ಹಾವೇರಿ: ‘ಇಂದಿನ ದಿನಮಾನಗಳಲ್ಲಿ ಬಸವತತ್ವ ಹೇಳುವವರು ಹೆಚ್ಚಾಗಿದ್ದಾರೆ. ಆದರೆ, ಬಸವತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರು ಕಡಿಮೆಯಾಗಿದ್ದಾರೆ. ಇದು ಸಮಾಜದ ದೊಡ್ಡ ದುರಂತ’ ಎಂದು ಸಾಣಿಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿಯ ರಜನಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಸವ ಸಂಸ್ಕೃತಿ ಅಭಿಯಾನ’ದ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸಮಾಜದ ಪ್ರತಿಯೊಬ್ಬರು ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಿಂದ ಬದುಕು ಹಸನಾಗುತ್ತದೆ. ಆದರೆ, ಇಂದು ಬಹುತೇಕರು ಬಸವತತ್ವ ಪಾಲಿಸುತ್ತಿಲ್ಲ. ಈ ದುರಂತ ಹೋಗಲಾಡಿಸಿ, ಮಕ್ಕಳ ಕೈಯಲ್ಲಿ ವಚನ ಓದಿಸಲು ಹಾಗೂ ಪ್ರತಿಯೊಬ್ಬರಿಗೂ ಸಂಸ್ಕಾರ ನೀಡುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಜೊತೆಗೆ ವಚನ ಸಂವಾದ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.
‘ಒಬ್ಬ ವ್ಯಕ್ತಿ ಶ್ರೀಮಂತನಾದ ಮೇಲೆ ಎಲ್ಲರನ್ನೂ ಪ್ರೀತಿಯಿಂದ ನೋಡಬೇಕು. ಸೌಜನ್ಯ ಬೆಳೆಸಿಕೊಳ್ಳಬೇಕು. ಸಮಾಜಮುಖಿ ಚಿಂತನೆ ಮಾಡಬೇಕು. ಆ ರೀತಿ ಮಾಡದವರಿಗೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಎಚ್ಚರಿಕೆ ನೀಡಿದ್ದರು. ಆದರೆ, ಇಂದಿನ ದಿನಮಾನಗಳಲ್ಲಿಯೂ ಪರಧನದ ಆಸೆ, ಪರಸ್ತ್ರೀ ಮೋಹ, ಅನೇಕ ದೇವರ ಪೂಜೆ ನಿರಂತರವಾಗಿ ನಡೆಯುತ್ತಿದೆ’ ಎಂದು ಹೇಳಿದರು.
‘ತಮಗೆ ಎಲ್ಲವೂ ಗೊತ್ತಿದೆ ಎಂದು ಪ್ರಾವೀಣ್ಯ ತೋರಿಸುವ ಜನರೇ ಇಂದು ಹೆಚ್ಚಾಗಿದ್ದಾರೆ. ಬಸವಣ್ಣ ಸೇರಿದಂತೆ ಎಲ್ಲ ಮಹಾನ್ ಪ್ರವಾದಿಗಳು, ತಮಗೆ ಎಲ್ಲ ಗೊತ್ತಿದ್ದರೂ ಗೊತ್ತಿಲ್ಲವೆಂದೇ ಹೇಳುತ್ತಿದ್ದರು. ಇದೇ ಬಸವಣ್ಣ, ವಿಶ್ವದ ಜಗದ್ಗುರು ಆಗಲು ಅರ್ಹರಾದವರು. ಅವರು ಯಾವುದೇ ಮಠದ ಸ್ವಾಮೀಜಿಯಲ್ಲ, ಸನ್ಯಾಸಿಯೂ ಅಲ್ಲ. ಗೃಹಸ್ಥ ಹಾಗೂ ಸನ್ಯಾಸಿ ಹೇಗಿರಬೇಕೆಂದು ತೋರಿಸಿಕೊಟ್ಟರು. ಸತ್ಯ ಮಾತ್ರವಲ್ಲದೇ ನಿಷ್ಠುರವಾಗಿ ಮಾತನಾಡಬೇಕೆಂದು ಹೇಳಿದವರು’ ಎಂದು ತಿಳಿಸಿದರು.
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರನ್ನು ಎಲ್ಲ ರಂಗದಲ್ಲೂ ನೋಡಬಹುದು. ‘ಹುಟ್ಟಿ ಬಂದವನು ಬಸವಣ್ಣ ಕಟ್ಟುವುದಕ್ಕೆ ಕಲ್ಯಾಣ’, ‘ಓದಿದನು ಬಸವಣ್ಣ ವೇದದೊಳಗಿನ ಹುಸಿಯ. ವೇದ–ಬೇದವನ್ನೇ ಬಿಚ್ಚಿಟ್ಟ’ ಎಂದು ಜಾನಪದ ಕವಿಗಳು ಬಣ್ಣಿಸಿದ್ದಾರೆ’ ಎಂದರು.
‘ಎಲ್ಲಿ ವೀರಶೈವವೂ, ಅಲ್ಲಿ ಗೊಂದಲ. ಕಾರಣ ಬಸವಣ್ಣನ ಅಭಾವ’ ಎಂಬುದಾಗಿ ರಾಮ ಜಾಧವ ಎಂಬುವವರು ಚುಟುಕು ಸಾಹಿತ್ಯದಲ್ಲಿ ಬರೆದಿದ್ದಾರೆ. ಬಸವಣ್ಣನವರನ್ನು ಧರ್ಮಗುರುವಾಗಿ ಪಡೆದಿದ್ದು ನಮ್ಮೆಲ್ಲರ ಭಾಗ್ಯ. ಇದು ಕೇವಲ ಅಭಿಯಾನವಲ್ಲ. ಮಾನವ ಸಂಸ್ಕೃತಿ ಅಭಿಯಾನ. ಎಲ್ಲ ಮಹಾತ್ಮರು, ದೇವರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಆದರೆ, ಮನುಷ್ಯರ ಬಗ್ಗೆ ಮಾತನಾಡಿದ ಮಹಾತ್ಮ ಬಸವಣ್ಣ’ ಎಂದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಇಂದಿನ ಸಮಾಜದಲ್ಲಿ ಮನೆ ಬಳಿ ಯಾರೂ ಬರಬೇಡಿ ಎನ್ನುವ ಅಸಂಸ್ಕೃತಿ ಹೆಚ್ಚಾಗಿದೆ. ಇಂಥ ಅಸಂಸ್ಕೃತಿ ಒಡೆದು ಹಾಕಲು ಹಾಗೂ ಅಜ್ಞಾನ–ಅಂಧಕಾರವನ್ನು ಹೋಗಲಾಡಿಸಲು ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲ್ಕಿಯ ಬಸವಲಿಂಗಪಟ್ಟ ದೇವರು, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಇದ್ದರು.
ಜಾತಿ–ಮತ–ಪಂಥ ಭೇದವಿಲ್ಲದ ವಿಶ್ವ ವಿನೂತನ ಧರ್ಮ ಕೊಟ್ಟವರು ಬಸವಣ್ಣನವರು. ಅವರು ಇಲ್ಲದಿದ್ದರೆ ನಾವೆಲ್ಲರೂ ಶೂದ್ರರಾಗಿರುತ್ತಿದ್ದೆವು. ಯಾವುದೇ ಸ್ಥಾನಮಾನ–ಗೌರವ ಸಿಗುತ್ತಿರಲಿಲ್ಲಗಂಗಾ ಮಾತಾಜಿ ಬಸವ ಧರ್ಮಪೀಠ ಕೂಡಲ ಸಂಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.