
ಹಾವೇರಿ: ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ಮಕ್ಕಳ ದಿನವನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ ಹಲವು ಶಾಲೆಗಳಲ್ಲಿ ‘ಪೋಷಕರು–ಶಿಕ್ಷಕರ ಮಹಾಸಭೆ’ ನಡೆಯಿತು.
ಜಿಲ್ಲಾ ಕೇಂದ್ರ ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹನೀಯರ ವೇಷಭೂಷಣ ತೊಟ್ಟು ಗಮನ ಸೆಳೆದರು.
ಕಾರ್ಯಕ್ರಮದ ನಂತರ ಮಕ್ಕಳ ಪೋಷಕರ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಪೋಷಕರು, ಶಿಕ್ಷಕರ ಜೊತೆ ಮಾತುಕತೆ ನಡೆಸಿದರು.
ಸಂವಿಧಾನ ಪೀಠಿಕೆ ಓದು, ಮಕ್ಕಳ ಕಲಿಕಾ ಪ್ರಗತಿ, ದಾಖಲಾತಿ ಮತ್ತು ಹಾಜರಾತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಪಾಠ ಆಧರಿತ ಮೌಲ್ಯಮಾಪನ ವಿಶ್ಲೇಷಣೆ, ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಶಾಲೆಯ ಸರ್ವಾಗೀಣ ಅಭಿವೃದ್ಧಿಯಲ್ಲಿ ಪೋಷಕರ ಹಾಗೂ ಎಸ್‌ಡಿಎಂಸಿ ಪಾತ್ರ, ಆರ್‌ಟಿಇ ಕಾಯ್ದೆ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಪೋಕ್ಸೊ ಕಾಯ್ದೆ, ಉಪಹಾರ ಯೋಜನೆಯ ಸಮರ್ಪಕ ಅನುಷ್ಠಾನ, ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ದತಿ ನಿಷೇಧ ನೀತಿ, ವಿಶೇಷ ಚೇತನ ಮಕ್ಕಳಿಗೆ ಇಲಾಖೆಯ ಸೌಲಭ್ಯಗಳು, ಶಾಲೆಯ ಅಭಿವೃದ್ಧಿಯಲ್ಲಿ ಭಾಗಿದಾರರ ಪಾತ್ರ ಮತ್ತು ಮಕ್ಕಳ ಪ್ರತಿಭೆ ಗುರುತಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸರ್ಕಾರಿ ಉರ್ದು ಪ್ರೌಢಶಾಲೆ: ಹಾವೇರಿಯ ವೈಭವಲಕ್ಷ್ಮಿ ಪಾರ್ಕ್‌ನ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ‘ಮಕ್ಕಳ ದಿನಾಚರಣೆ’ ಹಾಗೂ ‘ಪೋಷಕರ ಮಹಾಸಭೆ’ಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಸರ್ಕಾರಿ ಶಾಲೆಗಳು ಉಳಿಯಬೇಕು. ಶಾಲೆಗಳು ಉಳಿಯಬೇಕಾದರೆ, ಪೋಷಕರು ಹಾಗೂ ಸಮುದಾಯದ ಪಾತ್ರ ಬಹಳ ಮುಖ್ಯವಾಗಿದೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಮುಖಂಡ ಕೊಟ್ರೇಶಪ್ಪ ಬಸೇಗಣ್ಣಿ, ಮುಖ್ಯಶಿಕ್ಷಕ ಬಿ.ಎಂ. ಬೇವಿನಮರದ, ಎಸ್.ಪಿ. ಮೂಡಲದವರ, ಜಹೀರ್ ಅಬ್ಬಾಸ ಶಿರಳ್ಳಿ, ದಾದಾಖಲಂದರ ಪೀರಸಾಬನವರ, ನಿರಂಜನಮೂರ್ತಿ ಇದ್ದರು.
‘ಸಂಸ್ಕಾರಯುತ ಶಿಕ್ಷಣ ಅವಶ್ಯಕ’
ರಾಣೆಬೆನ್ನೂರು: ಇಂದು ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಕರು ಮಹಾಭಾರತ ಮತ್ತು ರಾಮಾಯಣ ಶ್ರವಣಕುಮಾರರಂತ ನೀತಿ ಕಥೆಗಳ ತಿಳುವಳಿಕೆ ನೀಡಬೇಕಾಗಿದೆ. ಆಗ ಮಾತ್ರ ಸಮಾಜ ಸುಶಿಕ್ಷಿತವಾಗಿ ಇರಲು ಸಾಧ್ಯ ಎಂದು ತಾಲ್ಲೂಕಿನ ಮಣಕೂರ ಸಿದ್ಧಾರೂಢ ಮಠದ ಮಾತೋಶ್ರೀ ಬಸಮ್ಮ ತಾಯಿ ಹೇಳಿದರು. ತಾಲ್ಲೂಕಿನ ಮಾಕನೂರ ಗ್ರಾಮದ ಮಾರ್ಕಂಡೇಶ್ವರ ಸರ್ಕಾರಿ ಪೌಢಶಾಲೆಯಲ್ಲಿ ಶುಕ್ರವಾರ ಪ್ರಥಮ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರ ಜನ್ಮ ದಿನದ ಅಂಗವಾಗಿ ಏರ್ಡಪಡಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಪಾಲಕರ ಮತ್ತು ಶಿಕ್ಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ದುಬಾರಿ ಶಿಕ್ಷಣ ಕೊಡುವುದಕ್ಕಿಂತ ಶಿಕ್ಷಣ ಅಭಿವೃದ್ಧಿಗೆ ಸರ್ಕಾರ ಎಲ್ಲ ಮೂಲ ಸೌಲಭ್ಯ ಕೊಡುತ್ತಿದೆ. ಕಾರಣ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಲು ಮುಂದಾಗಬೇಕು ಅಂದಾಗ ನಿಮ್ಮ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ನುಡಿದರು. ಪಾಲಕರು ಶಿಕ್ಷಕರ ಮೇಲೆ ಬಾರ ಕಾಕಿ ಸುಮ್ಮನಿರುವುದು ಸರಿಯಲ್ಲ ನೀವು ಸಹ ಅವರ ಮೇಲೆ ನಿಗಾ ಇಡಬೇಕು. ಮಕ್ಕಳ ಕೈಯಲ್ಲಿ ಪೋನ್ ಬಳಕೆ ಮಾಡಲು ಕೊಡಬಾರದು. ಕೊಟ್ಟರೆ ಲಾಭಕ್ಕಿಂತ ಹಾನಿಯಾಗುವುದು ಹೆಚ್ಚು. ಅದರರಲ್ಲಿ ಬರಬಾರದ ದೃಶ್ಯಗಳು ಅವರ ಮೇಲೆ ದುಷ್ಟ ಪರಿಣಾಮ ಬೀರಲಿದೆ. ಇದರಿಂದ ಮಕ್ಕಳು ಅಡ್ಡ ದಾರಿ ತುಳಿಯಲಿವೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷ ವೈದ್ಯ ಡಾ.ಮಾಲತೇಶ ಹುಚ್ಚಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಕೃಷ್ಣಪ್ಪ ಸಾರ್ಥಿ ಮುಖ್ಯ ಶಿಕ್ಷಕಿ ಗದಿಗೆವ್ವ ದ್ಯಾಮಳ್ಳೇರ ಶಿಕ್ಷಕರಾದ ನಾಗರಾ ಮತ್ತೂರು ಸುರೇಶ ಕೆಬಿ ಶಂಕ್ರಗೌಡ ಮರಿಗೌಡ್ರ ತಿಮ್ಮಕ್ಕ ರೂಪಾ ಪಾಟೀಲ ಸಂಜೀವಕುಮಾರ ಚವಾಣ ಮಂಜುನಾಥ್ ಪ್ರಿಯಾಂಕಾ ಬಾರ್ಕಿ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.