ಹಾವೇರಿ: ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ) ಬಸ್‌ಗಳ ಚಾಲನೆಗೆ ಕಾಯಂ ಚಾಲಕರು ಕಂ ನಿರ್ವಾಹಕರನ್ನು ನೇಮಿಸಿಕೊಳ್ಳುತ್ತಿದ್ದ ಆಡಳಿತ ಮಂಡಳಿ, ಇದೀಗ ‘ಗುತ್ತಿಗೆ’ ಚಾಲಕರ ಮೊರೆ ಹೋಗಿದೆ. ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ 50 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದು, ಹೊಸದಾಗಿ 50 ಮಂದಿಗೆ ಆದೇಶ ನೀಡಲಾಗಿದೆ.
ಜಿಲ್ಲೆಯ ಬಹುತೇಕ ಜನರು ಸಂಚಾರಕ್ಕಾಗಿ ಸಾರಿಗೆ ಬಸ್‌ಗಳನ್ನು ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಜನರಿಗೆ ಸರಿಯಾದ ಸಮಯಕ್ಕೆ ಗುಣಮಟ್ಟದ ಸೇವೆ ಒದಗಿಸಬೇಕೆಂಬ ಉದ್ದೇಶ ಇಟ್ಟುಕೊಂಡಿರುವ ಸಾರಿಗೆ ನಿಗಮ, ಇದೀಗ ಗುತ್ತಿಗೆ ಚಾಲಕರ ಸೇವೆಯನ್ನು ಬಳಸಿಕೊಳ್ಳುತ್ತಿದೆ.
ಹಾವೇರಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ಸವಣೂರು, ಶಿಗ್ಗಾವಿ, ಬ್ಯಾಡಗಿ ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಗ್ರಾಮಗಳಿಗೆ ಸಂಚರಿಸುತ್ತಿರುವ ಹಲವು ಬಸ್‌ಗಳಲ್ಲಿ ಗುತ್ತಿಗೆ ಚಾಲಕರು ಕೆಲಸ ಮಾಡುತ್ತಿದ್ದಾರೆ. ಕಾಯಂ ಚಾಲಕರ ರೀತಿಯಲ್ಲಿಯೇ ಗುತ್ತಿಗೆ ಚಾಲಕರಿಗೂ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಬಸ್‌ಗಳು ಹಾಗೂ ಮಾರ್ಗಗಳ ನಿರ್ವಹಣೆ, ನಿಗದಿತ ಷರತ್ತುಗಳು ಸೇರಿದಂತೆ ಎಲ್ಲ ರೀತಿಯ ನಿಯಮಗಳು ಗುತ್ತಿಗೆ ಚಾಲಕರಿಗೂ ಅನ್ವಯವಾಗುತ್ತಿವೆ. ಗುತ್ತಿಗೆ ಚಾಲಕರ ಸೇವೆಗೆ, ಕಾಯಂ ಚಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
‘ಕಾಯಂ ಚಾಲಕರನ್ನು ಕೈಬಿಟ್ಟು, ಸಂಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಸಂಸ್ಥೆಯಲ್ಲಿ ಕಾಯಂ ಕೆಲಸ ಮಾಡಬೇಕೆಂದು ಕಾಯುತ್ತಿರುವ ಅಭ್ಯರ್ಥಿಗಳಿಗೆ ನಿರಾಸೆ ಉಂಟಾಗುತ್ತಿದೆ. ಲಿಖಿತ ಪರೀಕ್ಷೆ ಇಲ್ಲದೇ, ಚಾಲನಾ ತರಬೇತಿ ಮೂಲಕವಷ್ಟೇ ಚಾಲಕರನ್ನು ನೇಮಕ ಮಾಡಿಕೊಳ್ಳುವುದು ಅವೈಜ್ಞಾನಿಕ ಕ್ರಮ’ ಎಂದು ಕಾಯಂ ಚಾಲಕರು ದೂರುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯ ನೀಡಿರುವ ಅಧಿಕಾರಿಗಳು, ‘ಸಿಬ್ಬಂದಿ ಕೊರತೆಗೆ ತಾತ್ಕಾಲಿಕ ಪರಿಹಾರವಾಗಿ ಗುತ್ತಿಗೆ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಕಾಯಂ ಚಾಲಕರ ನೇಮಕವೂ ಚಾಲ್ತಿಯಲ್ಲಿರುತ್ತದೆ’ ಎಂದು ಹೇಳುತ್ತಿದ್ದಾರೆ.
11 ತಿಂಗಳು ಗುತ್ತಿಗೆ: ‘ಹಾವೇರಿ ಜಿಲ್ಲೆಯಲ್ಲಿ ವಾಕರಸಾಸಂ ಸಂಸ್ಥೆಯು ಜನರ ಮೆಚ್ಚುಗೆ ಗಳಿಸಿದೆ. ಶಕ್ತಿ ಯೋಜನೆಗೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರ ಅವಶ್ಯಕತೆಗೆ ತಕ್ಕಂತೆ ಸೇವೆ ನೀಡಬೇಕಿದೆ. ನಿಗಮದ ಹಿರಿಯ ಅಧಿಕಾರಿಗಳ ಸೂಚನೆಯಂತೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಹೊಸ ನೇಮಕಾತಿ ಪ್ರಕ್ರಿಯೆ ನಡೆದು, ಪೂರ್ಣಗೊಳ್ಳುವುದು ತಡವಾಗುತ್ತದೆ. ಇದೇ ಕಾರಣಕ್ಕೆ, ಗುತ್ತಿಗೆ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇವರ ಗುತ್ತಿಗೆ ಅವಧಿ ಕೇವಲ 11 ತಿಂಗಳು ಮಾತ್ರ. ಇದಾದ ನಂತರ, ಚಾಲಕರ ಸೇವೆಯನ್ನು ಪರಿಗಣಿಸಿ ಮುಂದುವರಿಸಲು ಅವಕಾಶವಿದೆ. ಅಗತ್ಯಕ್ಕೆ ತಕ್ಕಷ್ಟು ಕಾಯಂ ಚಾಲಕರು ಲಭ್ಯವಾದರೆ, ಗುತ್ತಿಗೆ ಸೇವೆ ಮೊಟಕುಗೊಳ್ಳಲಿದೆ’ ಎಂದರು.
‘ಕೆಲ ತಿಂಗಳ ಹಿಂದೆಯೇ ಗುತ್ತಿಗೆ ಆಧಾರದಲ್ಲಿ 50 ಚಾಲಕರನ್ನು ನೇಮಿಸಿಕೊಳ್ಳಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ಬಸ್‌ಗಳ ಚಾಲನೆಗೆ ಅವರನ್ನು ನಿಯೋಜಿಸಲಾಗಿದೆ. ಅವರೆಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ 150 ಮಂದಿಯನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿತ್ತು. ಈ ಪೈಕಿ, 50 ಮಂದಿಯನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಗಿದೆ. ಸದ್ಯದಲ್ಲೇ ಅವರು ಕೆಲಸಕ್ಕೆ ಹಾಜರಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.
ಚಾಲನಾ ಪರೀಕ್ಷೆ: ‘ಮೋಟಾರು ವಾಹನಗಳ ಕಾಯ್ದೆಯಡಿ ಚಾಲನಾ ಪರವಾನಗಿ ಪಡೆದಿರುವ ಹಾಗೂ ಚಾಲನೆಯಲ್ಲಿ ಅನುಭವವಿರುವ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಚಾಲನಾ ಪರೀಕ್ಷೆಯನ್ನು ಮಾತ್ರ ನಡೆಸಲಾಗುತ್ತಿದ್ದು, ಇದರಲ್ಲಿ ಉತ್ತೀರ್ಣರಾದವರಿಗೆ ಆದೇಶ ಪ್ರತಿ ನೀಡಲಾಗುತ್ತಿದೆ’ ಎಂದು ವಿಜಯಕುಮಾರ ಹೇಳಿದರು.
‘ಗುತ್ತಿಗೆ ಚಾಲಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಅನ್ವಯವಾಗುತ್ತದೆ. ಅರ್ಜಿದಾರರ ಮೀಸಲಾತಿ ಗಮನಿಸಿಯೂ ಅಂತಿಮ ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ. ಜೊತೆಗೆ, ಚಾಲಕರ ಹಿನ್ನೆಲೆ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ’ ಎಂದು ತಿಳಿಸಿದರು.
‘ಕಾಯಂ ಚಾಲಕರು ಹಾಗೂ ಗುತ್ತಿಗೆ ಚಾಲಕರು, ಇಬ್ಬರೂ ಒಂದೇ ರೀತಿಯಲ್ಲಿ ಕೆಲಸ ಮಾಡಬೇಕು. ಕೆಲಸದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕಾಯಂ ಚಾಲಕರಿಗೆ ಅನ್ವಯವಾಗುವ ನಿಯಮಗಳು, ಗುತ್ತಿಗೆ ಚಾಲಕರಿಗೂ ಅನ್ವಯವಾಗುತ್ತವೆ. ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಗೆ ಶಿಸ್ತು ಕ್ರಮವೂ ಇದೆ’ ಎಂದು ಹೇಳಿದರು.
Highlights - 11 ತಿಂಗಳ ಗುತ್ತಿಗೆ ಅವಧಿ ಗ್ರಾಮಗಳ ಬಸ್‌ಗಳಿಗೆ ನಿಯೋಜನೆ ನಿರ್ಲಕ್ಷ್ಯ– ಅಜಾಗರೂಕತೆ ವಿರುದ್ಧ ಶಿಸ್ತುಕ್ರಮ
Cut-off box - ‘ನಿತ್ಯ 2.50 ಲಕ್ಷ ಮಂದಿ ಪ್ರಯಾಣ’ ‘ಜಿಲ್ಲೆಯ ಎಂಟೂ ತಾಲ್ಲೂಕಿನಲ್ಲಿ ವಾಕರಸಾಸಂ ಬಸ್‌ಗಳು ಸಂಚರಿಸುತ್ತವೆ. ಸದ್ಯದ ಅಂಕಿ–ಅಂಶಗಳ ಪ್ರಕರಣ ನಿತ್ಯ 2.50 ಲಕ್ಷ ಮಂದಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ’ ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಹೇಳಿದರು. ‘ಲಭ್ಯವಿರುವ ಬಸ್‌ಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತಿದೆ. ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೆಲ ಪ್ರಸ್ತಾವಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದರು.
Cut-off box - 560 ಜಿಲ್ಲೆಯಲ್ಲಿರುವ ಒಟ್ಟು ಬಸ್‌ಗಳು 520 ಜಿಲ್ಲೆಯಲ್ಲಿರುವ ಬಸ್ ಮಾರ್ಗಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.