ADVERTISEMENT

ಸವಣೂರು | ರೈತರ ನೋಡುವ ದೃಷ್ಟಿಕೋನ ಬದಲಾಗಲಿ: ಎಸ್.ಎಸ್.ಹಿರೇಮಠ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:58 IST
Last Updated 26 ಜನವರಿ 2026, 4:58 IST
<div class="paragraphs"><p>ಹಾವೇರಿ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ನೇಗಿಲಯೋಗಿ ಗೋಷ್ಟಿಯಲ್ಲಿ ಕಲಾವಿದ ಎಸ್.ಎಸ್.ಹಿರೇಮಠ ಮಾತನಾಡಿದರು.</p></div>

ಹಾವೇರಿ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ನೇಗಿಲಯೋಗಿ ಗೋಷ್ಟಿಯಲ್ಲಿ ಕಲಾವಿದ ಎಸ್.ಎಸ್.ಹಿರೇಮಠ ಮಾತನಾಡಿದರು.

   

ಸವಣೂರು: ‘ಎಲ್ಲರೂ ಬದುಕುತ್ತಿರುವುದು ರೈತರಿಂದ. ರೈತರನ್ನು ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕು. ದೇಶವನ್ನಾಳಿದ ಪರಕೀಯರು ವ್ಯಾಪಾರಕ್ಕೆಂದು ಬಂದವರು ದೇಶವನ್ನಾಳಿ ಹೋದರೋ. ಹಾಗೇ ಮುಂದೊಂದು ದಿನ ಭೂಮಿಯನ್ನಾಳುವವರು ಬರುತ್ತಾರೆ’ ಎಂದು ಕಲಾವಿದ ಎಸ್.ಎಸ್.ಹಿರೇಮಠ ಆತಂಕ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಜರುಗಿದ ಹಾವೇರಿ ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಭಾನುವಾರ ಜರುಗಿದ ನೇಗಿಲಯೋಗಿ ಗೋಷ್ಠಿಯಲ್ಲಿ ‘ಏನು ಮಾಡಿ ಎನು ಬಂತಣ್ಣ ಓ ರೈತಣ್ಣ’ ವಿಷಯ ಕುರಿತು ಅವರು ಮಾತನಾಡಿದರು.

ADVERTISEMENT

‘ನೆಲ, ಜಲ, ನಾಡು  ಮತ್ತು ಹೆತ್ತ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರ ಭೂಮಿಯ ಮೇಲೆ ಬದುಕಲು ಯೋಗ್ಯರಾಗಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರೂ ಯಾವೊಬ್ಬ ರಾಜಕಾರಣಿಗಳಿಂದ ಬದಕುತ್ತಿಲ್ಲ. ಎಲ್ಲರೂ ಬದುಕುತ್ತಿರುವುದು ರೈತರಿಂದ. ರೈತರಲ್ಲಿ ಅಕ್ಷರದ ಜ್ಞಾನ ಇಲ್ಲವೆಂದರೂ ಭೂಮಿಯಲ್ಲಿ ಏನನ್ನು ಹೇಗೆ ಬಿತ್ತಿ ಬೆಳೆದು ದೇಶಕ್ಕೆ ಅನ್ನವನ್ನು ನೀಡಬೇಕು ಎಂಬ ವಿಶೇಷ ಜ್ಞಾನವಿದೆ. ಆದ್ದರಿಂದ, ಮೊಟ್ಟಮೊದಲು ರೈತರನ್ನು ನೆನೆದು ಊಟ ಮಾಡಬೇಕು’ ಎಂದರು.

‘ಮಕ್ಕಳನ್ನು ವೈದ್ಯ, ಎಂಜಿನಿಯರ್, ಶಿಕ್ಷಕರನ್ನಾಗಿ ಮಾಡಲು ವಿವಿಧ ಕೋರ್ಸ್‌ಗಳಿವೆ. ಆದರೆ, ಮನುಷ್ಯರನ್ನಾಗಿ ಮಾಡಲು ಯಾವುದೇ ಕೋರ್ಸ್‌ಗಳಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿನ ಮಾತುಗಳನ್ನು ಕೇಳಿಯೆ ಮನುಷ್ಯರಾಗಬೇಕು. ಮನುಷ್ಯರಾಗಬೇಕು ಎನ್ನುವಂಥ ಆಲೋಚನೆಗಳು ಬರಬೇಕಾದರೆ ನಾವು ಕೃಷಿಕರನ್ನು ನೋಡಬೇಕು. ಭೂಮಿ ಮೇಲಿರುವ ಸಕಲ ಜೀವರಾಶಿಗಳಿಗೆ ಅನ್ನವನ್ನು ಹಾಕಿರುವ ವ್ಯಕ್ತಿ ರೈತ. ಅದನ್ನು ಅರಿತುಕೊಂಡು ರೈತರಿಗೆ ಗೌರವ ನೀಡಿ ಅವರ ಬೆಳೆಗಳಿಗೆ ತಕ್ಕ ಬೆಲೆ ನೀಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿಂಗಪ್ಪ ಚಳಗೇರಿ ಅವರು ‘ಕೃಷಿ ಋಷಿ’ ವಿಷಯ ಕುರಿತು ಮಾತನಾಡಿ, ‘ಭಾರತವನ್ನು ಜಗತ್ತಿಗೆ ಜಗದ್ಗುರುವಾಗಿಸಿದ ಋಷಿ ಮುನಿಗಳು ಮೂಲತಃ ಕೃಷಿಕರಾಗಿದ್ದಾರೆ. ಭೂಮಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ಕೃಷಿಕರಾಗಿರುತ್ತಾರೋ ಅವರು ದೈವದ ಸಾನ್ನಿಧ್ಯದಲ್ಲಿರುತ್ತಾರೆ. ನಾವು ಬದುಕಿ ಮತ್ತೊಬ್ಬರನ್ನು ಬದುಕಿಸುವಂತ ತತ್ವಕ್ಕೆ ಮೊದಲು ಕೃಷಿಕನಾಗಬೇಕು’ ಎಂದರು.

‘ಬಂಡವಾಳಶಾಹಿ, ಜಾಗತೀಕರಣ, ಕೈಗಾರಿಕರಣ, ನಗರವನ್ನು ಕಟ್ಟಬೇಕು ಎನ್ನುವಂತ ವ್ಯಕ್ತಿಯಿಂದ ಪರರ ಉದ್ಧಾರದ ಆಲೋಚನೆಗಳು ಬರಲು ಸಾಧ್ಯವಿಲ್ಲ. ಯಾರು ಕೃಷಿಕನಾಗಿ ಭೂತಾಯಿಯ ಸೇವೆಯನ್ನು ಮಾಡುತ್ತಾರೋ ಅವರಿಂದ ಮಾತ್ರ ಜಗತ್ತನ್ನು ಬದುಕಿಸುವಂಥ, ವಿಶ್ವಕ್ಕೆ ಶಾಂತಿ, ಉಪದೇಶವನ್ನು ಮಾಡುವಂಥ ಶಕ್ತಿ ಬರುತ್ತದೆ’ ಎಂದರು.

ಸಮ್ಮೇಳನಾಧ್ಯಕ್ಷ ಎಚ್.ಐ. ತಿಮ್ಮಾಪುರ, ರೈತ ಹೋರಾಟಗಾರ ಮಲ್ಲಿಕಾರ್ಜುನ ಬಳ್ಳಾರಿ, ಪ್ರಕಾಶ ಬಾರ್ಕಿ, ಚನ್ನಪ್ಪ ಮರಡೂರ, ರಮೇಶ ದೊಡ್ಡೂರ, ಅಬ್ದುಲಖಾದರ ಬುಡಂದಿ, ನೂರಅಹ್ಮದ ಮುಲ್ಲಾ, ನೀಲಪ್ಪ ಹರಿಜನ, ಶಿವಾಜಿ ಲಮಾಣಿ, ಎನ್.ಎಂ.ರಬನಾಳ, ರಾಜುನಗೌಡ ಪಾಟೀಲ, ಬಸವರಾಜ ಹರಿಜನ
ಇದ್ದರು.

ಎಲ್ಲರೂ ಬದುಕುತ್ತಿರುವುದು ರೈತರಿಂದ

ರೈತರಿಗೆ ಗೌರವ ನೀಡಿ ಅವರ ಬೆಳೆಗಳಿಗೆ ತಕ್ಕ ಬೆಲೆ ನೀಡಬೇಕು

ಕೃಷಿಕನಿಗೆ ಮಾತ್ರ ಜಗತ್ತನ್ನು ಬದುಕಿಸುವ ಶಕ್ತಿ ಇದೆ

ಸಮ್ಮೇಳನದ ನಿರ್ಣಯಗಳು

  • ವರದಾ–ಬೇಡ್ತಿ ಮತ್ತು ಧರ್ಮಾ ನದಿಗಳ ಜೋಡಣೆ ಯೋಜನೆ ಅನುಷ್ಠಾನಗೊಳಿಸಬೇಕು

  • ಗದಗದಿಂದ ಕುಮಟಾವರೆಗೂ ರೈಲು ಮಾರ್ಗ ನಿರ್ಮಿಸಬೇಕು

  • ಸವಣೂರ ತಾಲ್ಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ರಚನೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.