ADVERTISEMENT

25 ಫೀವರ್‌ ಕ್ಲಿನಿಕ್‌ ಆರಂಭಕ್ಕೆ ಕ್ರಮ: ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 2:58 IST
Last Updated 7 ಜೂನ್ 2021, 2:58 IST
ಪ್ರಕಾಶ ಕೋಳಿವಾಡ
ಪ್ರಕಾಶ ಕೋಳಿವಾಡ   

ರಾಣೆಬೆನ್ನೂರು: ‘ವಿರೋಧ ಪಕ್ಷ ಕೋವಿಡ್ ಪರಿಹಾರಕ್ಕಾಗಿ ಶಕ್ತಿ ಮೀರಿ ಹಗಲಿರುಳು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಆಮ್ಲಜನಕ, ವೆಂಟಿಲೇಟರ್ ಅನ್ನು ರಾಜ್ಯಕ್ಕೆ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಪಿಕೆಕೆ ಇನಿಸಿಯೇಟಿವ್ಸ್‌ ಅಧ್ಯಕ್ಷ ಪ್ರಕಾಶ್ ಕೋಳಿವಾಡ ಹೇಳಿದರು.

ಇಲ್ಲಿನ ವಾಗೀಶನಗರದ ತಮ್ಮ ಗೃಹ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪಕ್ಷದ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವ ಕಡೆಗಳಲ್ಲಿ ಬಿಟ್ಟು ಈಗಾಗಲೇ 40ಹಳ್ಳಿಗಳಲ್ಲಿಫೀವರ್ ಕ್ಲಿನಿಕ್‌ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 25ಕಡೆಗಳಲ್ಲಿ ಫೀವರ್‌ ಕ್ಲಿನಿಕ್‌ ತೆರೆಯಲು ಕ್ರಮವಹಿಸಲಾಗುವುದು. ಆನ್‌ಲೈನ್ ಮೂಲಕ ವೈದ್ಯ
ರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು’ಎಂದರು.

‘ರೋಗಿಗೆ ಆಮ್ಲಜನಕದ ಪ್ರಮಾಣ ಕಡಿಮೆಯಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ನಮ್ಮ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ದಾಖಲಿಸಲಾಗುವುದು. ಇನ್ನು 6 ಕಡೆಗಳಲ್ಲಿ ಆಮ್ಲಜನಕದ ಸಾಂದ್ರಕಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಲಸಿಕೆ ವಿತರಣೆಯಲ್ಲಿ ಸರ್ಕಾರ ವಿಳಂಬ ಧೋರಣೆ ಮಾಡುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ಆನ್‌ಲೈನ್ ನೊಂದಣಿ ಮಾಡಿಕೊಳ್ಳಲು ಸರ್ಕಾರ ಸೂಚಿಸಿದೆ. ಆನ್‌ಲೈನ್‌ ನೋಂದಣಿ ಮಾಡಿಸಿದರೂ ದಿನಗಟ್ಟಲೇ ಕಾಯುವಂತಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಆನ್‌ಲೈನ್ ನೊಂದಣಿ ಮಾಡಿಕೊಳ್ಳಲು ಸಮಸ್ಯೆಯಾಗುತ್ತಿದ್ದು, ಎಲ್ಲರ ಕಡೆ ಸ್ಮಾರ್ಟ್‌ಫೋನ್‌ ಇರುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು 65ಸಾವಿರಕ್ಕೂ ಅಧಿಕ ಮನೆಗಳಿಗೆ ಹೋಗಿ ಆನ್‌ಲೈನ್ ನೋಂದಣಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ’
ಎಂದರು.

‘ಲಾಕ್‌ಡೌನ್ ಅವಧಿಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಊಟದ ಸಮಸ್ಯೆಯಾಗುತ್ತಿದೆ. ಹೀಗಾಗಿ ಪಕ್ಷದ ವತಿಯಿಂದ ಕಳೆದ 9 ದಿನಗಳಿಂದ ನಿಂತರವಾಗಿ ಮಧ್ಯಾಹ್ನದ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ಮುಗಿಯುವವರೆಗೂ ಈ ಕಾರ್ಯ ಮುಂದುವರಿಯುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.