ಹಾವೇರಿ: ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಈದ್ ಮಿಲಾದ್ ಆಚರಿಸಿದ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾಮದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಭಾವೈಕ್ಯ ಮೆರೆದರು.
ಸಾಮೂಹಿಕ ಮೆರವಣಿಗೆಯುಲ್ಲಿ ಹಿಂದೂ ಮುಖಂಡರು, ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. ಮಾರ್ಗಮಧ್ಯೆ ಸರ್ವಧರ್ಮ ಗಣಪತಿ, ಹಿಂದೂ ಮಹಾಗಣಪತಿ ಹಾಗೂ ಓಣಿಯ ಗಣಪತಿ ಮೂರ್ತಿಗಳಿದ್ದ ಪೆಂಡಾಲ್‌ಗೆ ಭೇಟಿ ನೀಡಿದರು. ಮಂಡಳಿಗಳ ಪದಾಧಿಕಾರಿಗಳು ಆತ್ಮಿಯವಾಗಿ ಸ್ವಾಗತಿಸಿದರು.
‘ನೆಗಳೂರಿನಲ್ಲಿ ಹಿಂದೂ–ಮುಸ್ಲಿಮರು, ಅಣ್ಣ–ತಮ್ಮಂದಿರಂತೆ ಬಾಳುತ್ತಿದ್ದೇವೆ. ಪ್ರವಾದಿ ಮುಹಮದ್ ಜನ್ಮದಿನವನ್ನು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದ್ದೇವೆ’ ಎಂದು ಅಂಜುಮನ್ ಸಮಿತಿಯ ಉಪಾಧ್ಯಕ್ಷ ಹುಚ್ಚುಸಾಬ್ ನದಾಫ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಜುಂಮನ್ ಕಮಿಟಿ ಅಧ್ಯಕ್ಷ ಸುಲೇಮಾನ್ ಸುಂಕದ, ಗೌಸಿಯಾ ಕಮಿಟಿ ಅಧ್ಯಕ್ಷ ನಿಸ್ಸಾರ್‌ಅಹ್ಮದ್ ಮುಲ್ಲಾ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಾಸು ಸುರಣಗಿ, ರಫೀಕ್ ಕುದರಿ, ಹುಸೇನಸಾಬ್ ತೆಲಗಿ, ರಮೇಶ ಹಳ್ಳಾಕಾರ, ರಾಮನಗೌಡ ರೊಡ್ಡಗೌಡರ, ದಾನಪ್ಪ ಸುಕುಳಿ ಇದ್ದರು.
ನರೇಗಲ್‌ನಲ್ಲಿ ಮಾಲಾರ್ಪಣೆ: ಜಿಲ್ಲೆಯ ನರೇಗಲ್ ಗ್ರಾಮದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು, ಮಹಾ ಮಂಡಳ ಸದಸ್ಯರ ಮೂಲಕ ಗಣಪತಿ ಮೂರ್ತಿಗೆ ಮಾಲಾರ್ಪಣೆ ಮಾಡಿಸಿ ಸೌಹಾರ್ದ ಸಂದೇಶ ಸಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.