತಳಪಾಯ 20 ಪೂಟ್‌ ಮತ್ತು 15 ಪೂಟ್‌ ಎತ್ತರದ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಎರಡೂ ಪಟ್ಟಣಕ್ಕೆ ಇಲ್ಲಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರಿಂದ ನಾಗರಿಕರಿಗೆ ನೀರಿನ ಅಭಾವವಾಗದಂತೆ ನಗರಸಭೆಯು ಮುಂದಾಗಿರುವುದಕ್ಕೆ ನಗರದ ನಾಗರಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಪೂರೈಸುವ ನದಿ ನೀರನ್ನು ಸಾರ್ವಜನಿಕರು ಕಡ್ಡಾಯವಾಗಿ ಕುದಿಸಿ ಆರಿಸಿ ಕುಡಿಯಬೇಕು ಎಂದು ನಗರಸಭೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ನೀರು ಸಂಗ್ರಹಿಸಲು ನಗರಸಭೆಯಿಂದ ತಾತ್ಕಾಲಿಕವಾಗಿ ಮರಳಿನ ಚೀಲದ ತಡೆಗೋಡೆಯನ್ನು ನಿರ್ಮಿಸುತ್ತಿದ್ದಾರೆ.
‘ಎರಡೂ ಪಟ್ಟಣಕ್ಕೆ ನೀರು’
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ಬ್ಯಾಡಗಿ ಮತ್ತು ನಗರಸಭೆ ರಾಣೆಬೆನ್ನೂರು ಇವರ ಆಶ್ರಯದಲ್ಲಿ ₹10 ಲಕ್ಷ ಅನುದಾನ ಖರ್ಚು ಮಾಡಿ ಮುದೇನೂರು ಬಳಿ ಮರಳಿನ ಚೀಲದಿಂದ 350 ಪೂಟ್‌ ಉದ್ದ ತಳಪಾಯ 20 ಪೂಟ್‌ ಮತ್ತು 15 ಪೂಟ್‌ ಎತ್ತರದ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಲಾಗುತ್ತಿದೆ. ಎರಡೂ ಪಟ್ಟಣಕ್ಕೆ ಇಲ್ಲಿಂದಲೇ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ಪೌರಾಯುಕ್ತರು ಎನ್‌.ಎಚ್‌. ಕುಮ್ಮಣ್ಣವನರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.