
ಹಾವೇರಿ: ಬೆಂಗಳೂರಿನಿಂದ ಧಾರವಾಡಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ ₹ 24.91 ಲಕ್ಷ ಮೌಲ್ಯದ ಮೊಬೈಲ್‌ಗಳ ಕಳವು ಪ್ರಕರಣದ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫ್ಲಿಪ್‌ಕಾರ್ಟ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
‘ಜಿಲ್ಲೆಯ ಕಾಕೋಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫೆ. 1ರಂದು ಹೊರಟಿದ್ದ ಲಾರಿಯ ಬಾಗಿಲಿನ ಬೀಗವನ್ನು ಸಿನಿಮೀಯ ರೀತಿಯಲ್ಲಿ ತೆರೆದು, ಮೊಬೈಲ್‌ಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳಿದ್ದ 6 ಬಾಕ್ಸ್‌ಗಳನ್ನು ಕಳವು ಮಾಡಲಾಗಿದೆ’ ಎಂದು ಲಾರಿ ಚಾಲಕ ಮಲಿಕಜಾನ್ ಮುಲ್ಲಾ ಅವರು ಠಾಣೆಗೆ ದೂರು ನೀಡಿದ್ದಾರೆ.
‘ಕಳವು ಬಗ್ಗೆ ಚಾಲಕ ದೂರು ನೀಡಿದ್ದು, ವಸ್ತುಗಳ ಬಗ್ಗೆ ಫ್ಲಿಪ್‌ಕಾರ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಯಾವ ವಸ್ತುಗಳು ಕಳುವಾಗಿವೆ? ಮೊಬೈಲ್‌ಗಳ ಐಎಂಇಐ ಸಂಖ್ಯೆ ಏನು ಎಂಬ ಮಾಹಿತಿ ಕಲೆ ಹಾಕುತ್ತಿದ್ದೇವೆ. ಐಎಂಇಐ ಸಿಕ್ಕರೆ, ಮೊಬೈಲ್‌ಗಳ ಸುಳಿವು ಸಿಗುತ್ತದೆ’ ಎಂದು ಪೊಲೀಸರು ಹೇಳಿದರು.
‘ಸರಕು ಸಾಗಣೆ ವಾಹನಗಳಲ್ಲಿ ಸುರಕ್ಷತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಲಾರಿಯಲ್ಲಿ ಅಳವಡಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆ ಲಾರಿ ನಿಂತಿತ್ತು. ಆದರೆ, ಕಾಕೋಳ ಬಳಿಯೇ ಬಾಗಿಲು ತೆರೆದಿರುವುದಾಗಿ ಕಂಪನಿಯ ತಾಂತ್ರಿಕ ವಿಭಾಗ ತಿಳಿಸಿದೆ. ಸತ್ಯಾಸತ್ಯತೆ ಪತ್ತೆಗೆ ತನಿಖೆ ನಡೆಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.