ADVERTISEMENT

ಹೂವಿನಹಡಗಲಿ: ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಸೋಮಣ್ಣಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:07 IST
Last Updated 6 ಜನವರಿ 2026, 2:07 IST
ಹೂವಿನಹಡಗಲಿಯ ರೈಲ್ವೆ ಹೋರಾಟ ಸಮಿತಿ ಸಂಚಾಲಕರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಗದಗ-ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಮನವಿ ಮಾಡಿದರು
ಹೂವಿನಹಡಗಲಿಯ ರೈಲ್ವೆ ಹೋರಾಟ ಸಮಿತಿ ಸಂಚಾಲಕರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಗದಗ-ಹರಪನಹಳ್ಳಿ ರೈಲು ಮಾರ್ಗ ಮಂಜೂರಾತಿಗೆ ಮನವಿ ಮಾಡಿದರು   

ಹೂವಿನಹಡಗಲಿ: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಬೆಸೆಯುವ ಗದಗ– ಹರಪನಹಳ್ಳಿ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ರೈಲ್ವೆ ಹೋರಾಟ ಸಮಿತಿ ಆಗ್ರಹಿಸಿದೆ.

ಹೋರಾಟ ಸಮಿತಿ ಸಂಚಾಲಕ ಎಸ್.ಎಸ್.ಪಾಟೀಲ್ ನೇತೃತ್ವದ ತಂಡ ಭಾನುವಾರ ಜಿಂದಾಲ್ ಅತಿಥಿ ಗೃಹದಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ, ಪ್ರಸಕ್ತ ಬಜೆಟ್‌ನಲ್ಲಿ ಈ ರೈಲ್ವೆ ಯೋಜನೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಉಪಸ್ಥಿತರಿದ್ದ ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಈ ರೈಲು ಮಾರ್ಗ ಕುರಿತು ಪ್ರಸ್ತಾಪಿಸಿದರು.

ADVERTISEMENT

‘95 ಕಿ.ಮೀ. ಉದ್ದದ ಗದಗ– ಹರಪನಹಳ್ಳಿ ರೈಲು ಮಾರ್ಗವನ್ನು ಮುಂಡರಗಿ, ಹೂವಿನಹಡಗಲಿ ಮುಖಾಂತರ ಕೊಟ್ಟೂರು-ಹರಿಹರ ಮಾರ್ಗಕ್ಕೆ ಜೋಡಣೆ ಮಾಡುವುದರಿಂದ ಉತ್ತರ ಕರ್ನಾಟಕದಿಂದ ರಾಜಧಾನಿ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸಬಹುದಾಗಿದೆ. ಈಗಿರುವ ರೈಲು ಮಾರ್ಗಗಳಿಗಿಂತ ಬೆಂಗಳೂರು 100 ಕಿ.ಮೀ. ಅಂತರ ಕಡಿಮೆ ಆಗುತ್ತದೆ. ಈ ಮಾರ್ಗ ಕೈಗೆತ್ತಿಕೊಳ್ಳುವುದರಿಂದ ಗದಗ, ವಿಜಯನಗರ ಜಿಲ್ಲೆಗಳ ಹೊಸ ಪ್ರದೇಶಗಳಿಗೆ ರೈಲ್ವೆ ಸೌಲಭ್ಯ ದೊರಕುತ್ತದೆ. ಈ ಭಾಗದ ಕೃಷಿ, ಕೈಗಾರಿಕೆ, ಶೈಕ್ಷಣಿಕ, ವಾಣಿಜ್ಯ ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರೇಕ್ಷಣೀಯ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮೈಲಾರಲಿಂಗೇಶ್ವರ ಸುಕ್ಷೇತ್ರಗಳಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಎಸ್.ಎಸ್.ಪಾಟೀಲ್ ಮನವರಿಕೆ ಮಾಡಿಕೊಟ್ಟರು.

ಸಚಿವ ಸೋಮಣ್ಣ ಪ್ರತಿಕ್ರಿಯಿಸಿ, ‘ಈ ಮಾರ್ಗದ ಪ್ರಸ್ತಾವ ಗಮನದಲ್ಲಿದೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಆಶಯದಂತೆ ಈ ಯೋಜನೆಗೆ ಮಂಜೂರಾತಿ ಕೊಡಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.