ADVERTISEMENT

ಬೆಳೆಹಾನಿ | ₹ 28.84 ಕೋಟಿ ಮಂಜೂರು: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 3:53 IST
Last Updated 28 ನವೆಂಬರ್ 2025, 3:53 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಅಧಿಕಾರಿಗಳು, ಬೆಳೆ ಹಾನಿ ಪರಿಹಾರ ಮಂಜೂರಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ವಿಡಿಯೊ ಕಾನ್ಪ್‌ರೆನ್ಸ್‌ನಲ್ಲಿ ಪಾಲ್ಗೊಂಡರು
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಅಧಿಕಾರಿಗಳು, ಬೆಳೆ ಹಾನಿ ಪರಿಹಾರ ಮಂಜೂರಾತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಡೆಸಿದ ವಿಡಿಯೊ ಕಾನ್ಪ್‌ರೆನ್ಸ್‌ನಲ್ಲಿ ಪಾಲ್ಗೊಂಡರು    

ಹಾವೇರಿ: ‘ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಮಂಜೂರು ಮಾಡಿದೆ. ಜಿಲ್ಲೆಯ 33,726 ರೈತರಿಗೆ ಹೆಚ್ಚುವರಿ ಪರಿಹಾರವಾಗಿ ₹ 28.84 ಕೋಟಿ ಮೊತ್ತಕ್ಕೆ ಗುರುವಾರ ಮಂಜೂರಾತಿ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಶೀಘ್ರವೇ ಪರಿಹಾರದ ಹಣ ಜಮೆ ಆಗಲಿದೆ’ ಎಂದರು.

‘ಜಿಲ್ಲೆಯಲ್ಲಾದ ಬೆಳೆ ಹಾನಿಗೆ ಸಂಬಂಧಪಟ್ಟಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ಸಮಿತಿಯಿಂದ ಸಮೀಕ್ಷೆ ನಡೆಸಲಾಗಿತ್ತು. ಜಿಲ್ಲೆಯಲ್ಲಿ 16,701 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿಯಾದ ಬಗ್ಗೆ ವರದಿ ಸಿದ್ಧಪಡಿಸಲಾಗಿತ್ತು. ಅದೇ ವರದಿ ಆಧರಿಸಿ ಇದೀಗ ಹೆಚ್ಚುವರಿ ಪರಿಹಾರ ಮಂಜೂರು ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಬೆಳೆ ಹಾನಿಗೆ ಸಂಬಂಧಪಟ್ಟಂತೆ ಆರಂಭದಲ್ಲಿಯೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಡಿಆರ್‌ಎಫ್‌) ಜಿಲ್ಲೆಯ 33,726 ರೈತರಿಗೆ ₹ 14.66 ಕೋಟಿ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿತ್ತು. ಈ ಮೊತ್ತದ ನಂತರವೂ ಹೆಚ್ಚುವರಿಯಾಗಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದರು. ಈಗ ಅದೇ ಮಾತಿನಂತೆ, ಹೆಚ್ಚುವರಿಯಾಗಿ ₹ 14.18 ಕೋಟಿ ಪರಿಹಾರ ನೀಡಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ ₹ 8,500 ಪರಿಹಾರವನ್ನು ಗುರುವಾರ ಮಂಜೂರಾತಿ ಮಾಡಿದ್ದಾರೆ. ಜಿಲ್ಲೆಯಲ್ಲಿಯೂ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ಶನಿವಾರ ಅಥವಾ ಸೋಮವಾರದೊಳಗೆ ರೈತರ ಖಾತೆಗಳಿಗೆ ಹಣ ಜಮೆ ಆಗಲಿದೆ’ ಎಂದು ಹೇಳಿದರು.

‘ಮಳೆಯಾಶ್ರಿತ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಪರಿಹಾರಕ್ಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಪರಿಶೀಲನೆ ನಡೆಸಿ, ಆಕ್ಷೇಪಣೆಗೂ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿದ ನಂತರ, ಬೆಳೆ ಹಾನಿ ಅನುಭವಿಸಿದ ರೈತರ ಪಟ್ಟಿ ಬಿಡುಗಡೆ ಮಾಡಿ ಅದರಂತೆ ಪರಿಹಾರ ನೀಡಲಾಗುತ್ತಿದೆ’ ಎಂದರು.

‘ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3,000 ನೀಡಬೇಕು’ ಎಂದು ರೈತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶಿವಾನಂದ, ‘ಪ್ರಸಕ್ತ ಸಾಲಿನಲ್ಲಿ ದೇಶದಾದ್ಯಂತ ಉತ್ತಮ ಮಳೆಯಾಗಿದೆ. ಮೆಕ್ಕೆಜೋಳ, ಕಬ್ಬು ಹಾಗೂ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಹೀಗಾಗಿ, ಮೆಕ್ಕೆಜೋಳದ ಬೆಲೆ ಕುಸಿತವಾಗಿದೆ’ ಎಂದರು.

‘ಮೆಕ್ಕೆಜೋಳ ಬೆಳೆ ಪ್ರಮಾಣ ಹೆಚ್ಚಿರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ದರ ಕುಸಿತವಾಗುವ ಬಗ್ಗೆಯೂ ತಿಳಿಸಲಾಗಿತ್ತು. ಆದರೆ, ಅವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹಲವು ದಿನ ಕಳೆದ ನಂತರವೇ ಎಂಎಸ್‌ಪಿ ಮಾಡಿದ್ದಾರೆ. ಬೆಂಬಲ ಬೆಲೆ ನಿಗದಿಪಡಿಸುವುದು ಹಾಗೂ ಬೆಲೆ ನಿಯಂತ್ರಿಸುವುದು ಕೇಂದ್ರ ಸರ್ಕಾರದ ಕೆಲಸ. ಅದನ್ನು ಕಾಲ ಕಾಲಕ್ಕೆ ಮಾಡಬೇಕು. ಆದರೆ, ಕೇಂದ್ರ ಸರ್ಕಾರದ ವಿಳಂಬದಿಂದ ಇಂದು ಈ ಸಮಸ್ಯೆಯಾಗಿದೆ. ಮಾರ್ಗಸೂಷಿ ಮಾಡುವಲ್ಲಿಯೂ ಕೇಂದ್ರದ ದೋಷ ಎದ್ದು ಕಾಣುತ್ತಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರದಿಂದಲೇ ಸಮಸ್ಯೆಯಾಗಿದೆ. ಆದರೆ, ಬಿಜೆಪಿಯವರು ರೈತರ ಪರ ಹೋರಾಟ ಮಾಡುತ್ತಿದ್ದಾರೆ. ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅವರು ಹೋರಾಟ ಮಾಡುವುದನ್ನು ಬಿಟ್ಟು, ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿಸಿ ಮೆಕ್ಕೆಜೋಳದ ಬೆಲೆ ಏರಿಕೆಗೆ ಪ್ರಯತ್ನಿಸಬೇಕು. ಸುಖಾಸುಮ್ಮನೇ ಪ್ರತಿಭಟನೆ ಮಾಡಿ ಜನರ ದಾರಿ ತಪ್ಪಿಸಬಾರದು’ ಎಂದು ಹೇಳಿದರು.

‘ಬಿಜೆಪಿ ಅಧಿಕಾರದಲ್ಲಿರುವ ಬಿಹಾರ, ಪಂಜಾಬ್ ಹಾಗೂ ಇತರೆ ರಾಜ್ಯದಲ್ಲಿಯೂ ಎಂಎಸ್‌ಪಿ ಸರಿಯಾಗಿ ಜಾರಿಯಾಗಿಲ್ಲ. ಅಲ್ಲಿಯೂ ಮೆಕ್ಕೆಜೋಳ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ. ಬೆಲೆ ನಿಯಂತ್ರಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಹೀಗಾಗಿ, ಸಂಸದರು ಹಾಗೂ ಕೇಂದ್ರ ಸಚಿವರೇ ರೈತರ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಹೇಳಿದರು.

ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಇದ್ದರು.

ರಾಜ್ಯಕ್ಕೆ ಅಧಿಕಾರವಿಲ್ಲ:
‘ಮೆಕ್ಕೆಜೋಳದ ಬೆಲೆಗಳ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ರಚಿಸಿ ಕಾರ್ಖಾನೆಗಳಿಗೆ ಖರೀದಿಗೆ ಸೂಚಿಸಬೇಕು. ಮಾರ್ಗಸೂಚಿ ಜಾರಿ ಮಾಡುವ ಕಾನೂನಿನ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ’ ಎಂದು ಸಚಿವ ಶಿವಾನಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.