ADVERTISEMENT

ರಾಷ್ಟ್ರಪಿತನ 150ನೇ ಜನ್ಮ ವರ್ಷಾಚರಣೆ: ಹಾವೇರಿಗೆ ಬಂದ ಗಾಂಧಿ ಸ್ತಬ್ಧ ಚಿತ್ರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2018, 12:57 IST
Last Updated 11 ಅಕ್ಟೋಬರ್ 2018, 12:57 IST
ಹಾವೇರಿಗೆ ಗುರುವಾರ ಬಂದ ಸ್ತಬ್ಧಚಿತ್ರದ ಮೆರವಣಿಗೆ
ಹಾವೇರಿಗೆ ಗುರುವಾರ ಬಂದ ಸ್ತಬ್ಧಚಿತ್ರದ ಮೆರವಣಿಗೆ   

ಹಾವೇರಿ:ಮಹಾತ್ಮ ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸ್ತಬ್ಧ ಚಿತ್ರವು ಗುರುವಾರ ರಾಣೆಬೆನ್ನೂರು ಮತ್ತು ನಗರಕ್ಕೆ ಬಂದಿದ್ದು, ಕಲಾವಿದರು, ಕಲಾ ತಂಡಗಳು, ಗಣ್ಯರು, ಅಧಿಕಾರಿಗಳು ಸ್ವಾಗತಿಸಿದರು.

ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ., ತಹಶೀಲ್ದಾರ್ ಎಚ್‌.ಸಿ. ಶಿವಕುಮಾರ್, ವಾರ್ತಾಧಿಕಾರಿ ಡಾ. ಬಿ.ಆರ್.ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ ಹಾಗೂ ರಾಣೆಬೆನ್ನೂರಿನಲ್ಲಿ ಉಪವಿಭಾಗಾಧಿಕಾರಿ ಎನ್‌. ತಿಪ್ಪೇಸ್ವಾಮಿ, ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ ಸ್ವಾಗತ ಕೋರಿದರು.

ದಾವಣಗೆರೆಯಿಂದ ಹರಿಹರ ಮಾರ್ಗವಾಗಿ ರಾಣೆಬೆನ್ನೂರು ಪ್ರವೇಶಿಸಿದ ಸ್ತಬ್ಧಚಿತ್ರವನ್ನು ಗುರುವಾರ ಬೆಳಿಗ್ಗೆ ಮಾಗೋಡ ಕ್ರಾಸ್‌ನಲ್ಲಿ ಸ್ವಾಗತಿಸಲಾಯಿತು. ಬಳಿಕ ನಗರದ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ಸಾಗಿಬಂತು. ಆಗ ಕಲಾತಂಡಗಳು ಮೆರುಗು ನೀಡಿದವು.

ADVERTISEMENT

ಹಾವೇರಿ ನಗರದ ಕೆ.ಇ.ಬಿ. ವೃತ್ತದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿಬಂತು. ಗಾಂಧಿ ವೃತ್ತದಲ್ಲಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಕಲಾ ತಂಡದೊಂದಿಗೆ ಸಾಹಿತಿಗಳು, ಮುಖಂಡರು ಹಾಗೂ ಅಧಿಕಾರಿಗಳು ಪಾಲ್ಗೊಂಡರು.

ಗಾಂಧೀಜಿ ಜೀವನದ ವಿವಿಧ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದ ಪ್ರತಿಕೃತಿಗಳಿಂದ ಸ್ತಬ್ಧಚಿತ್ರವು ಗಮನ ಸೆಳೆಯಿತು. ಗಾಂಧೀಜಿಗೆ ಇಷ್ಟವಾಗಿದ್ದ ಗೀತೆಗಳ ಹಿನ್ನೆಲೆ ಗಾಯನ, ಸತ್ಯ, ಅಹಿಂಸೆಯ, ಭ್ರಾತೃತ್ವ, ಸಾಮರಸ್ಯದ ಸಂದೇಶಗಳು ಹಾಗೂ ಗಾಂಧೀಜಿ ಭಾಷಣದ ಧ್ವನಿಸುರುಳಿಗಳು ಇಂಪು ನೀಡಿದವು.

‘ಜಿಲ್ಲೆಗೆ ಬಂದ ‘ಶಾಂತಿಮಾರ್ಗ’ ಸ್ತಬ್ಧಚಿತ್ರವು ಅ.2 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಉದ್ಘಾಟನೆಗೊಂಡಿದ್ದು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಸೇರಿದಂತೆ 15 ಜಿಲ್ಲೆಗಳ 34 ತಾಲ್ಲೂಕುಗಳಲ್ಲಿ ಸಂಚರಿಸಲಿವೆ’ ಎಂದು ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.