ADVERTISEMENT

ಹಾವೇರಿ | ಯುವ ಮತದಾರರನ್ನು ಸೆಳೆದ ಡಿ.ಸಿ.ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:49 IST
Last Updated 26 ಜನವರಿ 2026, 4:49 IST
ಬೆಂಗಳೂರಿನಲ್ಲಿ ಭಾನುವಾರ ಜರುಗಿದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ‘ಉತ್ತಮ ಚುನಾವಣಾಧಿಕಾರಿ’ ಪ್ರಶಸ್ತಿ ಪ್ರದಾನ ಮಾಡಿದರು
ಬೆಂಗಳೂರಿನಲ್ಲಿ ಭಾನುವಾರ ಜರುಗಿದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ‘ಉತ್ತಮ ಚುನಾವಣಾಧಿಕಾರಿ’ ಪ್ರಶಸ್ತಿ ಪ್ರದಾನ ಮಾಡಿದರು   

ಹಾವೇರಿ: ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧಿತ ಕೆಲಸಗಳನ್ನು ಅಚ್ಚುಕಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ರಾಜ್ಯ ಮಟ್ಟದ (ಬೆಳಗಾವಿ ವಿಭಾಗದಿಂದ) ‘ಉತ್ತಮ ಜಿಲ್ಲಾ ಚುನಾವಣಾಧಿಕಾರಿ’ ಪ್ರಶಸ್ತಿ ಲಭಿಸಿದೆ.

ಚುನಾವಣೆ ಕೆಲಸಗಳನ್ನು ಚುರುಕಿನಿಂದ ಮಾಡಿದ್ದಕ್ಕಾಗಿ ಹಿರೇಕೆರೂರು ತಹಶೀಲ್ದಾರ್ ರೇಣುಕಾ ಎಂ. ಅವರಿಗೆ ‘ಉತ್ತಮ ಸಹಾಯಕ ನೊಂದಣಾಧಿಕಾರಿ’ ಹಾಗೂ ಹಾವೇರಿ ವಿಧಾನಸಭಾಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಯಾದ ಶಿಕ್ಷಕ ಗುಡ್ಡಪ್ಪ ಲಚ್ಚಮ್ಮವರ ಅವರಿಗೆ ‘ಉತ್ತಮ ಬಿಎಲ್‌ಒ’ ಪ್ರಶಸ್ತಿ ದೊರಕಿದೆ.

ಬೆಂಗಳೂರಿನಲ್ಲಿ ಭಾನುವಾರ ಜರುಗಿದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ತಹಶೀಲ್ದಾರ್ ರೇಣುಕಾ ಹಾಗೂ ಬಿಎಲ್‌ಒ ಗುಡ್ಡಪ್ಪ ಅವರಿಗೆ ಪ್ರಮಾಣ ಪತ್ರ, ಸ್ಮರಣಿಕೆ ಸಮೇತ ಪ್ರಶಸ್ತಿ ಪ್ರಧಾನ ಮಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ ಹಾಜರಿದ್ದರು.

ADVERTISEMENT

2024ನೇ ಸಾಲಿನಲ್ಲಿ ಯುವ ಮತದಾರರ ನೋಂದಣಿ, ಮತದಾರರ ಸಮಗ್ರ ಪರಿಷ್ಕರಣೆ ಸೇರಿದಂತೆ ಚುನಾವಣೆ ಕೆಲಸಗಳನ್ನು ಕೈಗೊಳ್ಳಲು ಚುನಾವಣಾ ಆಯೋಗವು ತಿಳಿಸಿತ್ತು. ಅದರಂತೆ ರಾಜ್ಯದ ನಾಲ್ಕು ವಿಭಾಗ ಮಟ್ಟದಲ್ಲಿ ಉತ್ತಮ ಚುನಾವಣಾಧಿಕಾರಿ ಹಾಗೂ ಇತರೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು.

ಅದರಂತೆ, ಹಾವೇರಿ ಜಿಲ್ಲೆಯಲ್ಲಿ 38,652 ಯುವ ಮತದಾರರ ನೋಂದಣಿ ಮಾಡಿಸಲಾಗಿದೆ. ಜೊತೆಗೆ, ಪ್ರಜಾಪ್ರಭುತ್ವದ ಜೀವಾಳು ಆಗಿರುವ ಮತದಾನದ ಹಕ್ಕು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ತಾಲ್ಲೂಕು ಹಾಗೂ ಬೂತ್ ಮಟ್ಟದಲ್ಲೂ ಅಚ್ಚುಕಟ್ಟಾಗಿ ಚುನಾವಣಾ ಕೆಲಸಗಳನ್ನು ಮಾಡಲಾಗಿತ್ತು. ಇದೆಲ್ಲ ಅಂಶವನ್ನು ಪರಿಗಣಿಸಿ, ಈ ಪ್ರಶಸ್ತಿ ನೀಡಲಾಗಿದೆ.

ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ, ಚಾಮರಾಜನಗರದ ಸಿ.ಟಿ. ಶಿಲ್ಪಾನಾಗ್, ಕೊಪ್ಪಳದ ಸುರೇಶ ಬಿ. ಇಟ್ನಾಳ, ಬೆಂಗಳೂರು ನಗರದ ಜಿ. ಜಗದೀಶ್ ಹಾಗೂ ಯಾದಗಿರಿಯ ಬಿ. ಸುಶೀಲಾ ಅವರಿಗೂ ‘ಉತ್ತಮ ಚುನಾವಣಾಧಿಕಾರಿ’ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.