ಹಾವೇರಿ: ನಗರದ ಸುಭಾಷ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ‘ಹಾವೇರಿ ಕಾ ರಾಜ ಗಣಪತಿ’ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ಕೊಂಡೊಯ್ದು ಮಂಗಳವಾರ ವಿಸರ್ಜನೆ ಮಾಡಲಾಯಿತು.
ಗಣೇಶ ಚತುರ್ಥಿ ದಿನದಂದು ಪ್ರತಿಷ್ಠಾಪಿಸಲಾಗಿದ್ದ ಮೂರ್ತಿಗೆ ನಿತ್ಯವೂ ವಿಶೇಷ ಪೂಜೆಗಳನ್ನು ಮಾಡಲಾಯಿತು. ನಗರದ ಪ್ರಸಿದ್ಧ ಗಣಪತಿ ಮೂರ್ತಿಗಳಲ್ಲಿ ಒಂದಾದ, ಈ ಮೂರ್ತಿಯನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ಹಾವೇರಿ ಮಾತ್ರವಲ್ಲದೇ ಸುತ್ತಮುತ್ತಲಿನ ತಾಲ್ಲೂಕು ಹಾಗೂ ಗ್ರಾಮಗಳ ಜನರು, ಮೂರ್ತಿಯನ್ನು ವೀಕ್ಷಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ವಿವಿಧ ಪಕ್ಷಗಳ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಸಹ ಪೆಂಡಾಲ್‌ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಹಾವೇರಿಯ ಸುಭಾಷ್ ವೃತ್ತದ ಗಜಾನನ ಉತ್ಸವ ಸಮಿತಿ ಪದಾಧಿಕಾರಿಗಳು, ಅಚ್ಚುಕಟ್ಟಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಜೊತೆಗೆ, ರಕ್ತದಾನ ಶಿಬಿರವನ್ನು ಏರ್ಪಡಿಸಿ ರಕ್ತದಾನ ಮಾಡಿ ಮಾದರಿ ನಡೆ ಪ್ರದರ್ಶಿಸಿದ್ದರು.
ಪ್ರತಿಷ್ಠಾಪನಾ ಸ್ಥಳದಲ್ಲಿ ಮಂಗಳವಾರ ಸೇರಿದ್ದ ಜನರು, ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡರು. ನಂತರ, ಮೂಲ ಸ್ಥಳದಿಂದ ಭವ್ಯ ಮೆರವಣಿಗೆ ಆರಂಭವಾಯಿತು. ನಗರದ ಹಲವು ರಸ್ತೆಗಳಲ್ಲಿ ಮೆರವಣಿಗೆ ಸಾಗಿತು.
ತೆರೆದ ವಾಹನದಲ್ಲಿ ಮೂರ್ತಿಯನ್ನು ಇರಿಸಿ ಹೂವು ಹಾಗೂ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ನೆರೆದಿದ್ದ ಜನರು, ಗಣಪತಿ ಮೂರ್ತಿಗೆ ನಮಸ್ಕರಿಸಿದರು. ‘ಗಣಪತಿ ಬಪ್ಪಾ ಮೋರಯಾ...’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದರು. ಮೆರವಣಿಗೆಯುದ್ದಕ್ಕೂ ಕೇಸರಿ ಶಾಲುಗಳು ಹಾಗೂ ಕೇಸರಿ ಬಾವುಟಗಳು ಹಾರಾಡಿದವು. ಇಡೀ ರಸ್ತೆ ಕೇಸರಿಮಯವಾಗಿ ಮಾರ್ಪಟ್ಟಿತ್ತು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು, ಸಂಗೀತ ಹಾಗೂ ಜಾನಪದ ಕಲಾತಂಡಗಳ ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡಿದರು. ಮಕ್ಕಳು, ಮಹಿಳೆಯರು ಸಹ ಹಾಡಿಗೆ ತಕ್ಕಂತೆ ಕುಣಿದು, ಗಣಪತಿ ಮೂರ್ತಿಗೆ ವಿದಾಯ ಹೇಳಿದರು.
ಪೊಲೀಸರ ಬಿಗಿ ಭದ್ರತೆ
ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜಿಸಿ, ಶಾಂತಿ ಕದಡುವವರ ಪತ್ತೆಗಾಗಿ ನಿಗಾ ವಹಿಸಲಾಗಿತ್ತು. ಡ್ರೋನ್ ಕ್ಯಾಮೆರಾವನ್ನೂ ಹಾರಿಸಿ, ಸಂಪೂರ್ಣ ದೃಶ್ಯಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಯಿತು.
ಮತ್ತೊಂದು ಗಣಪತಿ ಮೂರ್ತಿ ವಿಸರ್ಜನೆಗೆ ಸಿದ್ಧತೆ
ಹಾವೇರಿಯ ಮತ್ತೊಂದು ಪ್ರಸಿದ್ಧ ಗಣಪತಿ ಮೂರ್ತಿಯಲ್ಲಿ ಒಂದಾದ, ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆಗೂ ಮಹಾಮಂಡಳ ಪದಾಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
‘ಶ್ರೀಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದೆ’ ಎಂದು ಆರೋಪಿಸಿದ್ದ ಮಹಾಮಂಡಳ ಪದಾಧಿಕಾರಿಗಳು, ಕಾಗಿನೆಲೆ ವೃತ್ತ ಬಳಿಯ ತಮ್ಮ ಪೆಂಡಾಲ್ ಎದುರು ಧರ್ಮಸ್ಥಳ ಪರವಾದ ಘೋಷಣೆಗಳನ್ನು ಹಾಕಿದ್ದರು. ಈ ಮೂಲಕ ಧರ್ಮಸ್ಥಳದ ಪರವಾಗಿ ತಾವಿರುವುದಾಗಿ ಸಂದೇಶ ರವಾನಿಸಿದ್ದರು. ಪದಾಧಿಕಾರಿಗಳ ಈ ಕೆಲಸಕ್ಕೆ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.