ADVERTISEMENT

ಹಾವೇರಿಯಲ್ಲಿ ಮನೆಯಲ್ಲೇ ಸರಳವಾಗಿ ‘ಈದ್’‌ ಆಚರಣೆ

ಕೊರೊನಾ ಸೋಂಕು ನಿವಾರಣೆಗೆ ವಿಶೇಷ ಪ್ರಾರ್ಥನೆ: ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡ ಮಕ್ಕಳು

​ಪ್ರಜಾವಾಣಿ ವಾರ್ತೆ
Published 25 ಮೇ 2020, 10:50 IST
Last Updated 25 ಮೇ 2020, 10:50 IST
ಹಾವೇರಿ ನಗರದಲ್ಲಿ ಸೋಮವಾರ ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮಕ್ಕಳು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು 
ಹಾವೇರಿ ನಗರದಲ್ಲಿ ಸೋಮವಾರ ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮಕ್ಕಳು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು    

ಹಾವೇರಿ: ಕೊರೊನಾ ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ನಗರದಲ್ಲಿ ಮುಸ್ಲಿಮರು ಈ ಬಾರಿಮನೆಯಲ್ಲೇ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಸೋಮವಾರ ಸರಳವಾಗಿ ‘ಈದ್‌ ಉಲ್‌ ಫಿತ್ರ್’ ಆಚರಿಸಿದರು.

ಭಾನುವಾರ ಸಂಜೆ 6.45ಕ್ಕೆ ‘ಚಂದ್ರ ದರ್ಶನ’ ಪಡೆದ ಮುಸ್ಲಿಮರು, ಒಂದು ತಿಂಗಳ ರಂಜಾನ್‌ ಉಪವಾಸವನ್ನು ಅಂತ್ಯಗೊಳಿಸಿದರು. ಉಪವಾಸದ ಮಾರನೇ ದಿನವಾದ ಸೋಮವಾರ ಹೊಸ ಬಟ್ಟೆ ಧರಿಸಿ, ಕಣ್ಣಿಗೆ ಸುರ್ಮ (ಕಾಡಿಗೆ) ಹಾಕಿಕೊಂಡು, ಟೋಪಿ ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿಕೊಂಡು ಸಂಭ್ರಮಿಸಿದರು. ಹೆಣ್ಣು ಮಕ್ಕಳು ತರಹೇವಾರಿ ಮೆಹಂದಿ ಹಾಕಿಕೊಂಡು ಖುಷಿಪಟ್ಟರು.

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲದ ಕಾರಣ ತಮ್ಮ ತಮ್ಮ ಮನೆಗಳಲ್ಲೇ ‘ನಮಾಜ್’‌ ಮಾಡಿದರು.ನೆರೆಹೊರೆಯವರೊಂದಿಗೆ ‘ಈದ್‌ ಮುಬಾರಕ್‌’ ಎಂದು ಹೇಳುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉಳ್ಳವರು ಬಡವರಿಗೆ ‘ಜಕಾತ್‌’ (ದಾನ) ಮಾಡುವ ಮೂಲಕ ಮಾನವೀಯತೆ ಮೆರೆದರು. ಕೊರೊನಾ ಸೋಂಕು ನಿವಾರಣೆಯಾಗಲಿ, ದೇಶದ ಜನರು ಸುರಕ್ಷಿತವಾಗಿರಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಮನೆಯಲ್ಲಿ ಸುರಕುಂಬಾ (ಹಾಲಿನ ಖೀರು), ಚಿಕನ್ ಬಿರಿಯಾನಿ, ಮಟನ್‌ ಬಿರಿಯಾನಿ, ಕಬಾಬ್‌ ಮುಂತಾದ ಖಾದ್ಯಗಳನ್ನು ಮಹಿಳೆಯರು ತಯಾರಿಸಿದರು. ನೆರೆಹೊರೆಯವರೊಂದಿಗೆ ಮತ್ತು ಸ್ನೇಹಿತರಿಗೆ ಖಾದ್ಯಗಳನ್ನು ಕೊಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

‘ಲಾಕ್‌ಡೌನ್‌ ಪರಿಣಾಮ ಎರಡು ತಿಂಗಳಿಂದ ದುಡಿಮೆಯಿರಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಆಚರಿಸಲು ಬಹುತೇಕರಿಗೆ ಹಣಕಾಸಿನ ಸಮಸ್ಯೆ ಕಾಡಿತು. ಕೆಲವರಿಗೆ ಹೊಸ ಬಟ್ಟೆ ಖರೀದಿಸಲು ಸಾಧ್ಯವಾಗಲಿಲ್ಲ. ಕೊರೊನಾ ಸೋಂಕು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಈ ಸಂಕಷ್ಟದ ಸಮಯದಲ್ಲಿ ಸರಳವಾಗಿ ಈದ್‌ ಆಚರಿಸಿದೆವು’ ಎಂದು ನಾಗೇಂದ್ರನಮಟ್ಟಿಯ ತಾಜುದ್ದೀನ್‌ ಮಂಜ್ಲಾಪುರ ತಿಳಿಸಿದರು.

‘ಪ್ರತಿ ವರ್ಷ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಬಾರಿ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿತ್ತು. ಆದ ಕಾರಣ ನಾವೆಲ್ಲರೂ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದೆವು.ಕೊರೊನಾ ಸೋಂಕು ನಿವಾರಣೆಯಾಗಲಿ ಎಂದು ಬೇಡಿಕೊಂಡೆವು’ ಎಂದು ಸೂಲಮಟ್ಟಿ ಬಡಾವಣೆಯ ಖಲೀಲ್‌ ಅಹಮದ್‌ ಹುಲಗೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.