ADVERTISEMENT

ಬಸವ ಜಯಂತಿ ಅಂಗವಾಗಿ ಹಾವೇರಿ ಹೊಸಮಠದಲ್ಲಿ ಅಂಬಲಿ ವಿತರಣೆ

ಅಂಬಲಿ: ಸಾಮಾಜಿಕ ಸಮಾನತೆ ಸಂಕೇತ: ಬಸವಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 13:36 IST
Last Updated 7 ಮೇ 2019, 13:36 IST
ಬಸವ ಜಯಂತಿ ಅಂಗವಾಗಿ ಹಾವೇರಿಯ ಹೊಸಮಠದಲ್ಲಿ ಬಸವಶಾಂತಲಿಂಗ ಸ್ವಾಮೀಜಿ ಮಂಗಳವಾರ ಅಂಬಲಿ ವಿತರಿಸಿದರು 
ಬಸವ ಜಯಂತಿ ಅಂಗವಾಗಿ ಹಾವೇರಿಯ ಹೊಸಮಠದಲ್ಲಿ ಬಸವಶಾಂತಲಿಂಗ ಸ್ವಾಮೀಜಿ ಮಂಗಳವಾರ ಅಂಬಲಿ ವಿತರಿಸಿದರು    

ಹಾವೇರಿ:‘ರಾಗಿ ಅಂಬಲಿ ಕೇವಲ ಶಕ್ತಿ, ರೋಗ ನಿರೋಧಕ ಮಾತ್ರವಲ್ಲ, ಸಾಮಾಜಿಕ ಸಮಾನತೆಯನ್ನು ಸಾರುವ ಸಂಕೇತ, ಆಹಾರ’ ಎಂದು ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಹೊಸಮಠದಲ್ಲಿ ಮಂಗಳವಾರ ಬಸವ ಜಯಂತಿ ಅಂಗವಾಗಿ ಭಕ್ತರಿಗೆ ‘ಅಂಬಲಿ’ ವಿತರಿಸಿ ಅವರು ಮಾತನಾಡಿದರು. ಇದಕ್ಕೂ ಮೊದಲು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.

ಚಿಕ್ಕ ಮಕ್ಕಳು, ಹಿರಿಯರು ಸೇರಿದಂತೆ ಬಸವವಾಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ಅಂಬಲಿಯನ್ನು ಸವಿದರು.

ADVERTISEMENT

‘ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ, ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ. ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು ಕೂಡಲಸಂಗಮದೇವಂಗೆ ಬೇಕೆಂದು ಕೈದೆಗೆದ ನಮ್ಮ ಚೆನ್ನ’ ಎಂದು ಬಸವಣ್ಣನವರು ಮಾದಾರ ಚನ್ನಯ್ಯರ ಮನೆಗೆ ಹೋಗಿ ಅಂಬಲಿ ಕುಡಿದು ಆಹಾರ, ಆರೋಗ್ಯ, ಸಮಾನತೆಯ ಸಂದೇಶ ಸಾರಿದ್ದರು. ಇದು, ಕೇವಲ ಆಹಾರವಲ್ಲದೇ ‘ಸ್ವಾಸ್ಥ್ಯ’ದ ಸಂಕೇತವಾಗಿತ್ತು’ ಎಂದು ಬಸವಶಾಂತಲಿಂಗ ಸ್ವಾಮೀಜಿ ಬಣ್ಣಿಸಿದರು.

‘ಈ ಭಾಗದಲ್ಲಿ ಜೋಳ, ಅಕ್ಕಿ ಮತ್ತಿತರ ಧಾನ್ಯಗಳ ಆಹಾರ ಪ್ರಮುಖವಾಗಿವೆ. ಅಲ್ಲದೇ, ಸಿರಿವಂತರು ವಿವಿಧ ಖಾದ್ಯಗಳನ್ನು ಹೇಳುತ್ತಾರೆ. ಆದರೆ, ದೇಹಕ್ಕೆ ಶಕ್ತಿವರ್ಧಕವಾಗಿ, ರೋಗ ನಿರೋಧಕದಂತೆ ರಾಗಿಯ ಅಂಬಲಿಯನ್ನು ಬಸವಾದಿ ಪ್ರಮಥರು ನೀಡುತ್ತಿದ್ದರು. ಅದು, ಉತ್ತಮ ಆಹಾರ ಮಾತ್ರವಲ್ಲದೇ, ಬಡವರ ‘ಅನ್ನ’ವಾಗಿತ್ತು' ಎಂದರು

‘ಬಸವಣ್ಣನವರ ಹಾಕಿಕೊಟ್ಟ ಆದರ್ಶ, ತತ್ವಗಳ ಆಚರಣೆ ನಡೆಯಬೇಕು. ತತ್ವ ಬಿಟ್ಟು ಹುಟ್ಟುಹಬ್ಬ ಆಚರಿಸಿದರೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ನಾವು ಅಂಬಲಿ ವಿತರಿಸಿದ್ದೇವೆ’ ಎಂದು ಸ್ವಾಮೀಜಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.