
ಹಾವೇರಿ: ‘ರಾಜ್ಯದ ಪದವೀಧರ ಮತಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಹಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಹಾವೇರಿಯಲ್ಲಿ ಫೆ. 14ರಂದು ಸಾಧನಾ ಸಮಾವೇಶ ನಡೆಯುವ ದಿನದಂದೇ, ಅನ್ಯಾಯ ಖಂಡಿಸಿ ಪ್ರತ್ಯೇಕ ಪ್ರತಿಭಟನಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ರಾಜ್ಯದ ಘಟಕದ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಟಿಕೆಟ್ ಆಕಾಂಕ್ಷಿ ಆರ್.ಎಂ. ಕುಬೇರಪ್ಪ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕಾಂಗ್ರೆಸ್ ಸಾಧನಾ ಸಮಾವೇಶದ ವಿರುದ್ಧ ನಮ್ಮ ಪ್ರತಿಭಟನೆಯಲ್ಲ. ಪಕ್ಷದ ಹಿರಿಯರಿಗೆ ಹಾಗೂ ಅಹಿಂದ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮುಖಂಡರಿಗೆ ತಿಳಿಸಲು ಹಾಗೂ ಕಣ್ತೆರೆಸಲು ಈ ಪ್ರತಿಭಟನೆ’ ಎಂದರು.
‘ರಾಜ್ಯದಲ್ಲಿ ಅಹಿಂದ ಸಂಘಟನೆ ಹುಟ್ಟುಹಾಕಿ 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಯಾರೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೆಂದು ಸಿದ್ದರಾಮಯ್ಯ ಅವರು ಹೇಳಿ ಮನೆ ಬಾಗಿಲಿಗೆ ಬಿ– ಫಾರ್ಮ್ ಕಳುಹಿಸಿದ್ದರಿಂದ ಚುನಾವಣೆಗೆ ನಿಂತಿದ್ದೆ. 8 ಸಾವಿರ ಮತಗಳ ಅಮಾನ್ಯ ಹಾಗೂ ಇತರೆ ತಾಂತ್ರಿಕ ಕಾರಣದಿಂದ ಸೋಲಾಯಿತು. ಆದರೆ, ಈ ಬಾರಿ ಗೆಲ್ಲುವ ಅವಕಾಶವಿದ್ದರೂ ಟಿಕೆಟ್ ಕೊಟ್ಟಿಲ್ಲ. ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ. ಶೇ 80ರಷ್ಟು ಜನರಿರುವ ಅಹಿಂದ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಪ್ರತಿಭಟನೆ ಮೂಲಕ ಪ್ರಶ್ನಿಸುತ್ತೇವೆ’ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.