ADVERTISEMENT

ವಿಜಯೇಂದ್ರನ ಮುಂದೆ ಹೆಬ್ಬೆಟ್ಟಾದ ಯಡಿಯೂರಪ್ಪ: ಶಾಸಕ ಬಸನಗೌಡ ಯತ್ನಾಳ ಗೇಲಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 19:28 IST
Last Updated 11 ಏಪ್ರಿಲ್ 2021, 19:28 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ    

ಶಿಗ್ಗಾವಿ (ಹಾವೇರಿ): ‘ಪುತ್ರ ವಿಜಯೇಂದ್ರನ ಮುಂದೆ ಯಡಿಯೂರಪ್ಪ ಹೆಬ್ಬೆಟ್ಟಾಗಿದ್ದಾರೆ. ಕಡತಗಳಿಗೆ ಸಹಿ ಮಾಡಲು ಯಡಿಯೂರಪ್ಪ ಅವರ ಕೈ ನಡುಗುತ್ತದೆ.ಮೇ 2ರ ಒಳಗೆ ಸಿ.ಎಂ. ಬದಲಾವಣಿ ನಿಶ್ಚಿತ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪುನರುಚ್ಚರಿಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಎಲ್ಲ ವ್ಯವಹಾರವೂ ಪುತ್ರ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರತಿ ಕಡತಗಳನ್ನು ತೂಕ ಮಾಡಿ ಯಾವ ಕಡತಕ್ಕೆ ಎಷ್ಟು ಲಕ್ಷ? ಎಂಬುದನ್ನು ಅಳೆದು ಸಹಿಗಾಗಿ ಇಡುತ್ತಾರೆ. ಚುನಾವಣೆಯಲ್ಲಿ ದುಡ್ಡಿನ ಮಳೆ ಹರಿಸಿ ಅಭ್ಯರ್ಥಿ ಗೆಲುವಿಗೆ ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ವಿಜಯೇಂದ್ರ ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶದಲ್ಲಿ ಇಟ್ಟಿದ್ದಾರೆ. ಫೆಡರಲ್ ಬ್ಯಾಂಕಿನ ಹಗರಣ ಶೀಘ್ರದಲ್ಲೇ ಹೊರಗೆ ಬರಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.ಬಾದಾಮಿ ಕ್ಷೇತ್ರಕ್ಕೆ ₹1,500 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅಪ್ಪ–ಮಕ್ಕಳ ಆಟ ಬಹಳ ದಿನ ನಡೆಯದು’ ಎಂದು ಹರಿಹಾಯ್ದರು.

ADVERTISEMENT

ಕೇಳಿದಷ್ಟು ಪಗಾರ ಕೋಡೋಕೆ ಆಗಲ್ಲ

ಸಾರಿಗೆ ನೌಕರರ ಅಧ್ಯಕ್ಷ ಹದ್ದು ಮೀರಿ ಮಾತನಾಡುತ್ತಾ ಇದ್ದಾರೆ. ಸಾರಿಗೆ ನೌಕರರಿಗೆ ಹೇಳುತ್ತೇನೆ, ಹೊರಗಿನವರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿಕೊಳ್ಳಬೇಡಿ. ದೇಶ ಹಾಳು ಮಾಡುವ ಕೆಲವು ಮಂದಿ ಇದ್ದಾರೆ. ನಾಳೆ ಎಲ್ಲರಿಗೂ ಐಎಎಸ್‌, ಐಪಿಎಸ್‌ ರೀತಿ ಪಗಾರ ಕೊಡು ಅಂತಾರೆ. ನಾನೇ ಸಿ.ಎಂ. ಆದ್ರೂ ಕೊಡೋಕೆ ಆಗಲ್ಲ ಎಂದರು.

ಕೋಡಿಹಳ್ಳಿ ಚಂದ್ರಶೇಖರ್‌ ಅಂಥವರು ನೌಕರರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಸಾವಿರಾರು ಬಸ್ ಖರೀದಿ ಮಾಡುತ್ತಾರೆ.ಒಂದು ಬಸ್ಸಿನ ಹಿಂದೆ ಎಷ್ಟು ಕಮಿಷನ್ ತಿನ್ನುತ್ತಾರೆ ಅನ್ನೊದು ಗೊತ್ತಿದೆ. ಹೀಗಾದರೆ ಸಾರಿಗೆ ಸಂಸ್ಥೆ ಉದ್ಧಾರವಾಗುವುದು ಯಾವಾಗ, ಸಾರಿಗೆ ಸಚಿವರು ಸೋರಿಕೆಯನ್ನು ತಡೆಗಟ್ಟಬೇಕು ಎಂದು ಹೇಳಿದರು.

‘ಪಂಚಮಸಾಲಿ ಸಮುದಾಯದವರನ್ನು ಸಿ.ಎಂ. ಮಾಡಿ’

ಶಿಗ್ಗಾವಿ (ಹಾವೇರಿ): ‘ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ, ಮೊದಲನೆಯದಾಗಿ ಉತ್ತರ ಕರ್ನಾಟಕದವರಿಗೆ ಕೊಡಿ, ಅದರಲ್ಲೂ ಪಂಚಮಸಾಲಿ ಸಮುದಾಯದವರಿಗೆ ಸಿಎಂ ಸ್ಥಾನ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಕೇಳುತ್ತೇನೆ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪ್ರಧಾನಿ ಮೋದಿ, ಅಮಿತ್‌ ಷಾ, ನಡ್ಡಾ ಅವರಿಗೆ ಗೊತ್ತಿದೆ. ಪಂಚಮಸಾಲಿ ಸಮಾಜದಲ್ಲಿ ಸಿ.ಎಂ. ಆಗುವ ವ್ಯಕ್ತಿ ಯಾರಿದ್ದಾರೆ ಅಂತ. ಹೀಗಾಗಿ ಅವರನ್ನೇ ಸಿ.ಎಂ. ಮಾಡುತ್ತಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಯತ್ನಾಳ ಅವರನ್ನು ಬೆಂಬಲಿಸಿದರು.

ಸಾರಿಗೆ ನೌಕರರಲ್ಲಿ ಬಹುತೇಕ ಮಂದಿ ಉತ್ತರ ಕರ್ನಾಟಕದವರು ಇದ್ದಾರೆ. ಹೀಗಾಗಿ ಮುಷ್ಕರವನ್ನು ನಾವು ಬೆಂಬಲಿಸುತ್ತೇವೆ. ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.