ಹಾವೇರಿ: ‘ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಹಾಗೂ ವಿಲೀನಗೊಳಿಸದಂತೆ ತಡೆಯಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಇಲ್ಲಿಯ ನಗರಸಭೆ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಶಿವಾನಂದ ಪಾಟೀಲ ಅವರು, ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ ಮಾತನಾಡಿದರು.
‘ವಿಶ್ವವಿದ್ಯಾಲಯ ಮುಚ್ಚುವುದಿಲ್ಲವೆಂದು ಮುಖ್ಯಮಂತ್ರಿಯವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಹಾವೇರಿ ವಿ.ವಿ ಮುಚ್ಚುವ ಪ್ರಶ್ನೆಯೇ ಇಲ್ಲ. ವಿಶ್ವವಿದ್ಯಾಲಯದಿಂದ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು. ಹಾವೇರಿ ವಿ.ವಿ ಉಳಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡಲಾಗುವುದು’ ಎಂದರು.
ಗೊಂದಲದ ಹೇಳಿಕೆಯಿಂದ ಆತಂಕ: ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, ‘ವಿಶ್ವವಿದ್ಯಾಲಯ ಮುಚ್ಚುವುದಿಲ್ಲವೆಂದು ಬಜೆಟ್‌ನಲ್ಲಿ ಸರ್ಕಾರ ಹೇಳಿದೆ. ಆದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ವಿಭಿನ್ನ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಗೊಂದಲ ಹೇಳಿಕೆಗಳು ಹಾವೇರಿ ಜನರಲ್ಲಿ ಆತಂಕ ಮೂಡಿಸಿವೆ’ ಎಂದು ತಿಳಿಸಿದರು.
‘ಸರ್ಕಾರ ಯಾವುದೇ ಸೌಕರ್ಯ ಒದಗಿಸದಿದ್ದರೂ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಉನ್ನತ ಶಿಕ್ಷಣ ಪಡೆಯಲು ವಿವಿಧ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಹಾವೇರಿ ವಿ.ವಿ ಮುನ್ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ, ವಿ.ವಿ ಮಚ್ಚುವುದಾಗಿ ಸರ್ಕಾರ ದಿಢೀರ್ ಘೋಷಿಸಿದೆ. ಈ ಆದೇಶ ಹಿಂಪಡೆಯುವಂತೆ ಜಿಲ್ಲೆಯ ಮಠಾಧೀಶರು, ಶಿಕ್ಷಣ ತಜ್ಞರು, ಜನಪರ ಸಂಘಟನೆಗಳು ಹಾಗೂ ಜಿಲ್ಲೆಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾವೇರಿ ವಿ.ವಿ ಮುಚ್ಚಿದರೆ, ಬೀದಿಗಿಳಿದು ಹೋರಾಟ ಮಾಡಲು ಸಜ್ಜಾಗಿದ್ದಾರೆ’ ಎಂದು ಹೇಳಿದರು.
ಸಾಹಿತಿ ಸತೀಶ ಕುಲಕರ್ಣಿ, ಹೊನ್ನಪ್ಪ ಮರೆಮ್ಮನವರ, ಉಡಚಪ್ಪ ಮಾಳಗಿ, ಎಂ. ಆಂಜನೇಯ, ಮಲ್ಲಿಕಾರ್ಜುನ ಬಳ್ಳಾರಿ, ವಿಭೂತಿ ಶೆಟ್ಟಿನಾಯಕ, ಬಸವರಾಜ ಎಸ್., ಪದ್ಮರಾಜ ಕಳಸೂರು, ಸಿದ್ದು ಮರೆಮ್ಮನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.