ADVERTISEMENT

ಸಾಧನೆಗಳೇ ಪಕ್ಷದ ಗೆಲುವಿಗೆ ಶ್ರೀರಕ್ಷೆ: ಸಂಸದ ಶಿವಕುಮಾರ ಉದಾಸಿ ಹೇಳಿಕೆ

ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:57 IST
Last Updated 27 ನವೆಂಬರ್ 2021, 13:57 IST
ಹಾವೇರಿ ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು 
ಹಾವೇರಿ ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು    

ಹಾವೇರಿ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮ ಪಂಚಾಯ್ತಿಗಳಿಗೆ ದೊಡ್ಡ ಪ್ರಮಾಣದ ಅನುದಾನ ಹರಿದುಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳೇ ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್‌ ಗೆಲುವಿಗೆ ಶ್ರೀರಕ್ಷೆಯಾಗಲಿವೆ’ ಎಂದು ಸಂಸದ ಶಿವಕುಮಾರ ಉದಾಸಿ ಅಭಿಪ್ರಾಯಪಟ್ಟರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಹಾವೇರಿ ಜಿಲ್ಲೆಯಲ್ಲಿ 3162 ಗ್ರಾ.ಪಂ. ಸದಸ್ಯರು, 38 ಪಟ್ಟಣ ಪಂಚಾಯಿತಿ ಸದಸ್ಯರು, 119 ಪುರಸಭೆ ಸದಸ್ಯರು, 66 ನಗರಸಭೆ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಸೇರಿ ಒಟ್ಟು3391 ಸದಸ್ಯರು ಇದ್ದಾರೆ. ಇವರಲ್ಲಿ 2 ಸಾವಿರಕ್ಕಿಂತ ಹೆಚ್ಚು ಸದಸ್ಯರು ಬಿಜೆಪಿ ಪರ ಇದ್ದಾರೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತಿದ್ದೇವೆ. ಜಲಜೀವನ ಮಿಷನ್‌ ಯೋಜನೆಯಡಿ, ಗ್ರಾಮೀಣ ಪ್ರದೇಶದ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಾವೇರಿ ಜಿಲ್ಲೆಗೆ ₹494 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ₹80 ಕೋಟಿ ಬಳಕೆಯಾಗಿದೆ. 2023ರ ಅಂತ್ಯದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೆ ನೀರು ಪೂರೈಕೆಯಾಗುವ ಕೆಲಸವಾಗಲಿದೆ ಎಂದು ಹೇಳಿದರು.

ADVERTISEMENT

ಉದ್ಯೋಗ ಖಾತ್ರಿ ಯೋಜನೆಯಡಿ 100 ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ. ದೇಶದಲ್ಲಿ ₹72 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ₹68 ಸಾವಿರ ಕೋಟಿ ಖರ್ಚಾಗಿ, ಮತ್ತೆ ಹೆಚ್ಚುವರಿಯಾಗಿ ₹10 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಕೋವಿಡ್‌ ಸಂದರ್ಭ ₹1 ಲಕ್ಷ ಕೋಟಿ ಉದ್ಯೋಗ ಖಾತ್ರಿಯಲ್ಲಿ ಖರ್ಚು ಮಾಡಿದ್ದೇವೆ.ತೋಟಗಾರಿಕೆ ವಿಸ್ತರಣೆಗೆ ಉದ್ಯೋಗ ಖಾತ್ರಿಯ ನೆರವು ಸಿಕ್ಕಿದೆ ಎಂದರು.

ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್‌ ಮಾತನಾಡಿ, 6 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ವಿಧಾನಸಭಾ ಕ್ಷೇತ್ರವಾರು ಅನುದಾನ ಕೊಟ್ಟಿದ್ದೇನೆ. ಜತೆಗೆ ಅನುದಾನ ತರಲು ಶ್ರಮಿಸಿದ್ದೇನೆ. ಸಿಎಂ ತವರು ಜಿಲ್ಲೆ ಮತ್ತು ಹೆಚ್ಚು ಬಿಜೆಪಿ ಶಾಸಕರು ಇರುವ ಹಾವೇರಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ನಗರ ಘಟಕ ಅಧ್ಯಕ್ಷ ಗಿರೀಶ ತುಪ್ಪದ, ಪ್ರಭು ಹಿಟ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.