
ಹಾನಗಲ್: ಜಾತಿಗಳ ನಡುವೆ ವಿಷ ಬೀಜ ಬಿತ್ತುವ, ಜಾತಿ ನಿಂದನೆ ಪ್ರಕರಣಗಳು (ಅಟ್ರಾಸಿಟಿ ಕೇಸ್) ದಾಖಲಾಗುತ್ತಿದ್ದು, ಇವು ರಾಜಕೀಯ ದ್ವೇಷಕ್ಕೂ ಬಳಕೆಯಾಗುತ್ತಿವೆ. ಈ ಬಗ್ಗೆ ಹಿಂದುಳಿದ ವರ್ಗಗಳ ಜನರು ಜಾಗೃತೆ ವಹಿಸಬೇಕು ಎಂದು ದಲಿತ ಮುಖಂಡ ರಾಮಣ್ಣ ಯಳ್ಳೂರ ಹೇಳಿದರು.
ಯಾರದೋ ಹಿತಾಸಕ್ತಿಗೆ ದಲಿತರನ್ನು ಬಳಸಿಕೊಂಡು ಜಾತಿ ನಿಂದನೆ ಪ್ರಕರಣಕ್ಕೆ ಅವಕಾಶ ಮಾಡುವ ಮೂಲಕ ಹಿಂದುಳಿದ ವರ್ಗಗಳ ಮೇಲೆ ಜನರು ದೂಷಣೆ ಮಾಡುವಂತಾಗಬಾರದು, ಅಲ್ಲದೆ ಯಾರದೋ ಹಿತಾಸಕ್ತಿಗೆ ದಲಿತ ಸಮುದಾಯದ ಮೇಲೆ ಸಲ್ಲದ ಮಾತುಗಳು ಬರುವಂತಾಗಬಾರದು ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಈಗ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ನಮ್ಮನ್ನು ದುಷ್ಟ ಕೆಲಸಗಳಿಗೆ ಬಳಸಿಕೊಳ್ಳುವ ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ದುರುಪಯೋಗ ಮಾಡಿಕೊಳ್ಳುವ ಷಡ್ಯಂತ್ರಗಳ ಬಗ್ಗೆ ಅರಿವು ಹೊಂದಬೇಕಾಗಿದೆ’ ಎಂದರು.
ಶತಮಾನಗಳಿಂದ ಈ ದೇಶದಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಿ ಬದುಕಿದ್ದೇವೆ. ಸರ್ಕಾರ ದಲಿತರ ಮೇಲೆ ಮೇಲ್ವರ್ಗದವರಿಂದ ದೌರ್ಜನ ನಡೆದರೆ ಅದಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಮಾಡಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಹಿತಾಸಕ್ತಿಗಾಗಿ ದಲಿತರನ್ನು ಇತರರ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲು ಪ್ರಚೋದಿಸಿ ಬಳಸಿಕೊಳ್ಳಲು ಮುಂದಾಗುತ್ತಾರೆ. ಇದು ಸರಿ ಅಲ್ಲ. ಇದರಿಂದ ಕಾನೂನಿನ ದುರುಪಯೋಗವಾಗದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಿಜವಾಗಿಯೂ ದಲಿತರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ನಡೆದರೆ ಖಂಡಿತ ಎಲ್ಲರೂ ಒಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ. ಅದಕ್ಕೆ ನಾನು ಸಹ ಸಿದ್ಧ. ಆದರೆ ಬೇರೆ ಕಾರಣಕ್ಕೆ ನಡೆದ ಘಟನೆಗಳನ್ನು ಜಾತಿ ನಿಂದನೆ ಎಂದು ಬಿಂಬಿಸಿ ಪ್ರಕರಣ ದಾಖಲಿಸುವಂತಹ ಯೋಚನೆಯಿಂದ ದೂರವಿರೋಣ. ಇದರಿಂದ ನಾವು ಎಲ್ಲರೊಂದಿಗೆ ಸೌಹಾರ್ದದಿಂದ ಇರಲು ಸಾಧ್ಯ ಎಂದರು.
ಕೆಲವು ಸಂದರ್ಭದಲ್ಲಿ ಯಾರದೋ ಹಿತಾಸಕ್ತಿಗೆ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿ ಮುಗ್ಧರನ್ನು ಮೋಸಗೊಳಿಸಿದ ಪ್ರಸಂಗಗಳೂ ಇವೆ. ಇದರಿಂದ ಹಿಂದುಳಿದ ಸಮುದಾಯದ ಬಗ್ಗೆ ಸಮಾಜದಲ್ಲಿ ಸಲ್ಲದ ಮಾತುಗಳು ಕೇಳಿ ಬರುತ್ತವೆ. ಇದು ಸಮುದಾಯಕ್ಕೆ ಒಳ್ಳೆಯದಲ್ಲ. ಜಾತಿ ಹೆಸರಿನಲ್ಲಿ ವ್ಯವಸ್ಥೆಯನ್ನು ಹದಗೆಡಿಸುವ ಪ್ರಸಂಗಗಳೂ ಇವೆ. ನಮ್ಮ ದಲಿತ ಸಮುದಾಯ ಎಚ್ಚೆತ್ತುಕೊಂಡು ನಡೆಯಬೇಕಾಗಿದೆ. ಹಲವು ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದಾಗ ಅವುಗಳನ್ನು ರಾಜಿ ಮೂಲಕ ಸರಿ ಮಾಡಲಾಗಿದೆ. ದಲಿತ ಸಮುದಾಯವನ್ನು ರಾಜಕೀಯವಾಗಿಯೂ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಬೇಡ ಎಂದರು.
ಈ ತಾಲ್ಲೂಕಿನಲ್ಲಿ ನಾಲ್ಕೈದು ದಶಕಗಳ ಕಾಲ ರಾಜಕೀಯದಲ್ಲಿದ್ದು, ಅಧಿಕಾರ ನಡೆಸಿದ ದಿ.ಸಿ.ಎಂ.ಉದಾಸಿ ಹಾಗೂ ದಿ.ಮನೋಹರ ತಹಶೀಲ್ದಾರ ಅವರು ಒಬ್ಬರಿಗೊಬ್ಬರು ವಿರೋಧ ಪಕ್ಷಗಳಲ್ಲಿದ್ದರೂ ಕೂಡ ಎಂದೂ ಜಾತಿ ನಿಂದನೆ ಪ್ರಕರಣಗಳನ್ನು ಬಳಸಿ ಜನರಿಗೆ ಯಾವುದೇ ರೀತಿಯ ತೊಂದರೆಗೆ ಕಾರಣವಾಗಲಿಲ್ಲ. ಈಗಲೂ ಕೂಡ ನಿಜವಾಗಿಯೂ ದಲಿತ ಸಮುದಾಯಕ್ಕೆ ತೊಂದರೆ ಆಗಿದ್ದರೆ, ಒಟ್ಟಾಗಿ ನ್ಯಾಯಕ್ಕಾಗಿ ಹೋರಾಡೋಣ. ಆದರೆ ಸುಳ್ಳು ಪ್ರಕರಣಗಳ ಮೂಲಕ ಯಾರಿಗೂ ತೊಂದರೆ ಕೊಡುವುದು ಬೇಡ ಎಂದು ರಾಮಣ್ಣ ಯಳ್ಳೂರ ವಿನಂತಿಸಿದರು.
ದಲಿತ ಮುಖಂಡರಾದ ಕಿರಣ ತಳವಾರ, ಸಂಜೀವಕುಮಾರ ನಾಯಕ, ನೀರಾ ಗಂಗೋಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.