ADVERTISEMENT

ಹಾವೇರಿ | ಡಿಜೆಗೆ ಅನುಮತಿ ಕೊಟ್ಟರಷ್ಟೇ ಗಣೇಶ ವಿಸರ್ಜನೆ: ಮಂಡಳಿಗಳ ಆಕ್ರೋಶ

ಪೊಲೀಸರು–ಮಂಡಳಿಗಳ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:56 IST
Last Updated 5 ಸೆಪ್ಟೆಂಬರ್ 2025, 3:56 IST
   

ಹಾವೇರಿ: ‘ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದಂದು ಡಿ.ಜೆ. (ಡಿಸ್ಕ್‌ ಜಾಕಿ) ಬಳಸಬಾರದು’ ಎಂದು ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶವನ್ನು ಖಂಡಿಸಿರುವ ಜಿಲ್ಲೆಯ ಹಲವು ಮಂಡಳಿಗಳು, ‘ಡಿ.ಜೆ. ಬಳಸಲು ಅನುಮತಿ ಕೊಟ್ಟರಷ್ಟೇ ವಿಸರ್ಜನೆ ಮಾಡುತ್ತೇವೆ’ ಎಂದು ಪಟ್ಟು ಹಿಡಿದಿದ್ದಾರೆ.

ವೃದ್ಧರು, ಮಕ್ಕಳು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ಡಿ.ಜೆ. ಬಳಕೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳು ಹಲವು ಮೊಕದ್ದಮೆಗಳಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಿವೆ. ಇದೇ ನಿರ್ದೇಶನದಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಅದರ ಜಾರಿ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಲಾಗಿದೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯನ್ನು ಅದ್ಧೂರಿಯಾಗಿ ಮಾಡುವ ಬಗ್ಗೆ ಮಂಡಳಿಗಳ ಪದಾಧಿಕಾರಿಗಳು, ಹಬ್ಬದ ಮುಂಚೆಯೇ ತಯಾರಿ ನಡೆಸಿದ್ದರು. ಆದರೆ, ಡಿ.ಜೆ. ನಿರ್ಬಂಧದ ಆದೇಶ ಹೊರಬೀಳುತ್ತಿದ್ದಂತೆ ಮಂಡಳಿಯವರು ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ಗಣೇಶ ಪ್ರತಿಷ್ಠಾಪನೆ ಸಂದರ್ಭದಲ್ಲಿ ಆ. 27ರಂದು ರಾತ್ರಿ 7.30 ಗಂಟೆಯಿಂದ ರಾತ್ರಿ 10 ಗಂಟೆ ನಡುವಿನ ಅವಧಿಯಲ್ಲಿ ಡಿ.ಜೆ. ಬಳಸಿದ್ದ ಕಾರಣಕ್ಕೆ ಹಾವೇರಿಯ ಸುಭಾಷ್ ವೃತ್ತದ ಗಜಾನನ ಉತ್ಸವ ಸಮಿತಿ ಹಾಗೂ ಹುಂಬಿ ಡಿ.ಜೆ. ಸೌಂಡ್‌ ಸಿಸ್ಟಮ್‌ ವಿರುದ್ಧ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾನಗಲ್ ತಾಲ್ಲೂಕಿನ ಕ್ಯಾಸನೂರು ಹಾಗೂ ಹಿರೇಕೆರೂರಿನ ತಲಾ ಒಂದು ಮಂಡಳಿಗಳ ವಿರುದ್ಧಗೂ ಪ್ರಕರಣ ದಾಖಲಾಗಿದೆ. ಈ ಮೂಲಕ ಡಿ.ಜೆ. ಬಳಕೆ ಮಾಡಿದ್ದರ ವಿರುದ್ಧ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.

ಡಿ.ಜೆ. ನಿರ್ಬಂಧದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಾನಗಲ್ ಹಾಗೂ ಸವಣೂರು ತಾಲ್ಲೂಕಿನ ಹಲವು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಂಡಳಿಗಳು, ಈಗ ಗಣಪತಿ ವಿಸರ್ಜನೆಯನ್ನೇ ಮುಂದೂಡುತ್ತಿವೆ. ನಿಗದಿತ ದಿನದಂದು ವಿಸರ್ಜನೆ ಆಗಬೇಕಿದ್ದ ಗಣಪತಿ ಮೂರ್ತಿಗಳು, ದಿನ ಕಳೆದರೂ ವಿಸರ್ಜನೆ ಆಗುತ್ತಿಲ್ಲ.

‘ಹಿಂದೂ ಹಬ್ಬವಾದ ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಆದರೆ, ನಮ್ಮ ಹಬ್ಬದ ಆಚರಣೆಗೆ ಸಾಕಷ್ಟು ಷರತ್ತುಗಳನ್ನು ವಿಧಿಸಲಾಗುತ್ತಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತಿದ್ದೇವೆ’ ಎಂದು ಮಂಡಳಿ ಪದಾಧಿಕಾರಿಗಳು ಹೇಳುತ್ತಿದ್ದಾರೆ.

‘ಡಿ.ಜೆ. ಬಳಸಲು ನಮಗೆ ಅವಕಾಶ ನೀಡಬೇಕು. ಅಲ್ಲಿಯವರೆಗೂ ನಾವು ಗಣಪತಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲ’ ಎಂದು ಪದಾಧಿಕಾರಿಗಳು ತಿಳಿಸುತ್ತಿದ್ದಾರೆ.

ಪೊಲೀಸರು–ಮಂಡಳಿ ಸಭೆ ಇಂದು: ಗಣೇಶ ಹಬ್ಬದ ಆರಂಭದ ದಿನದಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಎಸ್‌ಪಿ ಅವರನ್ನು ಭೇಟಿಯಾಗಿದ್ದ ಕೆಲ ಮಂಡಳಿಗಳ ಪದಾಧಿಕಾರಿಗಳು, ‘ನಮಗೆ ಡಿ.ಜೆ. ಬಳಸಲು ಅನುಮತಿ ನೀಡಿ’ ಎಂದು ಕೋರಿದ್ದರು. ಆದರೆ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಡಿ.ಜೆ. ಬಳಕೆ ನಿರ್ಬಂಧಿಸಿರುವುದಾಗಿ ಉತ್ತರ ಬಂದಿತ್ತು.

ಇದರ ನಡುವೆಯೇ ಮೂರು ಮಂಡಳಿಯವರು, ಡಿ.ಜೆ. ಬಳಸಿದ್ದಾರೆ. ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಇದೇ ಕಾರಣಕ್ಕೆ ಹಲವು ಮಂಡಳಿಯವರು, ಡಿ.ಜೆ. ಬಳಕೆ ಮಾಡದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮಾಡಿ ಮುಗಿಸಿದ್ದಾರೆ. ಈಗ ಕೆಲ ಮಂಡಳಿಯವರು ಮಾತ್ರ, ಡಿ.ಜೆ. ಅನುಮತಿ ಬೇಕೆಂದು ಪಟ್ಟು ಹಿಡಿದಿದ್ದಾರೆ. ಜನಪ್ರತಿನಿಧಿಗಳ ಮೇಲೂ ಒತ್ತಡ ಹಾಕುತ್ತಿದ್ದಾರೆ.

‘ಗಣಪತಿ ಮೂರ್ತಿಗಳು ವಿಸರ್ಜನೆಯಾಗದೇ ಉಳಿದರೆ ಮತ್ತಷ್ಟು ಸಮಸ್ಯೆಯಾಗುತ್ತದೆ’ ಎಂದು ತಿಳಿದಿರುವ ಪೊಲೀಸರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಮಂಡಳಿಗಳ ಸಭೆ ನಡೆಸಲು ಮುಂದಾಗಿದ್ದಾರೆ. ಸೆ. 5ರಂದು ಈದ್‌ ಮಿಲಾದ್ ಹಬ್ಬ ಮುಗಿದ ನಂತರ, ಮಂಡಳಿಗಳ ಸಭೆ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಡಿ.ಜೆ. ಬಗ್ಗೆಯೇ ಹೆಚ್ಚು ಚರ್ಚೆಯಾಗಲಿದೆ.

‘ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ರಾತ್ರಿ 10 ಗಂಟೆಯೊಳಗಾಗಿ ಎರಡು ಸೌಂಡ್ ಬಾಕ್ಸ್ ಬಳಸಲು ಅನುಮತಿಯಿದೆ. ಆದರೆ, ಹೆಚ್ಚು ಡಿಸೆಬಲ್ ಶಬ್ದ ಬರುವ ಡಿ.ಜೆ. ಬಳಸಲು ಅವಕಾಶವಿಲ್ಲ. ಇದೇ ಷರತ್ತಿಗೆ ಬಗ್ಗೆ ಕೆಲ ಮಂಡಳಿಯವರು ತಗಾದೆ ತೆಗೆದಿದ್ದಾರೆ. ಸೆ. 5ರಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಮಂಡಳಿಯವರಿಗೆ ಮತ್ತೊಮ್ಮೆ ತಿಳಿ ಹೇಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.