ಹಾನಗಲ್: ‘ಪಟ್ಟಣದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿವೆ. ಜನರು ಜೀವ ಭಯದಲ್ಲಿದ್ದಾರೆ’ ಎಂದು ಆರೋಪಿಸಿ ಹಾನಗಲ್ ನಾಗರಿಕ ಹಿತರಕ್ಷಣಾ ಸಮಿತಿಯು ಆಗಸ್ಟ್ 6ರಂದು ಹಾನಗಲ್ ಬಂದ್‌ಗೆ ಕರೆ ನೀಡಿದೆ.
ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುವ ಸಮಿತಿಯ ಸದಸ್ಯರು, ‘ಬೆಳಿಗ್ಗೆ 11 ಗಂಟೆಗೆ ಕುಮಾರೇಶ್ವರ ವಿರಕ್ತಮಠದಿಂದ ಮುಖ್ಯ ರಸ್ತೆ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು’ ಎಂದಿದ್ದಾರೆ.
‘ಹಾನಗಲ್ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ. ಅಮಾಯಕರ ಮೇಲೆ ಗೂಂಡಾಗಿರಿ, ಹಲ್ಲೆ, ಮಟ್ಕಾ, ಜೂಜು ಹೆಚ್ಚಾಗಿದೆ. ಕಾನೂನು ಬಾಹಿರ ಮೀಟರ್ ದಂಧೆ ನಡೆಯುತ್ತಿದೆ. ಜನರನ್ನು ಬೆದರಿಸುವುದು ಹಾಗೂ ತೊಂದರೆ ಕೊಡುವವರು ಹೆಚ್ಚಾಗಿದ್ದಾರೆ’ ಎಂದು ತಿಳಿಸಿದ್ದಾರೆ.
‘ಅಪರಾಧಗಳು ಹೆಚ್ಚಳವಾಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ನಿತ್ಯವೂ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೂ ತೊಂದರೆಯಾಗುತ್ತಿದೆ.’
‘ಅಪರಾಧ ಘಟನೆಗಳು ಹಾಗೂ ಅಕ್ರಮ ಚಟುವಟಿಕೆಗಳ ಏಜೆಂಟರ ವಿರುದ್ಧ ಸೂಕ್ತ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿ ಈ ಬಂದ್ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ವಕೀಲರ ಸಂಘ ಬೆಂಬಲ:
ಹಾನಗಲ್ ವಕೀಲರ ಸಂಘದಲ್ಲಿ ಮಂಗಳವಾರ ಬೆಳಿಗ್ಗೆ ಸಭೆ ನಡೆಯಿತು. ಹಾನಗಲ್ ಬಂದ್‌ಗೆ ವಕೀಲರ ಸಂಘ ಬೆಂಬಲ ನೀಡುತ್ತದೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಮಹಾಂತಿನಮಠ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.