ADVERTISEMENT

ಹಾವೇರಿ: ನೂತನ ಸಚಿವ ಸಂಪುಟ ರಚನೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಬಿ.ಸಿ.ಪಾಟೀಲಗೆ ಅಚಲ ವಿಶ್ವಾಸ: ನೆಹರು ಓಲೇಕಾರ ಪ್ರಬಲ ಆಕಾಂಕ್ಷಿ

ಸಿದ್ದು ಆರ್.ಜಿ.ಹಳ್ಳಿ
Published 2 ಆಗಸ್ಟ್ 2021, 19:30 IST
Last Updated 2 ಆಗಸ್ಟ್ 2021, 19:30 IST
ಬಿ.ಸಿ.ಪಾಟೀಲ, ನೆಹರು ಓಲೇಕಾರ, ಆರ್‌.ಶಂಕರ್‌
ಬಿ.ಸಿ.ಪಾಟೀಲ, ನೆಹರು ಓಲೇಕಾರ, ಆರ್‌.ಶಂಕರ್‌   

ಹಾವೇರಿ: ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಹಾವೇರಿ ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಒಲಿದ ಬೆನ್ನಲ್ಲೇ, ನೂತನ ಸಚಿವ ಸಂಪುಟದಲ್ಲಿ ಸ್ಥಾನ ಗಳಿಸಲು ಜಿಲ್ಲೆಯ ಶಾಸಕರ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದೆ.

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ 2008, 2013, 2018ರಲ್ಲಿ ‘ಹ್ಯಾಟ್ರಿಕ್‌ ಗೆಲುವು’ ಸಾಧಿಸಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದಿದೆ. ಬೊಮ್ಮಾಯಿ ಅವರು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ತ್ರಿವಳಿ ಸಚಿವರ ಭಾಗ್ಯ!
ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಹಾವೇರಿ ಜಿಲ್ಲೆಗೆ ‘ತ್ರಿವಳಿ ಸಚಿವರ ಭಾಗ್ಯ’ ಸಿಕ್ಕಿತ್ತು. ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲ ಮತ್ತು ತೋಟಗಾರಿಕೆ, ರೇಷ್ಮೆ ಸಚಿವರಾಗಿದ್ದ ಆರ್‌. ಶಂಕರ್‌ ಅವರು, ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲೂ ಸಚಿವ ಸ್ಥಾನ ಸಿಗಲಿದೆ ಎಂಬ ಅಚಲ ವಿಶ್ವಾಸದಲ್ಲಿದ್ದಾರೆ.

ADVERTISEMENT

ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವ ಕಾರಣ, ಮತ್ತೆ ಎರಡು ಸಚಿವ ಸ್ಥಾನಗಳು ಜಿಲ್ಲೆಗೆ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ಸಚಿವ ಸ್ಥಾನ ಸಿಕ್ಕರೆ ಅದು ಯಾರ ಪಾಲಾಗಲಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ.

ಮಿತ್ರ ಮಂಡಳಿ:ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದ ‘ಮಿತ್ರ ಮಂಡಳಿ’ಯಲ್ಲಿ ಕೆಲವರ ಸ್ಥಾನಕ್ಕೆ ಚ್ಯುತಿ ಬರುವ ಸಾಧ್ಯತೆಗಳಿವೆ ಎಂಬ ವದಂತಿ ಹರಡಿದೆ. ಹೀಗಾಗಿ, ಬಿಜೆಪಿಗೆ ವಲಸಿಗರಾಗಿ ಬಂದಬಿ.ಸಿ. ಪಾಟೀಲ ಮತ್ತು ಆರ್‌. ಶಂಕರ್‌ ಇವರಿಬ್ಬರಲ್ಲಿ ಯಾರಿಗೆ ಮಂತ್ರಿ ಪಟ್ಟ ಸಿಗುತ್ತದೆ ಎಂಬ ಕುತೂಹಲ ಜನರಲ್ಲಿ ಜಾಸ್ತಿಯಾಗಿದೆ.

ಮೊದಲನೇ ಬಾರಿ ಶಾಸಕರಾಗಿರುವ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ರಾಣೆಬೆನ್ನೂರು ಶಾಸಕ ಅರುಣಕುಮಾರ್‌ ಪೂಜಾರ್‌ ಅವರು ಸಚಿವ ಸ್ಥಾನದ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿಲ್ಲ. ಹಾನಗಲ್‌ ಶಾಸಕ ಸಿ.ಎಂ. ಉದಾಸಿ ಅವರು ಅಸ್ತಂಗತರಾಗಿದ್ದು, ಉಪಚುನಾವಣೆ ಘೋಷಣೆಯಾಗಬೇಕಿದೆ.ಹಾವೇರಿ ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿವೆ.

ಜಿಲ್ಲಾ ಉಸ್ತುವಾರಿಯ ಕನಸು:ಸಚಿವ ಸಂಪುಟ ವಿಸ್ತರಣೆ ಕೆಲವೇ ದಿನಗಳಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಿಲ್ಲೆಯ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಒತ್ತಡ ಹೇರುತ್ತಿದ್ದಾರೆ. ವಲಸಿಗ, ಜಾತಿ ಇತ್ಯಾದಿ ಅಂಶಗಳ ಲೆಕ್ಕಾಚಾರದಲ್ಲಿಯಾರಿಗೆ ಮಂತ್ರಿ ಭಾಗ್ಯ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮಂತ್ರಿ ಸ್ಥಾನ ಸಿಕ್ಕವರಿಗೆ ‘ಜಿಲ್ಲಾ ಉಸ್ತುವಾರಿ ಭಾಗ್ಯ’ವೂ ದೊರೆಯಬಹುದು ಎಂಬ ನಿರೀಕ್ಷೆಯೂ ಜನರಲ್ಲಿದೆ.ಒಟ್ಟಿನಲ್ಲಿ ಮುಖ್ಯಮಂತ್ರಿ ಸ್ಥಾನದ ಜತೆಗೆ ಸಚಿವ ಸ್ಥಾನಗಳೂ ಜಿಲ್ಲೆಗೆ ದೊರೆತರೆ ಹಾವೇರಿ ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಿ ‘ಮಾದರಿ ಜಿಲ್ಲೆ’ಯಾಗಿ ರೂಪುಗೊಳ್ಳುತ್ತದೆ ಎಂದು ಜನರು ಕನಸು ಕಟ್ಟಿಕೊಂಡಿದ್ದಾರೆ.

ಓಲೇಕಾರರಿಂದ ತೀವ್ರ ಪೈಪೋಟಿ
ಬ್ಯಾಡಗಿ ಮತ್ತು ಹಾವೇರಿ ವಿಧಾನಸಭಾ ಕ್ಷೇತ್ರಗಳಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನೆಹರು ಓಲೇಕಾರ ಅವರು ಸಚಿವ ಸ್ಥಾನದ ಮಹತ್ವಾಕಾಂಕ್ಷಿಯಾಗಿದ್ದಾರೆ.ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗಿನಿಂದಲೂ, ‘ನಾನು ಮಂತ್ರಿ ಸ್ಥಾನದ ಆಕಾಂಕ್ಷಿ’ ಎಂದು ಬಹಿರಂಗವಾಗಿಯೇ ಹಲವು ಬಾರಿ ಹೇಳಿದ್ದಾರೆ. ಇವರು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಉತ್ತರ ಕರ್ನಾಟಕದ ದಲಿತ (ಬಲಗೈ) ಸಮುದಾಯದ ಏಕೈಕ ಶಾಸಕರಾಗಿರುವ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿಯ ಮುಖಂಡರು, ನಗರಸಭೆ ಸದಸ್ಯರು, ದಲಿತ ಸಂಘಟನೆಗಳು, ಚಲವಾದಿ ಮಹಾಸಭಾ ಮತ್ತು ಅಭಿಮಾನಿಗಳ ಬಳಗ ನಿರಂತರವಾಗಿ ಪತ್ರಿಕಾಗೋಷ್ಠಿ, ಕಾಲ್ನಡಿಗೆ ಜಾಥಾಗಳನ್ನು ನಡೆಸುತ್ತಿವೆ. ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿರುವ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಕಲ್ಪಿಸುವಂತೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಪ್ರತಿಕ್ರಿಯೆಗಳು
ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಬಿಜೆಪಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುವ ಅಚಲ ವಿಶ್ವಾಸವಿದೆ.
– ಆರ್‌.ಶಂಕರ್‌, ಮಾಜಿ ಸಚಿವ

*

ನಾನು ಯಾವ ಖಾತೆ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡಿಲ್ಲ. ಕೊಟ್ಟ ಖಾತೆ ನಿಭಾಯಿಸುವ ಸಾಮರ್ಥ್ಯ ಇದೆ. ನಾನೊಬ್ಬ ಆಶಾವಾದಿ.
– ಬಿ.ಸಿ. ಪಾಟೀಲ, ಹಿರೇಕೆರೂರು ಶಾಸಕ

*

40 ವರ್ಷಗಳ ರಾಜಕೀಯ ಅನುಭವವಿದೆ. 3 ಬಾರಿ ಶಾಸಕನಾಗಿದ್ದೇನೆ. ಹಿಂದುಳಿದ ಸಮುದಾಯದ ನನಗೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಿದೆ.
– ನೆಹರು ಓಲೇಕಾರ, ಹಾವೇರಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.