ADVERTISEMENT

ಸವೆದ ಬೆರಳಚ್ಚು | ಹಲವು ವೃದ್ಧರ ಮಾಸಾಶನ ಬಂದ್: ಹಿರಿಯ ಜೀವಗಳ ಕಣ್ಣೀರು

ಸಂತೋಷ ಜಿಗಳಿಕೊಪ್ಪ
Published 2 ಫೆಬ್ರುವರಿ 2026, 5:32 IST
Last Updated 2 ಫೆಬ್ರುವರಿ 2026, 5:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ‘ಯಪ್ಪಾ... ನನಗ್ ಬರ್ತಾ ಇದ್ದ ಮಾಸಾಶನ ವರ್ಷದಿಂದ ಬರ್ತಾ ಇಲ್ಲ. ತಹಶೀಲ್ದಾರ್ ಕಚೇರಿಗೆ ಹೋಗಿ ಕೇಳಿದ್ರ, ನಿನ್ನ ಆಧಾರ್ ಕೈ ಬೆರಳಿನ ರೇಖೆ ಬರ್ತಾ ಇಲ್ಲ. ಕಣ್ಣು ಸ್ಕ್ಯಾನ್‌ ಆಗ್ತಾ ಇಲ್ಲ ಅಂತಾ ಹೇಳಾಕತಾರ್. ಆಧಾರ್ ಕೇಂದ್ರದ ಸಿಬ್ಬಂದಿ ಕೇಳಿದ್ರ, ಬೆಂಗಳೂರಿಗೆ ಹೋಗಿ ಮಾಡಿಸಿಕೊಂಡು ಬರ್ರಿ ಅಂತಾರ್. ವಯಸ್ಸಾದ ನಾನು ಅಲ್ಲಿಗೆ ಹೆಂಗ್ ಹೋಗಿ ಬರಬೇಕ್. ಕೈ–ಕಾಲು ನಡಗ್ತಾವ್. ಕಣ್ಣು ಸರಿಯಾಗಿ ಕಾಣಿಸಲ್ಲ. ನನಗ್ ಇಲ್ಲೇ ಪರಿಹಾರ ಕೊಡಿಸಿ ಪುಣ್ಯ ಕಟ್ಕೊರೀ ...’

ಇದು, ಹಾವೇರಿ ತಾಲ್ಲೂಕಿನ ಕೋಡಬಾಳ ಗ್ರಾಮದ 85 ವರ್ಷದ ವೃದ್ಧೆ ಪಾರ್ವತೆಮ್ಮ ರುದ್ರಗೌಡ ಲಿಂಗನಗೌಡ್ರ ಅವರ ಅಳಲು. ಸಂಧ್ಯಾ ಸುರಕ್ಷಾ ಯೋಜನೆಯಡಿ ಅವರಿಗೆ ಬರುತ್ತಿದ್ದ ಮಾಸಾಶನ ಒಂದು ವರ್ಷದಿಂದ ಬಂದ್ ಆಗಿದೆ. ಆಧಾರ್ ಕಾರ್ಡ್ ಮೂಲಕ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ ಸ್ಕ್ಯಾನ್ ಆಗದಿದ್ದಕ್ಕೆ ಅವರಿಗೆ ಮಾಸಾಶನ ದೊರೆಯುತ್ತಿಲ್ಲ.

ತಮ್ಮ ಸಮಸ್ಯೆ ಪರಿಹರಿಸುವಂತೆ ಪಾರ್ವತೆಮ್ಮ ಅವರು ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ‘ಆಧಾರ್ ಕಾರ್ಡ್ ಸರಿ ಇದ್ದರೆ ಮಾತ್ರ ಮಾಸಾಶನ’ ಎಂದು ಎರಡೂ ಕಚೇರಿಯಲ್ಲಿಯೂ ಅಧಿಕಾರಿಗಳು ಹೇಳಿ ಕಳುಹಿಸುತ್ತಿದ್ದಾರೆ.

ADVERTISEMENT

‘ಬೆಂಗಳೂರಿನಲ್ಲಿರುವ ಕಚೇರಿಗೆ ಹೋಗಿ ಆಧಾರ್ ಸರಿಪಡಿಸಿಕೊಂಡು ಬನ್ನಿ’ ಎಂದು ಸಲಹೆ ನೀಡುತ್ತಿದ್ದಾರೆ. ಅನಕ್ಷರಸ್ಥರಾಗಿರುವ ಪಾರ್ವತೆಮ್ಮ, 85ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಹೋಗಿ ಬರುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

ವಿದ್ಯಾವಂತರೆನಿಸಿಕೊಂಡು ಸರ್ಕಾರಿ ಅಧಿಕಾರಿಯಾದವರು, ವೃದ್ಧೆಗೆ ಸಿಗಬೇಕಾದ ಅರ್ಹ ಯೋಜನೆಯ ಲಾಭವನ್ನೂ ಕೊಡಿಸುತ್ತಿಲ್ಲ. ಹಾವೇರಿ ತಹಶೀಲ್ದಾರ್ ಶರಣಮ್ಮ ಸಹ, ವೃದ್ಧೆಯ ಸಮಸ್ಯೆ ಬಗೆಹರಿಸದೇ ಕೈ ಎತ್ತಿದ್ದಾರೆ. ನೊಂದ ವೃದ್ಧೆ ಪಾರ್ವತೆಮ್ಮ, ಮಾಸಾಶನ ಕೊಡಿಸುವಂತೆ ಹಿರಿಯ ನಾಗರಿಕರ ಸಹಾಯವಾಣಿ ಅನುಭವ ಮಂಟಪಕ್ಕೆ ಮೊರೆ ಹೋಗಿದ್ದಾರೆ. ಸಹಾಯವಾಣಿಯಿಂದ ಬಂದ ಮಾಹಿತಿಗೂ ಶರಣಮ್ಮ ಸ್ಪಂದಿಸಿಲ್ಲ. ‘ಆಧಾರ್ ಸರಿಪಡಿಸಿಕೊಂಡು ಬನ್ನಿ’ ಎಂಬ ಸಿದ್ಧ ಉತ್ತರ ಹೇಳಿ ವೃದ್ಧೆಯನ್ನು ಸಾಗಹಾಕಿದ್ದಾರೆ ಎಂಬ ಆರೋಪವಿದೆ. 

ಇದು ಕೇವಲ ಪಾರ್ವತೆಮ್ಮ ಸಮಸ್ಯೆಯಲ್ಲ. ಜಿಲ್ಲೆಯ ಹಲವು ವೃದ್ಧರು, ಆಧಾರ್ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ (ಬಣ್ಣದ ಭಾಗ) ಸಮಸ್ಯೆ ಎದುರಿಸುತ್ತಿದ್ದಾರೆ. ಅರ್ಹರಿದ್ದರೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಮಕ್ಕಳಿಂದ ದೂರವಾಗಿ ಯಾರ ಪೋಷಣೆಯೂ ಇಲ್ಲದೇ ಹಲವು ವೃದ್ಧರು ಜಿಲ್ಲೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ ಸೇರಿದಂತೆ ಹಲವು ಯೋಜನೆಗಳಡಿ ಸರ್ಕಾರ ಹಣ ನೀಡುತ್ತಿದೆ. ಪ್ರತಿ ತಿಂಗಳು ಬರುತ್ತಿದ್ದ ಮಾಸಾಶನ ದಿಢೀರ್ ಬಂದ್ ಆಗಿದ್ದರಿಂದ, ಹಲವು ವೃದ್ಧರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದಿಂದ ಯಾವುದೇ ನೆರವು ಸಿಗದಿದ್ದರಿಂದ ವೃದ್ಧರು ನೊಂದುಕೊಂಡಿದ್ದಾರೆ.

ಕೆಲ ವೃದ್ಧರು, ತಹಶೀಲ್ದಾರ್ ಕಚೇರಿ ಎದುರು ಕುಳಿತು ಯೋಜನೆಯ ಆದೇಶ ಪ್ರತಿ ಹಿಡಿದು ಕಣ್ಣೀರಿಡುತ್ತಿದ್ದಾರೆ. ‘ಸಾವಿಗೆ ಹತ್ತಿರವಾಗಿರುವ ವಯಸ್ಸಿನಲ್ಲಿ ನೆರವಾಗಿದ್ದ ಮಾಸಾಶನವೂ ಬಂದ್ ಆಗಿದೆ. ಈಗ ನಮಗೆ ಯಾರು ಗತಿ?’ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹಾವೇರಿ ಮಾತ್ರವಲ್ಲದೇ ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲೂ ಹಲವು ವೃದ್ಧರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್ ಬೆರಳಚ್ಚು ಹಾಗೂ ಐರಿಸ್ ಸಮಸ್ಯೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅರ್ಹರಿಗೆ ಮಾಸಾಶನ ಕೊಡಿಸಬೇಕೆಂದು ವೃದ್ಧರು ಆಗ್ರಹಿಸುತ್ತಿದ್ದಾರೆ.

ಖಾತೆಯಲ್ಲಿ ಹಣವಿದ್ದರೂ ಸಿಗುತ್ತಿಲ್ಲ: ಹಾವೇರಿ ತಾಲ್ಲೂಕಿನ ಬೊಮ್ಮನಕಟ್ಟಿ ಗ್ರಾಮದ 75 ವರ್ಷದ ವೃದ್ಧ ದುರುಗಪ್ಪ ಬಸಣ್ಣನವರ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರತಿ ತಿಂಗಳು ಮಾಸಾಶನ ಬರುತ್ತಿದೆ. ಬ್ಯಾಂಕ್ ಖಾತೆಯಲ್ಲಿ ಜಮೆ ಆಗುತ್ತಿದೆ. ಆದರೆ, ಆಧಾರ್ ನವೀಕರಣ ಮಾಡದಿದ್ದರಿಂದ ಖಾತೆ ನವೀಕರಣವಾಗಿಲ್ಲ. ಒಂದು ವರ್ಷದಿಂದ ದುರುಗಪ್ಪ ಅವರಿಗೆ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.

ದುರುಗಪ್ಪ ಅವರ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ ಬರುತ್ತಿಲ್ಲ. ಹೀಗಾಗಿ, ಆಧಾರ್ ನವೀಕರಣ ಆಗುತ್ತಿಲ್ಲ. ಇದನ್ನು ಸರಿಪಡಿಸಲು ಅವರು ಆಧಾರ್ ಕೇಂದ್ರಕ್ಕೆ ಅಲೆದಾಡಿದರೂ ಪರಿಹಾರ ಸಿಕ್ಕಿಲ್ಲ. ಮಕ್ಕಳಿಲ್ಲದೇ ಒಂಟಿಯಾಗಿ ವಾಸವಿರುವ ಅವರಿಗೆ ಬೆಂಗಳೂರಿಗೆ ಹೋಗಿ ಬರುವ ಶಕ್ತಿಯಿಲ್ಲ. ಅವರ ಸಮಸ್ಯೆಗೆ ಅಧಿಕಾರಿಗಳು ಸಹ ಸ್ಪಂದಿಸುತ್ತಿಲ್ಲವೆಂಬ ಆರೋಪವಿದೆ.

‘ಒಂಟಿ ಜೀವನ ನನ್ನದು. ಮಾಸಾಶನವೇ ಆಧಾರ. ಈಗ ಅದು ಸಹ ಬರುತ್ತಿಲ್ಲ. ಅವರಿವರ ಬಳಿ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದ್ದೇನೆ. ಎಷ್ಟೇ ಪ್ರಯತ್ನಿಸಿದರೂ ಆಧಾರ್ ಸರಿಯಾಗುತ್ತಿಲ್ಲ. ವಯಸ್ಸಿದ್ದಾಗ ಹೊಲ–ಮನೆ ಕೆಲಸ ಮಾಡಿದ್ದೇನೆ. ಈಗ ಬೆರಳಚ್ಚು ಸವೆದುಹೋಗಿವೆ. ಬೆರಳಚ್ಚು ಇಲ್ಲದಿದ್ದರಿಂದ, ಆಧಾರ್ ನವೀಕರಣವಿಲ್ಲವೆಂದು ಹೇಳುತ್ತಿದ್ದಾರೆ. ಈಗ ನಾನು ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ’ ಎಂದು ದುರುಗಪ್ಪ ಅಳಲು ತೋಡಿಕೊಂಡರು.  

ಆಧಾರ್ ಸಮಸ್ಯೆಯಿಂದಾಗಿ ಪಾರ್ವತೆಮ್ಮ ಅವರ ಮಾಸಾಶನ ಬಂದ್ ಆಗಿದೆ. ಅದನ್ನು ಸರಿಪಡಿಸಿಕೊಂಡು ಬಂದರೆ ಮಾಸಾಶನ ಪುನಃ ಆರಂಭಿಸಲು ಅವಕಾಶವಿದೆ. ಇಲ್ಲದಿದ್ದರೆ ನಮ್ಮ ಮಟ್ಟದಲ್ಲಿ ಯಾವುದೇ ಪರಿಹಾರವಿಲ್ಲ
ಶರಣಮ್ಮ ಹಾವೇರಿ ತಹಶೀಲ್ದಾರ್
ನಾನು ಸಾಲಿ ಕಲಿತಿಲ್ಲ. ಸಾಲಿ ಕಲಿತು ಆಫೀಸರ್ ಆಗಿರುವವರೂ ನನ್ನ ಸಮಸ್ಯೆ ಬಗೆಹರಿಸುತ್ತಿಲ್ಲ. ಮಾಸಾಶನ ಇಲ್ಲದೇ ಬದುಕು ಕಷ್ಟವಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಕೊಡಿಸಿ
ದುರುಗಪ್ಪ ಬಸಣ್ಣನವರ ಬೊಮ್ಮನಕಟ್ಟಿ ವೃದ್ಧ
ಬೆರಳಚ್ಚು–ಕಣ್ಣಿನ ಐರಿಸ್ ಕಾರಣದಿಂದ ನನ್ನಂತೆ ರಾಜ್ಯದಲ್ಲಿ ಸಾವಿರಾರೂ ವೃದ್ಧರಿಗೆ ಮಾಸಾಶನ ಬರುತ್ತಿಲ್ಲ. ಇಂಥ ಪ್ರಕರಣವನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು
ಪಾರ್ವತೆಮ್ಮ ಲಿಂಗನಗೌಡ್ರ ಕೋಡಬಾಳ ವೃದ್ಧೆ

‘ಆಧಾರ್ ನಿಯಮ: ಕೈ ಇದ್ದರೆ ಬೆರಳಚ್ಚು ಕಡ್ಡಾಯ’

‘ಕೈ ಇಲ್ಲದಿದ್ದರೆ ಬೆರಳಚ್ಚು ಇಲ್ಲವೆಂದು ಹಾಗೂ ಕಣ್ಣು ಇಲ್ಲದಿದ್ದರೆ ಐರಿಸ್ ಇಲ್ಲವೆಂದು ನಮೂದಿಸಲು ಅವಕಾಶವಿದೆ. ಆದರೆ ಕೈ ಇದ್ದರೂ ಬೆರಳಚ್ಚು ಇಲ್ಲವೆಂದು ನಮೂದಿಸಲು ಆಧಾರ್ ತಂತ್ರಾಂಶದಲ್ಲಿ ಅವಕಾಶವಿಲ್ಲ. ಜಿಲ್ಲೆಯಲ್ಲಿ ಬಹುತೇಕರು ಕೃಷಿಕರು. ವಯಸ್ಸಿದ್ದಾಗ ಹೊಲ ಮನೆಯಲ್ಲಿ ಕೆಲಸ ಮಾಡಿರುತ್ತಾರೆ. 70 ವಯಸ್ಸು ದಾಟಿದ ಮೇಲೆ ಬೆರಳಚ್ಚು ಸವೆದಿರುತ್ತದೆ. ಇಂಥ ವೃದ್ಧರು ಈಗ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲ ಪ್ರಕರಣದಲ್ಲಿ ವೃದ್ಧರು ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಹೋಗಿ ಸಮಸ್ಯೆ ಸರಿಪಡಿಸಿಕೊಂಡು ಬರಬೇಕು’ ಎಂದು ಜಿಲ್ಲಾ ಆಧಾರ್‌ ಸಂಯೋಜಕ ಬಿ.ವೀರೇಶ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಮೊದಲು ಅಂಚೆ ಇಲಾಖೆ ಮೂಲಕ ಮಾಸಾಶನ ಬರುತ್ತಿತ್ತು. ಸಹಿ ಮಾಡಿ ಪಡೆಯುತ್ತಿದ್ದರು. ಈಗ ಬ್ಯಾಂಕ್ ಖಾತೆ ಮೂಲಕ ನೇರ ನಗದು ವರ್ಗಾವಣೆ ಮೂಲಕ ಮಾಸಾಶನ ಬರುತ್ತಿದೆ. ಖಾತೆಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಎಲ್ಲದ್ದಕ್ಕೂ ಆಧಾರ್ ಬೇಕಾಗಿದೆ’ ಎಂದರು. ‘ಬೆರಳಚ್ಚು ಸಮಸ್ಯೆ ಹೇಳಿಕೊಂಡು ವೃದ್ಧರು ಕಚೇರಿಗೆ ಬರುತ್ತಾರೆ. ನಮ್ಮ ಮಟ್ಟದಲ್ಲಿ ಸಾಧ್ಯವಾದರೆ ಸಮಸ್ಯೆ ಬಗೆಹರಿಸುತ್ತೇವೆ. ಇಲ್ಲದಿದ್ದರೆ ಅವರು ಬೆಂಗಳೂರಿನ ಕಚೇರಿಗೆ ಹೋಗಬೇಕು’ ಎಂದರು.

Cut-off box - ‘ಕೈ ಚೆಲ್ಲುವ ಅಧಿಕಾರಿಗಳು’ ಬೆರಳಚ್ಚು ಹಾಗೂ ಕಣ್ಣಿನ ಐರಿಸ್ ಸಮಸ್ಯೆಯಿಂದಾಗಿ ಆಧಾರ್ ನವೀಕರಣವಾಗದೇ ಮಾಸಾಶನ ಬಂದ್ ಆಗಿರುವುದರಿಂದ ಅರ್ಹ ವೃದ್ಧರು ಸರ್ಕಾರದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ನಾನಾ ಸಬೂಬು ಹೇಳಿ ವಾಪಸು ಕಳುಹಿಸುತ್ತಿದ್ದಾರೆ. ಸರ್ಕಾರಿ ಕಚೇರಿಗೆ ಹೋದರೂ ಮಾಸಾಶನ ಸಿಗದಿದ್ದರಿಂದ ವೃದ್ಧರು ಬೇಸತ್ತಿದ್ದಾರೆ. ‘ವಯಸ್ಸಿದ್ದಾಗ ಎಲ್ಲರಂತೆ ಓಡಾಡುತ್ತಿದ್ದೆ. ಈಗ ವಯಸ್ಸಾಗಿದೆ. ನಡೆಯಲು ಕಷ್ಟವಾಗುತ್ತದೆ. ಆಧಾರ್ ನವೀಕರಣ ಮಾಡಲು ಬೆರಳಚ್ಚು ಇಲ್ಲವೆಂದು ಹೇಳಿ ಆಧಾರ್ ಕಾರ್ಡ್‌ನ್ನೇ ರದ್ದು ಮಾಡಿದ್ದಾರೆ. ಇದರಿಂದ ಮಾಸಾಶನವೂ ಬಂದ್ ಆಗಿದೆ. ಬ್ಯಾಂಕ್ ಖಾತೆಯೂ ನವೀಕರಣವಾಗಿಲ್ಲ. ಈ ಸಮಸ್ಯೆಗೆ ವಿದ್ಯಾವಂತರಾದ ಅಧಿಕಾರಿಗಳೂ ಪರಿಹಾರ ಸೂಚಿಸದೇ ಕೈ ಚೆಲ್ಲುತ್ತಿದ್ದಾರೆ’ ಎಂದು ವೃದ್ಧೆ ಪಾರ್ವತಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.