ಹಾವೇರಿ: ‘ಇಂದಿನ ದಿನಮಾನಗಳಲ್ಲಿ ಎಲ್ಲೆಂದರಲ್ಲಿ ಸಿಬಿಎಸ್‌ಇ ಇಂಗ್ಲೀಷ್ ಮಾಧ್ಯಮ ಶಾಲೆಗಳು ಆರಂಭವಾಗುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಗೆ ಕಳುಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಬೀಗ ಹಾಕುವ ಸ್ಥಿತಿ ಬರುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಆತಂಕ ವ್ಯಕ್ತಪಡಿಸಿದರು.
ಇಲ್ಲಿಯ ವಿನಾಯಕನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಜಿಲ್ಲಾ ಘಟಕದಿಂದ ನಿರ್ಮಿಸಿರುವ ನೂತನ ‘ದಿ. ಗಂಗಾಧರ ನಂದಿ’ ಆಡಳಿತ ಭವನದ ಉದ್ಘಾಟನೆ ಹಾಗೂ ‘ಕಾದಂಬರಿ ಪಿತಾಮಹ ಗಳಗನಾಥ–ಜಿಲ್ಲಾ ಕನ್ನಡ ಸಾಹಿತ್ಯ ಭವನ’ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಪ್ರತಿಯೊಂದು ಜಿಲ್ಲೆಯಲ್ಲಿಯೂ ನಾಯಿ ಕೊಡೆ ರೀತಿಯಲ್ಲಿ ಸಿಬಿಎಸ್‌ಇ ಇಂಗ್ಲೀಷ್ ಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಗದಗ ನಗರದಲ್ಲಿಯೇ 10 ಸಿಬಿಎಸ್‌ಇ ಶಾಲೆಗಳಿವೆ. ತಮ್ಮ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ವೈದ್ಯ, ಎಂಜಿನಿಯರ್ ಆಗುತ್ತಾರೆಂದು ಪೋಷಕರು ಅಂದುಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವ ಮನಸ್ಸು ಮಾಡುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.
‘ರಾಜ್ಯದಲ್ಲಿರುವ ಕನ್ನಡದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಮಾಹಿತಿ ನೋಡಿದರೆ, ಮನಸ್ಸಿಗೆ ನೋವಾಗುತ್ತದೆ. ವರ್ಷದಿಂದ ವರ್ಷಕ್ಕೆ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಕನ್ನಡಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ’ ಎಂದರು.
‘ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ಭಾಷೆ ಹಾಗೂ ಸಾಹಿತ್ಯ ಉಳಿಯುತ್ತದೆ. ಆದರೆ, ರಾಜ್ಯ ಸರ್ಕಾರವೂ ದ್ವಿಭಾಷಾ ಶಾಲೆ ತೆರೆಯುತ್ತಿದೆ. ಎಲ್‌ಕೆಜಿ–ಯುಕೆಜಿಯಿಂದಲೇ ಇಂಗ್ಲೀಷ್ ಮಾಧ್ಯಮ ಶಾಲೆಯೆಂಬ ಸಂಸ್ಕೃತಿ ಬೆಳೆಯುತ್ತಿದೆ. ಇದು ಗಂಭೀರ ವಿಷಯ. 1ನೇ ತರಗತಿಯಿಂದ 5ನೇ ತರಗತಿಯವರೆಗೆ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡಬೇಕು. ಈ ಬಗ್ಗೆ ಸ್ಥಳೀಯ ಶಾಸಕರೂ ಆಗಿರುವ ರುದ್ರಪ್ಪ ಲಮಾಣಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಬೇಕು. ಕನ್ನಡ ಶಾಲೆಗಳ ಉಳಿವಿಗಾಗಿ ಹಾಗೂ ಅವುಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಬೇಕು’ ಎಂದು ಕೋರಿದರು.
ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ಕನ್ನಡ ಶಾಲೆಗಳು ಎಂದಿಗೂ ಬಂದ್ ಆಗಬಾರದು ಹಾಗೂ ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕೆಂಬುದು ನನ್ನ ಎರಡು ಕನಸಾಗಿದೆ. ರಾಜ್ಯದ ಹಲವು ಕನ್ನಡ ಶಾಲೆಗಳಲ್ಲಿ ಮಕ್ಕಳಿಲ್ಲ. ಮಕ್ಕಳಿದ್ದರೂ ಕಟ್ಟಡ ಹಾಗೂ ಮೂಲ ಸೌಕರ್ಯಗಳಿಲ್ಲ. ಇಂಥ ಸ್ಥಿತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸದಿರುವುದು ನನಗೂ ಬೇಸರ ತರಿಸುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ‘ಶ್ರೀಮಂತರು ತಮ್ಮ ಮಕ್ಕಳನ್ನು ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಬಡವರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ದಾನಿಗಳ ಸಹಕಾರದೊಂದಿಗೆ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
ಶಾಸಕ ಬಸವರಾಜ ಶಿವಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಮುಖಂಡರಾದ ನೆಹರೂ ಓಲೇಕಾರ, ಎಂ.ಎಂ. ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಇದ್ದರು.
ವಿನಾಯಕನಗರದಲ್ಲಿರುವ ಆಡಳಿತ ಭವನ ಸಾಹಿತ್ಯ ಭವನ ನಿರ್ಮಾಣಕ್ಕೆ ಪೂಜೆ
‘ಒಂದೂವರೆ ಕೋಟಿ ವೆಚ್ಚದಲ್ಲಿ ಭವನ’
‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗ ಮಂಜೂರು ಮಾಡಿದ್ದ ₹3 ಕೋಟಿ ನಮಗೆ ಬರಲಿಲ್ಲ. ಅದರಿಂದ ಕೆಲಸಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಜನಪ್ರತಿನಿಧಿಗಳು ಹಾಗೂ ಇತರೆ ದಾನಿಗಳ ನೆರವಿನಿಂದ 4 ಗುಂಟೆ ಜಾಗದಲ್ಲಿ ಆಡಳಿತ ಭವನ ನಿರ್ಮಿಸಲಾಗಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಅವರು ‘ಆಡಳಿತ ಭವನದ ಪಕ್ಕದಲ್ಲಿಯೇ ಪ್ರತ್ಯೇಕವಾಗಿ 4 ಗಂಟೆ ಜಾಗವಿದೆ. ಈ ಜಾಗದಲ್ಲಿ ಒಂದೂವರೆ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸಾಹಿತ್ಯ ಭವನ ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ನಿರ್ಮಿತಿ ಕೇಂದ್ರದಿಂದ ಕಟ್ಟಡ ನಿರ್ಮಾಣ ಕೆಲಸ ಶುರುವಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.