ಹಾವೇರಿ: ದೇಶದಾದ್ಯಂತ ನಡೆದ ಸೈಬರ್ ವಂಚನೆಗಳಿಗೆ ಬಂಕಾಪುರ ಪಟ್ಟಣ ಕೆಲ ನಿವಾಸಿಗಳ ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡಿಕೊಂಡಿರುವ ಆತಂಕಕಾರಿ ಸಂಗತಿ ಹೊರಬಿದ್ದಿದ್ದು, ಅಂಥ ಖಾತೆಗಳನ್ನು ಹಲವು ರಾಜ್ಯಗಳ ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.
ಸೈಬರ್ ವಂಚನೆಯ ಹಣ ಜಮೆ ಆಗಿದ್ದ ಬಂಕಾಪುರದ ಕೆಲ ಬ್ಯಾಂಕ್‌ಗಳ ಖಾತೆದಾರರಿಗೆ ನೋಟಿಸ್ ನೀಡಿರುವ ಹಲವು ರಾಜ್ಯಗಳ ಪೊಲೀಸರು, ವಿಚಾರಣೆ ನಡೆಸಲು ಮುಂದಾಗಿದ್ದರು. ಏಕಾಏಕಿ ಮನೆಗೆ ಬಂದ ನೋಟಿಸ್ ನೋಡಿ ಗಾಬರಿಗೊಂಡ ಖಾತೆದಾರರು, ಹಾವೇರಿ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆ ಮೆಟ್ಟಿಲೇರಿದ್ದಾರೆ.
‘ಶಿಗ್ಗಾವಿ ತಾಲ್ಲೂಕಿನ ಬಂಕಾಪುರಕ್ಕೆ ಕೆಲ ತಿಂಗಳ ಹಿಂದೆಯಷ್ಟೇ ಬಂದಿದ್ದ ಹಲ್ವಾ ವ್ಯಾಪಾರಿ ಕೇರಳದ ಮೊಹಮ್ಮದ್ ಅಬು ಎಂಬಾತ, ತನ್ನ ಮಗ ಬಿಟ್ ಕಾಯಿನ್ (ಬಿಟಿಸಿ) ವ್ಯವಹಾರ ನಡೆಸುತ್ತಿರುವುದಾಗಿ ಹೇಳಿದ್ದ. ಬ್ಯಾಂಕ್ ಖಾತೆಗಳ ಪುಸ್ತಕ ಹಾಗೂ ಅದಕ್ಕೆ ಲಿಂಕ್ ಮಾಡಿದ ಸಿಮ್‌ಕಾರ್ಡ್‌ಗಳನ್ನು ನೀಡಿದರೆ, ಪ್ರತಿ ತಿಂಗಳು ಲಾಭದ ಹಣ ನೀಡುವುದಾಗಿ ಆಮಿಷವೊಡ್ಡಿದ್ದ. ಅದನ್ನು ನಂಬಿ ಆತನಿಗೆ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಸಿಮ್‌ಕಾರ್ಡ್‌ಗಳನ್ನು ನೀಡಿದ್ದೆವು. ನಮ್ಮ ಖಾತೆಗಳನ್ನು ಸೈಬರ್ ವಂಚನೆಗೆ ಬಳಸಿರುವ ಬಗ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಹಲ್ವಾ ವ್ಯಾಪಾರಿ ಮೊಹಮ್ಮದ್ ಅಬು ಹಾಗೂ ಆತನ ಮಗ ಮಹ್ಮದ್ ಸಾಹಲ್ ಎಂಬುವವರು ನಮಗೆ ಹಣದ ಆಮಿಷವೊಡ್ಡಿ, ಖಾತೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರು ನೀಡಿದ್ದಾರೆ.
ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಂಡಿರುವ ಸೆನ್ ಠಾಣೆ ಪೊಲೀಸರು, ಹಲ್ವಾ ವ್ಯಾಪಾರಿ ಮೊಹಮ್ಮದ್ ಅಬುನನ್ನು ಈಗಾಗಲೇ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮಗ ಮಹ್ಮದ್ ಸಾಹಲ್ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
‘ಖಾತೆಗಳ ದುರ್ಬಳಕೆಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಬಿಟ್ ಕಾಯಿನ್ ವ್ಯವಹಾರದ ಹೆಸರಿನಲ್ಲಿ ಜನರಿಂದ ಖಾತೆಗಳ ವಿವರ ಪಡೆದು, ಸೈಬರ್ ವಂಚನೆಗೆ ಬಳಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಆರೋಪಿಗಳು ಹಾಗೂ ಅವರ ಜೊತೆಗಿರುವ ಎಲ್ಲರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೇರಳದಿಂದ ಬಂದಿದ್ದ ವ್ಯಾಪಾರಿ: ‘ಕೇರಳದ ಕ್ಯಾಲಿಕಟ್ ಜಿಲ್ಲೆಯ ಪುಥುಪ್ಪಡಿ ತಾಲ್ಲೂಕಿನ ಎಲಿಕಡ್ ಗ್ರಾಮದ ಮೊಹಮ್ಮದ್ ಅಬು, ಹಲ್ವಾ ಮಾರಲೆಂದು ಬಂಕಾಪುರಕ್ಕೆ ಬಂದಿದ್ದ. ತಮ್ಮದೇ ಮುಸ್ಲಿಂ ಸಮುದಾಯದ ಜನರನ್ನು ಪರಿಚಯಿಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ನನ್ನ ಮಗ, ಬಿಟ್ ಕಾಯಿನ್ ವ್ಯವಹಾರದಲ್ಲಿ ನೂರಾರು ಕೋಟಿ ಗಳಿಸುತ್ತಿದ್ದಾನೆ. ಆದರೆ, ಒಂದೇ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಆಗುತ್ತಿಲ್ಲ. ಹೆಚ್ಚು ಜನರ ಖಾತೆಗಳು ಬೇಕಾಗಿವೆ. ಖಾತೆ ಪುಸ್ತಕ, ಜೋಡಣೆಯಾದ ಸಿಮ್‌ಕಾರ್ಡ್, ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ನೀಡಿದರೆ, ಪ್ರತಿ ತಿಂಗಳು ಇಂತಿಷ್ಟು ಹಣ ನೀಡುತ್ತಾನೆ’ ಎಂದು ಮೊಹಮ್ಮದ್ ಅಬು ಜನರಿಗೆ ಹೇಳಿದ್ದ. ಅದನ್ನು ನಂಬಿದ್ದ ಜನರು, ಖಾತೆ ವಿವರ ನೀಡಲು ಒಪ್ಪಿದ್ದರು’ ಎಂದು ತಿಳಿಸಿದರು.
ಕೇರಳದಲ್ಲಿ ದಾಖಲೆ ಹಸ್ತಾಂತರ: ‘ಆರೋಪಿಗಳ ಮಾತಿನಂತೆ ಬಂಕಾಪುರದ ಕೆಲವರು, ಕೇರಳಕ್ಕೆ ಹೋಗಿದ್ದರು. ಅಲ್ಲಿಯ ಹೋಟೆಲ್‌ವೊಂದರಲ್ಲಿ ಉಳಿದುಕೊಂಡು ಆರೋಪಿಯನ್ನು ಭೇಟಿಯಾಗಿದ್ದರು. ವಿವಿಧ ಬ್ಯಾಂಕ್‌ಗಳ 12 ಖಾತೆ ಪುಸ್ತಕ, ಜೋಡಣೆಯಾದ ಸಿಮ್ ಕಾರ್ಡ್‌ಗಳು, ಎಟಿಎಂ ಕಾರ್ಡ್, ಪಿನ್ ನಂಬರ್, ಆನ್‌ಲೈನ್ ಬ್ಯಾಂಕಿಂಗ್‌ನ ಯೂಸರ್ ಐಡಿ–ಪಾಸ್‌ವರ್ಡ್ ಎಲ್ಲ ದಾಖಲೆಗಳನ್ನು ಆರೋಪಿಗೆ ಹಸ್ತಾಂತರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಬಂಕಾಪುರಕ್ಕೆ ವಾಪಸು ಬಂದಿದ್ದ ಖಾತೆದಾರರಿಗೆ, ಕೆಲ ದಿನಗಳ ನಂತರ ಆರೋಪಿಗಳು ತಲಾ ₹ 2 ಸಾವಿರ ಹಾಗೂ ₹ 5 ಸಾವಿರ ನೀಡಿದ್ದರು. ಇದರಿಂದಾಗಿ ಖಾತೆದಾರರಿಗೆ ಮತ್ತಷ್ಟು ವಿಶ್ವಾಸ ಬಂದಿತ್ತು. ಬೇರೆ ಜನರಿಂದಲೂ ಖಾತೆ ಪುಸ್ತಕ, ಸಿಮ್‌ಕಾರ್ಡ್ ಪಡೆದು ಆರೋಪಿಗಳಿಗೆ ನೀಡಲು ತಯಾರಿ ನಡೆಸಿದ್ದರು. ಮಧ್ಯವರ್ತಿಗಳೂ ಹುಟ್ಟಿಕೊಳ್ಳಲಾರಂಭಿಸಿದ್ದರು’ ಎಂದು ತಿಳಿಸಿದರು.
ಬ್ಯಾಂಕ್ ಖಾತೆಗಳ ದುರ್ಬಳಕೆ ಹೆಚ್ಚಾಗುತ್ತಿದೆ. ಜನರು ಹಣದ ಆಮಿಷಕ್ಕೆ ಒಳಗಾಗಿ ಖಾತೆ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ಎಚ್ಚರಿಕೆ ವಹಿಸಬೇಕು.– ಶಿವಶಂಕರ ಗಣಚಾರಿ, ಇನ್‌ಸ್ಪೆಕ್ಟರ್ ಹಾವೇರಿ ಸೆನ್ ಠಾಣೆ
‘ಬ್ಯಾಂಕ್ ಖಾತೆಗಳ ಮಾರಾಟ ಜಾಲ’
‘ಜನರಿಗೆ ಹಣದ ಆಮಿಷವೊಡ್ಡಿ ಅವರಿಂದ ಬ್ಯಾಂಕ್ ಖಾತೆಗಳ ಪುಸ್ತಕ ಹಾಗೂ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಹಾವೇರಿ ಸೆನ್ ಠಾಣೆ ಪೊಲೀಸರು ಹೇಳಿದರು.
‘ಬಂಕಾಪುರ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಗಳು ಸಿಕ್ಕಿವೆ. ಸದ್ಯ 12 ಖಾತೆಗಳು ಸೈಬರ್ ವಂಚನೆಗೆ ಬಳಕೆಯಾಗಿರುವುದು ಕಂಡುಬಂದಿದೆ. ಆದರೆ ಈ ಬಗ್ಗೆ ಖಾತೆದಾರರಿಗೆ ಮಾಹಿತಿ ಇಲ್ಲ’ ಎಂದರು.
‘ಪದವಿ ವ್ಯಾಸಂಗ ಮಾಡುತ್ತಿರುವ ಮಹ್ಮದ್ ಸಾಹಲ್ ಕೇರಳ ಹಾಗೂ ರಾಜಸ್ಥಾನ್‌ದ ಹಲವು ಸೈಬರ್ ವಂಚಕರ ಜೊತೆ ಸ್ನೇಹವಿಟ್ಟುಕೊಂಡಿರುವ ಮಾಹಿತಿಯಿದೆ. ಬಂಕಾಪುರದ ಜನರಿಂದ ಪಡೆದ ಖಾತೆ ಪುಸ್ತಕ ಸಿಮ್ ಕಾರ್ಡ್ ಎಟಿಎಂ ಕಾರ್ಡ್‌ಗಳನ್ನು ಆತ ವಂಚಕರಿಗೆ ಮಾರಾಟ ಮಾಡಿರುವ ಅನುಮಾನವಿದೆ. ಆತ ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ತಿಳಿಸಿದರು.
ಹಲವು ರಾಜ್ಯಗಳಿಂದ ನೋಟಿಸ್
‘ದೇಶದಾದ್ಯಂತ ಸೈಬರ್ ವಂಚನೆ ಎಸಗಿದ್ದ ಆರೋಪಿಗಳು ಅದೇ ಹಣವನ್ನು ಬಂಕಾಪುರ ಜನರ ಹೆಸರಿನಲ್ಲಿದ್ದ ಖಾತೆಗೆ ವರ್ಗಾಯಿಸಿ ಡ್ರಾ ಮಾಡಿಕೊಂಡಿದ್ದರು. ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹಣ ವರ್ಗಾವಣೆ ಮಾಹಿತಿ ಪರಿಶೀಲಿಸಿದಾಗ ಬಂಕಾಪುರ ಖಾತೆಗಳ ವಿವರ ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.
‘ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಕೇರಳ ಸೇರಿದಂತೆ ಹಲವು ರಾಜ್ಯಗಳ ಪೊಲೀಸರು ಬಂಕಾಪುರದ ಜನರಿಗೆ ಈಗಾಗಲೇ ನೋಟಿಸ್ ನೀಡಿದ್ದಾರೆ. ಭಯಗೊಂಡ ಜನರು ಸೆನ್ ಠಾಣೆಗೆ ದೂರು ನೀಡಿದ್ದಾರೆ. ಹಲ್ವಾ ವ್ಯಾಪಾರಿಯ ಹಣದಾಸೆಗಾಗಿ ಖಾತೆಗಳನ್ನು ನೀಡಿದ್ದಾಗಿ ಅವರೆಲ್ಲರೂ ಹೇಳಿಕೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.