ADVERTISEMENT

ಬಂಕಾಪುರ ತಾಲ್ಲೂಕು ರಚನೆಗೆ ಬೆಂಬಲ ಅವಶ್ಯ: ಹೋರಾಟ ಸಮಿತಿಯ ಎ.ಕೆ.ಆದವಾನಿಮಠ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:22 IST
Last Updated 3 ಆಗಸ್ಟ್ 2025, 4:22 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶನಿವಾರ ನಡೆದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆದವಾನಿಮಠ ಮಾತನಾಡಿದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶನಿವಾರ ನಡೆದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆದವಾನಿಮಠ ಮಾತನಾಡಿದರು   

ಶಿಗ್ಗಾವಿ: ‘ಬಂಕಾಪುರವನ್ನು ತಾಲ್ಲೂಕು ಕೇಂದ್ರವಾಗಿಸುವ ಬಹುದಿನಗಳ ಕನಸು ನನಸಾಗಿಸಲು ಪ್ರತಿ ಗ್ರಾಮಗಳ ಜನರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಬೇಕು’ ಎಂದು ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಕೆ. ಆದವಾನಿಮಠ ಕೋರಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಫಕ್ಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಂಕಾಪುರ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದರು.

‘1961ರವರೆಗೆ ತಾಲ್ಲೂಕು ಕೇಂದ್ರವಾಗಿದ್ದ ಬಂಕಾಪುರ ಪಟ್ಟಣವು ಮತ್ತೆ ತಾಲ್ಲೂಕಾಗಬೇಕು. ಇದು ಪ್ರತಿಯೊಬ್ಬ ನಾಗರಿನಕನ ಹಕ್ಕಾಗಿದೆ. ಇದಕ್ಕಾಗಿ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ’ ಎಂದರು.

ADVERTISEMENT

‘ಕಳೆದ ಉಪಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ ಜಾರಕಿಹೊಳಿ ಅವರು ತಾಲ್ಲೂಕು ರಚಿಸುವ ಭರವಸೆ ನೀಡಿದ್ದರು. ರಾಜ್ಯದಲ್ಲಿ ಹೊಸ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳ ರಚನೆಗೆ ಡಿಸೆಂಬರ್ 31ರವರೆಗೆ ಗಡುವು ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಶಾಸಕರ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಅವಶ್ಯವಾಗಿದೆ’ ಎಂದು ಹೇಳಿದರು.

‘ಡಿಸೆಂಬರ್ ನಂತರ ಹೊಸ ತಾಲ್ಲೂಕುಗಳ ರಚನೆಗೆ ಅವಕಾಶವಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಮ್ಮ ಬೇಡಿಕೆಗಾಗಿ ಹೋರಾಡುವುದು ಅನಿವಾರ್ಯವಾಗಿದ್ದು, ಸಂಘ–ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಬೆಂಬಲಿಸಬೇಕು. 12 ಗ್ರಾಮ ಪಂಚಾಯಿತಿಗಳು ಬಂಕಾಪುರ ಬರಲಿದ್ದು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಲಾಗುವುದು’ ಎಂದರು.

ಸಮಿತಿ ಸಂಸ್ಥಾಪಕ ಸಂಚಾಲಕ ಅಬ್ದುಲರಜಾಕ್‌ ತಹಶೀಲ್ದಾರ್‌, ಗುರುರಾಜ ಚಲವಾದಿ, ಮಂಜುನಾಥ ಕೂಲಿ, ರಾಮಕೃಷ್ಣ ಆಲದಕಟ್ಟಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.