ADVERTISEMENT

ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:38 IST
Last Updated 24 ಡಿಸೆಂಬರ್ 2025, 2:38 IST
ಹಾವೇರಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದರು 
ಹಾವೇರಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ನಿಲ್ಲಿಸಿದರು     

ಹಾವೇರಿ: ‘ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡಿರುವ ಕೇಂದ್ರ ಸರ್ಕಾರ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧದ ಷಡ್ಯಂತ್ರ ರೂಪಿಸಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿರುವ ಬಿಜೆಪಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದರು.

ನಗರದ ಕಾಗಿನೆಲೆ ರಸ್ತೆಯಲ್ಲಿರುವ ಮುರುಘಾಮಠದ ಬಳಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಘೋಷಣೆ ಕೂಗಿದರು.

ಕಾಗಿನೆಲೆ ರಸ್ತೆಯ ಮೂಲಕ ಬಿಜೆಪಿ ಜಿಲ್ಲಾ ಕಚೇರಿಯವರೆಗೂ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಪ್ರವೇಶ ದ್ವಾರವನ್ನು ತಳ್ಳಿ ಒಳಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಕಾರ್ಯಕರ್ತರನ್ನು ತಡೆದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಪರಸ್ಪರ ತಳ್ಳಾಟ, ನೂಕಾಟ ನಡೆಯಿತು.

ADVERTISEMENT

ಕೆಲವರು ಪ್ರವೇಶ ದ್ವಾರ ಗೇಟ್‌ ಏರಿ ಒಳಗೆ ನುಗ್ಗಲು ಯತ್ನಿಸಿದರು. ಅವರನ್ನು ಪೊಲೀಸರು ಕೆಳಗೆ ಇಳಿಸಿ, ವಶಕ್ಕೆ ಪಡೆದು ಕರೆದೊಯ್ದರು.

‘ರಾಜಕೀಯವಾಗಿ ಜನತೆಯ ವಿಶ್ವಾಸ ಗಳಿಸಬೇಕಾದ ಬಿಜೆಪಿಯವರು, ಕುತಂತ್ರದಿಂದ ಕಾಂಗ್ರೆಸ್‌ ವರಿಷ್ಠರನ್ನು ಕಟ್ಟಿಹಾಕಲು ಹೊರಟಿದ್ದಾರೆ. ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧದ ಷಡ್ಯಂತ್ರ ಮಾಡಿ, ಅವರ ಹೆಸರಿಗೆ ಚ್ಯುತಿ ತರುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ಎಲ್ಲ ತಂತ್ರಗಳಿಗೆ ಕಾಂಗ್ರೆಸ್ ಜಗ್ಗುವುದಿಲ್ಲ. ಇದಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ನೀಡಲು ಕಾಂಗ್ರೆಸ್ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಕೇಂದ್ರ ಸರ್ಕಾರ ಬದಲಿಸುತ್ತಿದೆ. ಇದು ಗ್ರಾಮೀಣ ಜನರಿಗೆ ಮಾಡುವ ಮೋಸವಾಗಿದೆ’ ಎಂದು ಎಚ್ಚರಿಕೆ ನೀಡಿದರು.

‘ನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಾವಣೆ ಮಾಡುವುದನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ನ್ಯಾಷನಲ್‌ ಹೆರಾಲ್ಡ್ ಪತ್ರಿಕೆ ವಿರುದ್ಧ ದಾಖಲಿಸಿರುವ ಪ್ರಕರಣ ದುರುದ್ದೇಶಪೂರಿತವಾಗಿದ್ದು, ಅದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ವಿಧಾನಸಭೆಯ ಉಪ ಸಭಾಪತಿಯೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮುಖಂಡರಾದ ಪ್ರೇಮಾ ಪಾಟೀಲ, ರಾಘವೇಂದ್ರ ಬಾಸೂರು, ಶಂಕರ ಮೆಹರವಾಡೆ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.