ರಾಣೆಬೆನ್ನೂರಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಬಿ.ವೈ. ವಿಜಯೇಂದ್ರ ಮಾತನಾಡಿದರು.
ರಾಣೆಬೆನ್ನೂರು: ‘ರಾಜ್ಯದ ಮುಖ್ಯಮಂತ್ರಿ ಖುರ್ಚಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಶುರುವಾಗಿದ್ದು, ಇದರ ಭಾಗವಾಗಿ ಔತಣಕೂಟಗಳು ನಡೆಯುತ್ತಿವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ಇತ್ತೀಚೆಗೆ ನಿಧನರಾದ ಜಿಲ್ಲಾ ಕಾರ್ಯದರ್ಶಿ ದೀಪಕ ಹರಪನಹಳ್ಳಿ ಅವರ ಸಂತಾಪ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತಿದೆ. ದುಷ್ಟ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ಮುಂದುವರಿಯಲಿದೆ’ ಎಂದರು.
‘ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇತ್ತೀಚೆಗೆ ಆಕಳ ಕೆಚ್ಚಲು ಕೊಯ್ದಿರುವ ಘಟನೆ ಅಮಾನವೀಯವಾದ್ದದ್ದು. ರಾಜ್ಯದ ಮುಖ್ಯಮಂತ್ರಿಗೆ ಈ ಕುರಿತು ಯಾವುದೇ ನೋವಾಗಿಲ್ಲ. ಇಂದಿನ ಸರ್ಕಾರದ ಆಡಳಿತದಿಂದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವೇತನ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಕಾಂಗ್ರೇಸ್ ಪಕ್ಷದಿಂದಲೇ ಸಂಚು ನಡೆಯುತ್ತಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬಿಜೆಪಿ ಜಿಲ್ಲಾ ಘಕದ ಅಧ್ಯಕ್ಷ ಅರುಣಕುಮಾರ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.