ADVERTISEMENT

ರಾಣೆಬೆನ್ನೂರು | ಪುಷ್ಪ ಕೃಷಿ; ಯಶಸ್ಸು ಕಂಡ ಲಿಂಗದಹಳ್ಳಿಯ ರೈತ 

ಕಾಂಪೋಸ್ಟ್‌ –ಹಸಿರೆಲೆ ಗೊಬ್ಬರ, ಹನಿ ನೀರಾವರಿ ಬಳಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:06 IST
Last Updated 28 ಸೆಪ್ಟೆಂಬರ್ 2025, 3:06 IST
ರಾಣೆಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಯುವ ರೈತ ಅರುಣ ರೇವಣೆಪ್ಪ ಬಿಷ್ಟಣ್ಣನವರ ಬೆಳೆದಿರುವ ಸೇವಂತಿಗೆ ಹೂ 
ರಾಣೆಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಯುವ ರೈತ ಅರುಣ ರೇವಣೆಪ್ಪ ಬಿಷ್ಟಣ್ಣನವರ ಬೆಳೆದಿರುವ ಸೇವಂತಿಗೆ ಹೂ    

ರಾಣೆಬೆನ್ನೂರು: ಸೇವಂತಿಗೆ ನಾಡು ಎಂದೇ ಪ್ರಸಿದ್ದಿ ಪಡೆದಿರುವ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಯುವ ರೈತ ಅರುಣ ರೇವಣೆಪ್ಪ ಬಿಷ್ಟಣ್ಣನವರ ಅವರು ಬಿಕಾಂ ಪದವೀಧರನಾಗಿದ್ದು, ಪುಷ್ಪ ಕೃಷಿ ಮತ್ತು ಸಾವಯವ ಕೃಷಿಯಲ್ಲಿ ತೊಡಗಿದ್ದು ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಅರುಣ ಅವರು ಸರ್ಕಾರಿ ಕೆಲಸಕ್ಕೆ ಆಸೆ ಪಡದೇ, ಖಾಸಗಿ ಉದ್ಯೋಗ ಅರಸಿಕೊಂಡು ಪಟ್ಟಣಕ್ಕೆ ಹೋಗಲಾರದೇ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಸಮೀಪದ ಕುಮಧ್ವತಿ ನದಿ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಸದಾ ಹರಿಯುವ ನದಿ ನೀರಿನ ಸಮೀಪದ ಜಮೀನಲ್ಲಿನ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಕೊಳವೆ ಬಾವಿ ಹಾಕಿಸದೇ, ಬರಿ ತೆರೆದ ಬಾವಿ ನೀರೇ ಕೃಷಿಗೆ ಆಸರೆಯಾಗಿದೆ.

ಇವರು ಲಿಂಗದಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ರಾಣೆಬೆನ್ನೂರಿನಲ್ಲಿ ಪ್ರೌಢ ಶಿಕ್ಷಣ, ಕೂಲಂಬಿಯ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಪಿಯುಸಿ ಓದಿದ್ದು ಶೇ 78 ರಷ್ಟು ಅಂಕಗಳನ್ನು ಗಳಿಸಿ ಕಾಲೇಜಿಗೆ ಟಾಪರ್‌ ಆಗಿದ್ದಾರೆ. ದಾವಣಗೆರೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ. ಸ್ಕಾಲರ್‌ ಶಿಪ್‌ನಲ್ಲೇ ಓದಿದ್ದಾರೆ.

ADVERTISEMENT

ತಂದೆಯ ನಿಧನ ನಂತರ ಮನೆಯ ಜವಾಬ್ದಾರಿ ಹೆಚ್ಚಿತು. ತಾಯಿ ಪುಷ್ಪಾ ಅವರೊಂದಿಗೆ ಕೃಷಿ ಕಾಯಕ ಮಾಡುತ್ತಿದ್ದಾರೆ. ಅಣ್ಣ ಪ್ರವೀಣ ಐಟಿಐ ಓದಿದ್ದು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡುತ್ತಾರೆ. ದಿನಾಲು ಹತ್ತಾರು ಜನರಿಗೆ ಕೆಲಸ ನೀಡಿದ್ದಾರೆ. 

ತಮ್ಮ 2.5 ಎಕರೆ ಅಡಿಕೆ ಹಚ್ಚಿದ್ದು ಇನ್ನು ಫಸಲಿಗೆ ಬಂದಿಲ್ಲ, ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. 1.5 ಎಕರೆ ಬಾಳೆ ಬೆಳೆದಿದ್ದು ಈಗಾಗಲೇ ಕಟಾವಿಗೆ ಬಂದಿದ್ದು, 15 ರಿಂದ 20 ದಿನಕ್ಕೆ ಕಟಾವು ಮಾಡುತ್ತೇವೆ. ಅದರಿಂದ ₹ 2 ಲಕ್ಷ ನಿವ್ವಳ ಲಾಭ ಬಂದಿದೆ. ಅಡಿಕೆ ಮತ್ತು ಬಾಳೆ ಮಧ್ಯೆ ಪ್ರತಿ ವರ್ಷ 1 ಎಕರೆ ಸೇವಂತಿಗೆ ಹೂ ಬೆಳೆಯುತ್ತಾರೆ. ₹1 ಲಕ್ಷ ಖರ್ಚು ತೆಗೆದು ₹ 2 ಲಕ್ಷ ಆದಾಯ ಬಂದಿದೆ ಎನ್ನುತ್ತಾರೆ ಅರುಣ.

ಅರ್ಧ ಎಕರೆ ನುಗ್ಗೆ ಬೆಳೆದು ₹ 1.30 ಲಕ್ಷ ಆದಾಯ ಗಳಿಸಿದ್ದಾರೆ. ಜಮೀನಿನ ಸುತ್ತಲೂ ಪೇರಲ 25 ಗಿಡ, ಸೀತಾಫಲ 30 ಗಿಡ, 70 ತೆಂಗು, ದಾಳಿಂಬೆ 20 ಗಿಡ, ಕಾಡು ಕೃಷಿಯಲ್ಲಿ 20 ಹಲಸು, ಮಹಾಗಣಿ 40 ಗಿಡ, ಸಿಲ್ವರ್‌ 25 ಗಿಡ, 8 ಪಪ್ಪಾಯಿ ಗಿಡ ಮತ್ತು ಅರಿಶಿಣ 10 ಗುಂಟೆ ಬೆಳೆಸಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೇ ಎಲ್ಲ ಬೆಳೆಗೆ ಜೀವಾಮೃತ ಮತ್ತು ಗೋ ಕೃಪಾಂಮೃತ ಮತ್ತು ಅರ್ಕಾ ಸಿಂಪಡಣೆ ಮಾಡಿ ಕೃಷಿ ಕೈಗೊಂಡಿದ್ದಾರೆ.

ಹೂವಿನ ಬೆಳೆಗೆ ರೋಗ ಜಾಸ್ತಿ ಹಾಗಾಗಿ ಸೇವಂತಿಗೆಗೆ ಮಾತ್ರ ಔಷಧಿ ರಾಸಾಯನಿಕ ಔಷಧಿ ಸಿಂಪಡಣೆ ಮಾಡುತ್ತೇವೆ. ಇತರೆ ಯಾವುದೇ ಬೆಳೆಗೆ ರಾಸಾಯನಿಕ ಔಷಧಿ ಬಳಸುವುದಿಲ್ಲ. ಕಾಂಪೋಸ್ಟ್‌ ಮತ್ತು ಹಸಿರೆಲೆ ಗೊಬ್ಬರ ಬಳಕೆ ಮಾಡಿಕೊಂಡು ಮಣ್ಣಿನ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಜಮೀನಿನಲ್ಲಿ ನೀರು ಸಂರಕ್ಷಣೆಗಾಗಿ ಬದುಗಳ ನಿರ್ಮಾಣ ಮಾಡಿದ್ದಾರೆ. ಹನಿ ನೀರಾವರಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ.

‘ರೈತರು ಬಹುಬೆಳೆ ಮತ್ತು ನೇರ ಮಾರಾಟ ಪದ್ದತಿ ಅಳವಡಿಸಿಕೊಂಡರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಒಂದೇ ಬೆಳೆಗೆ ಮುಗಿ ಬೀಳಬಾರದು. ವಿವಿಧ ಬೆಳೆ ಬೆಳೆಯಬೇಕು. ಒಂದು ಕೊಯ್ಲು ಮುಗಿಯುತ್ತಿದ್ದಂತೆ ಮತ್ತೊಂದು ಬೆಳೆ ಕೊಯ್ಲಿಗೆ ಬರುವಂತೆ ನೋಡಿಕೊಳ್ಳಬೇಕು. ದಿನಾಲು ಆದಾಯ ಗಳಿಸುವಂತಿರಬೇಕು’ ಎಂದು ಅರುಣ ಅವರು ರೈತರಿಗೆ ಸಲಹೆ ನೀಡಿದರು.

ಅರುಣಕುಮಾರ ತಮ್ಮ ಜಮೀನಿನಲ್ಲಿ ಬೆಳೆದಿರುವ ಸಮೃದ್ದವಾಗಿ ಬೆಳೆದಿರುವ ಬಾಳೆ
ಅರುಣಕುಮಾರ ಬೆಳೆದಿರುವ ಅರಿಶಿಣ ಬೆಳೆ
ಅರುಣಕುಮಾರ ಬೆಳೆದಿರುವ ಪೇರಲ ಬೆಳೆ
ಅರುಣಕುಮಾರ ಬಿಷ್ಟಣ್ಣನವರ ಅವರು ತಮ್ಮ ಜಮೀನಿನಲ್ಲಿ ಅಡಿಕೆ ಮಧ್ಯೆ ಬೆಳೆದಿರುವ ಸೇವಂತಿಗೆ ಬೆಳೆ
ಖಾಸಗಿ ಕಂಪನಿಯಲ್ಲಿ ಕಾಣದ ನೆಮ್ಮದಿ ಉತ್ತಮ ಆದಾಯವನ್ನು ತೋಟಗಾರಿಕೆ ಕೃಷಿಯಲ್ಲಿ ಕಾಣುತ್ತಿರುವೆ. ಆರೋಗ್ಯಯುತ ಬದುಕಿನೊಂದಿಗೆ ವರ್ಷಕ್ಕೆ ಕನಿಷ್ಠ ₹ 8 ರಿಂದ 10 ಲಕ್ಷ ಆದಾಯ ಪಡೆಯುತ್ತಿರುವೆ
ಅರುಣ ರೇವಣಪ್ಪ ಬಿಷ್ಟಣ್ಣನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.