
ಹಾವೇರಿ: ಜಿಲ್ಲೆಯಾದ್ಯಂತ ನೆಲೆಸಿರುವ ಕ್ರೈಸ್ತ್ ಸಮುದಾಯದ ಜನರು ಕ್ರಿಸ್‌ಮಸ್ ಹಬ್ಬವನ್ನು ಗುರುವಾರ ಸಡಗರ–ಸಂಭ್ರಮದಿಂದ ಆಚರಿಸಿದರು.
ವಿಶ್ವದ ಶಾಂತಿದೂತ ಯೇಸು ಕ್ರಿಸ್ತ ಜನಿಸಿದ ದಿನವಾದ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಎಲ್ಲ ಕಡೆಯೂ ಮನೆಮಾಡಿತ್ತು. ಶಾಂತಿ, ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಹಬ್ಬದ ನಿಮಿತ್ತ ಕ್ರೈಸ್ತ್ ಸಮುದಾಯದವರು ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಯೇಸು ಕ್ತಿಸ್ತ ಜನಿಸಿದ ದಿನವನ್ನು ಸಂಭ್ರಮದಿಂದ ಆಚರಿಸಲೆಂದು ಸಮುದಾಯದವರು ಹೊಸ ಬಟ್ಟೆಗಳನ್ನು ತೊಟ್ಟು ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಬೆಳಿಗ್ಗೆಯಿಂದಲೇ ಜನರು ಚರ್ಚ್‌ಗಳಿಗೆ ಬಂದು ಪ್ರಾರ್ಥನೆ ಆರಂಭಿಸಿದರು. ಮಧ್ಯಾಹ್ನದವರೆಗೂ ಚರ್ಚ್‌ನಲ್ಲಿದ್ದೂ ದೇವರ ಆರಾಧನೆ ಮಾಡಿದರು. ದೇವರ ಸಂದೇಶಗಳನ್ನು ಆಲಿಸಿದರು.
ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಬಳಿಯ ಚರ್ಚ್ ಹಾಗೂ ಹಾನಗಲ್ ರಸ್ತೆಯಲ್ಲಿರುವ ಚರ್ಚ್‌ನಲ್ಲಿ ಸೇರಿದ್ದ ಸಮುದಾಯದವರು, ಶಾಂತಿದೂತ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಮೂಲಕ ನಮಿಸಿದರು. ಯೇಸು ಕ್ರಿಸ್ತನ ತ್ಯಾಗ, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕೇಕ್ ಹಾಗೂ ಇತರೆ ಸಿಹಿ ಪದಾರ್ಥಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಎರಡು ದಿನ ಮುಂಚಿತವಾಗಿಯೇ ವಿದ್ಯುತ್ ದೀಪಾಲಂಕಾರದಿಂದ ಚರ್ಚ್‌ಗಳು ಕಂಗೊಳಿಸುತ್ತಿದ್ದವು. ಕ್ರಿಸ್‌ಮಸ್ ಟ್ರೀ ಹಾಗೂ ಸಾಂತಾ ಕ್ಲಾಸ್ ವೇಷ ತೊಟ್ಟ ಮಕ್ಕಳು ಗಮನ ಸೆಳೆದರು. ಮಕ್ಕಳ ಕ್ರಿಸ್‌ಮಸ್ ಹಬ್ಬವನ್ನೂ ವಿಶೇಷವಾಗಿ ಆಚರಿಸಿದರು. ಚರ್ಚ್ ಹಾಗೂ ಇತರೆ ಕಡೆಗಳಲ್ಲಿ ಹಾಡು, ನೃತ್ಯ ಕಾರ್ಯಕ್ರಮಗಳು ಜರುಗಿದವು.
ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ತಾಲ್ಲೂಕಿನಲ್ಲಿ ಕ್ರೈಸ್ತ್ ಸಮುದಾಯದವರು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಹಬ್ಬದ ಪ್ರಯುಕ್ತ ಹಲವು ಬಗೆಯ ವಿಶೇಷ ಉಡುಗೊರೆಗಳನ್ನು ಜನರು ವಿನಿಮಯ ಮಾಡಿಕೊಂಡರು. ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ, ಕ್ರೈಸ್ತರು ತಮ್ಮ ಅಕ್ಕಪಕ್ಕದ ಮನೆಗಳಿಗೆ ತೆರಳಿ ಹಬ್ಬದ ಶುಭಾಶಯ ಕೋರಿದರು. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಸ್ನೇಹಿತರಿಗೂ ಸಿಹಿ ಹಂಚಿದ ಕ್ರೈಸ್ತ್ ಸಮುದಾಯದವರು, ಭಾವೈಕ್ಯದ ಸಂದೇಶ ಸಾರಿದರು.
ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸಹ ಚರ್ಚ್‌ಗಳ ಬಳಿ ತೆರಳಿ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಪರಿಚಯಸ್ಥರ ಕ್ರೈಸ್ತ್ ಸ್ನೇಹಿತರನ್ನು ಭೇಟಿಯಾಗಿ, ಹಬ್ಬದ ಶುಭಾಶಯ ಕೋರಿದರು.ಪ್ರಾರ್ಥನೆ ಮುಗಿಸಿಕೊಂಡು ಮನೆಗೆ ತೆರಳಿದ ಕ್ರೈಸ್ತ್ ಸಮುದಾಯದವರು, ಸಹಭೋಜನ ಸವಿದರು. ಅಕ್ಕಪಕ್ಕದ ನಿವಾಸಿಗಳು ಹಾಗೂ ಸ್ನೇಹಿತರನ್ನು ಆಹ್ವಾನಿಸಿ ಒಟ್ಟಿಗೆ ಊಟ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.