ವಂಚನೆ–ಪ್ರಾತಿನಿಧಿಕ ಚಿತ್ರ
ಹಾವೇರಿ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ₹ 25 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ನಗರದ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಾಲ್ಲೂಕಿನ ವೆಂಕಟಾಪುರದ ನಿವಾಸಿಯಾಗಿರುವ 43 ವರ್ಷ ವಯಸ್ಸಿನ ಶಿಕ್ಷಕರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿ–ಐಜಿಪಿ) ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಸುಧೀರ ಟಿ.ಸಿ. ಹಾಗೂ ಬಾದಾಮಿಯ ಸುನೀಲ್‌ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸೆನ್ ಪೊಲೀಸರು ಹೇಳಿದರು.
‘ದೂರುದಾರರ ಸಹೋದರ ಪಿಎಸ್‌ಐ ಆಗಲು ಪ್ರಯತ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿಯೇ ದೂರುದಾರರಿಗೆ, ಆರೋಪಿಗಳ ಪರಿಚಯವಾಗಿತ್ತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪರಿಚಯವೆಂದು ಹೇಳಿದ್ದ ಆರೋಪಿಗಳು, 2020ರಿಂದ 2025ರವರೆಗೆ ಹಂತ ಹಂತವಾಗಿ ₹ 25 ಲಕ್ಷ ಪಡೆದಿದ್ದರು.’
‘ಹಣ ಪಡೆದುಕೊಂಡಿದ್ದ ಆರೋಪಿಗಳು, ಕೆಲಸ ಕೊಡಿಸುವ ಆಮಿಷವೊಡ್ಡುತ್ತ ದಿನದೂಡಿದ್ದರು. ಆದರೆ, ಯಾವುದೇ ಕೆಲಸ ಕೊಡಿಸಿರಲಿಲ್ಲ. ಇದರಿಂದ ಬೇಸತ್ತ ದೂರುದಾರರು, ತಮ್ಮ ಹಣ ವಾಪಸು ಕೊಡುವಂತೆ ಪಟ್ಟು ಹಿಡಿದಿದ್ದರು. ಅವಾಗಲೇ ಆರೋಪಿಗಳು, ಹಣ ವಾಪಸು ಕೊಡುವುದಾಗಿ ಹೇಳಿ ಚೆಕ್ ನೀಡಿದ್ದರು. ಆದರೆ, ಚೆಕ್‌ನಿಂದ ಯಾವುದೇ ಹಣ ಬಂದಿಲ್ಲ. ಇದರಿಂದ ಮತ್ತಷ್ಟು ನೊಂದು ದೂರುದಾರರು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದರು.
‘ಆರೋಪಿ ಸುಧೀರ್, ಡಿಜಿ–ಐಜಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆಯೋ ಅಥವಾ ಅದರ ಹೆಸರಿನಲ್ಲಿ ವಂಚನೆ ಮಾಡಿದ್ದಾನೆಯೂ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.