ಹಾವೇರಿ: ‘ಜಿಲ್ಲೆಯ ಹಲವು ಕಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಗಣೇಶೋತ್ಸವ ಮೆರವಣಿಗೆಗೆ ಅಡ್ಡಿಯಾಗಲಿದೆ. ಎಲ್ಲ ರಸ್ತೆಗಳನ್ನು ಸರಿಪಡಿಸಬೇಕು. ಹಬ್ಬದಂದು ಡಿ.ಜೆಗೂ (ಡಿಸ್ಕ್ ಜಾಕಿ) ಅನುಮತಿ ನೀಡಬೇಕು’ ಎಂದು ಜನರು ಆಗ್ರಹಿಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಜಿಲ್ಲಾ ಮಟ್ಟದ ಶಾಂತಿ ಸಭೆ’ಯಲ್ಲಿ ಪಾಲ್ಗೊಂಡಿದ್ದ ಜನರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್‌ಪಿ ಎದುರು ಹಲವು ಬೇಡಿಕೆ ಮುಂದಿಟ್ಟರು.
‘ಹಬ್ಬದ ಮೆರವಣಿಗೆಯಂದು ಡಿ.ಜೆ. ತರಿಸಲು ಮುಂಗಡವಾಗಿ ಲಕ್ಷಾಂತರ ರೂಪಾಯಿ ನೀಡಲಾಗಿದೆ. ಈ ಬಾರಿ ಗಣೇಶೋತ್ಸವದಲ್ಲಿ ಡಿ.ಜೆ ಹಚ್ಚಲು ಅನುಮತಿ ನೀಡಬೇಕು’ ಎಂದರು.
‘ಗಣೇಶ ಹಬ್ಬ ಆಚರಣೆ ಮಾಡಲು ಇಲಾಖೆಯವರು 30 ಷರತ್ತುಗಳನ್ನು ವಿಧಿಸಿದ್ದಾರೆ. ಇದರಿಂದಾಗಿ ಹಬ್ಬ ಮಾಡುವುದು ಅಸಾಧ್ಯ. ಹಾವೇರಿ ಜಿಲ್ಲೆಯಲ್ಲಿ ಎಲ್ಲರೂ ಭಾವೈಕ್ಯದಿಂದ ಹಬ್ಬ ಮಾಡುತ್ತಾರೆ. ಕೋಮುಗಲಭೆ ಪ್ರಶ್ನೆಯೇ ಇಲ್ಲ. ಶಬ್ದ ಕಡಿಮೆ ಮಾಡಿ ಡಿ.ಜೆಗೆ ಅನುಮತಿ ಕೊಡಿ’ ಎಂದು ಜನರು ಹೇಳಿದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಪ‍್ರತಿನಿಧಿ ಕಾಸೀಂಸಾಬ್ ಮೂಲಿಮನಿ ಮಾತನಾಡಿ, ‘ನಮ್ಮ ಹಬ್ಬಕ್ಕೆ ಡಿ.ಜೆಯ ಅವಶ್ಯಕತೆ ಇಲ್ಲ. ಪೊಲೀಸರ ನಿರ್ಧಾರಕ್ಕೆ ನಮ್ಮ ಸಹಮತವಿದೆ’ ಎಂದರು.
ಶಾಮಿಯಾನ ಮಾಲೀಕರೊಬ್ಬರು ಮಾತನಾಡಿ, ‘ಬೇರೆ ರಾಜ್ಯದಿಂದ ಬರುವ ಡಿ.ಜೆ.ಗಳಿಗೆ ಅನುಮತಿ ನೀಡುತ್ತೀರಾ. ಅವರ ಮೇಲೆ ಪ್ರಕರಣ ದಾಖಲಿಸುವುದಿಲ್ಲ ? ನಮ್ಮಲ್ಲಿರುವ ಸಣ್ಣಪುಟ್ಟ ಡಿ.ಜೆ. ಮೇಲೆ ಪ್ರಕರಣ ದಾಖಲಿಸುತ್ತೀರಾ ?. ಡಿ.ಜೆ ಬಂದ್ ಮಾಡುವುದಾದರೆ ಎಲ್ಲವನ್ನೂ ಬಂದ್ ಮಾಡಿ’ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ‘ಡಿ.ಜೆ.ಯ ಅತಿಯಾದ ಶಬ್ದದಿಂದ ಮಕ್ಕಳು, ಹಿರಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜಿಲ್ಲೆಯ ಎಎಸ್‌ಐ ಒಬ್ಬರ ಕಿವಿಯ ತಮಟೆ ಸಹ ಹಾಳಾಗಿದೆ. ಡಿ.ಜೆ. ಕಾಯ್ದಿರಿಸಿರುವವರು ಕೂಡಲೇ ರದ್ದು ಮಾಡಿ. ಅದೇ ಹಣವನ್ನು ಅನಾಥಾಶ್ರಮಗಳಿಗೆ ಕೊಡಿ. ಸ್ಥಳೀಯ ಕಲಾತಂಡಗಳನ್ನು ಕರೆಸಿ. ನಮ್ಮಲ್ಲಿ ಡಿಜೆಗೆ ಅವಕಾಶವಿಲ್ಲ’ ಎಂದು ಹೇಳಿದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಹೆಚ್ಚುವರಿ ಎಸ್.ಪಿ ಲಕ್ಷ್ಮಣ ಶಿರಕೋಳ, ಸವಣೂರು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಹಾವೇರಿ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಇದ್ದರು.
ಹಾವೇರಿ ಜಿಲ್ಲೆ ಭಾವೈಕ್ಯದ ಜಿಲ್ಲೆ. ಎಲ್ಲರೂ ಸೇರಿ ಖುಷಿಯಿಂದ ಹಬ್ಬ ಆಚರಿಸಿ. ರಸ್ತೆ ದುರಸ್ತಿ ಗಣೇಶ ವಿಸರ್ಜನೆಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದುವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಗಣೇಶ–ಈದ್ ಮಿಲಾದ್ ಅನ್ನು ಶಾಂತಿಯುತವಾಗಿ ಆಚರಿಸಬೇಕು. ಹಬ್ಬದ ಹೆಸರಲ್ಲಿ ರಸ್ತೆಯಲ್ಲಿ ಹಣ ವಸೂಲಿ ಮಾಡುವಂತಿಲ್ಲ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯಯಶೋಧಾ ವಂಟಗೋಡಿ ಎಸ್‌ಪಿ
‘ಗಣೇಶ ಹಬ್ಬಕ್ಕೆ ಸಮಸ್ಯೆ’
‘ಜಿಲ್ಲೆಯ ಹಾವೇರಿ ಶಿಗ್ಗಾವಿ ರಾಣೆಬೆನ್ನೂರ ಹಾನಗಲ್ ಹಿರೇಕೆರೂರು ರಟ್ಟೀಹಳ್ಳಿ ಬ್ಯಾಡಗಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಹಲವು ರಸ್ತೆಗಳು ಹಾಳಾಗಿವೆ. ಇದರಿಂದ ಗಣೇಶ ಹಬ್ಬಕ್ಕೆ ಸಮಸ್ಯೆಯಾಗಲಿದೆ’ ಎಂದು ಜನರು ದೂರಿದರು. ‘ಹಿರೇಕೆರೂರಿನಲ್ಲಿ ಗಣೇಶ ವಿಸರ್ಜನೆಗೆ ಪಂಚಾಯಿತಿಯವರು ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ. ಈ ಬಾರಿ ವ್ಯವಸ್ಥೆ ಕಲ್ಪಿಸಿ. ಪ್ರತಿ ಗಣೇಶ ಪೆಂಡಾಲ್‌ಗೆ ಒಬ್ಬ ಗೃಹರಕ್ಷಕರನ್ನು ನೇಮಿಸಿ. ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಅನುಮತಿಗಳನ್ನು ಒಂದೇ ಕಡೆ ಸಿಗುವಂತೆ ಮಾಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.