ADVERTISEMENT

ಹಾನಗಲ್ | ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ: ಮಲ್ಲಿಕಾರ್ಜುನ ಸಿದ್ದಣ್ಣವರ

‘ಜಗಕೆ ಜೋಗುಳ ಹಾಡಿದ ತಾಯಿ’ ಕೃತಿಯ ಎರಡನೇ ಮುದ್ರಣದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:08 IST
Last Updated 13 ಸೆಪ್ಟೆಂಬರ್ 2025, 6:08 IST
ಹಾನಗಲ್‌ನಲ್ಲಿ ಶುಕ್ರವಾರ ನಡೆದ ಗಂಗೂಬಾಯಿ ಹಾನಗಲ್ಲ ಅವರನ್ನು ಕುರಿತ ವಿಚಾರ ಸಂಕಿರಣವನ್ನು ಹಾವೇರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಸ್.ಟಿ.ಬಾಗಲಕೋಟೆ ಉದ್ಘಾಟಿಸಿದರು
ಹಾನಗಲ್‌ನಲ್ಲಿ ಶುಕ್ರವಾರ ನಡೆದ ಗಂಗೂಬಾಯಿ ಹಾನಗಲ್ಲ ಅವರನ್ನು ಕುರಿತ ವಿಚಾರ ಸಂಕಿರಣವನ್ನು ಹಾವೇರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಸ್.ಟಿ.ಬಾಗಲಕೋಟೆ ಉದ್ಘಾಟಿಸಿದರು   

ಹಾನಗಲ್: ಬಡತವನ್ನೂ ಮೆಟ್ಟಿ, ಟೀಕೆ ಟಿಪ್ಪಣೆಗಳನ್ನು ದೂರ ಸರಿಸಿ ಆಕಾಶದೆತ್ತರಕ್ಕೆ ಬೆಳೆದ ಗಂಗೂಬಾಯಿ ಹಾನಗಲ್ ಈ ನೆಲದ ಸಂಗೀತದ ನಕ್ಷತ್ರ ಎಂದು ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು.

ಇಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ ಪದ್ಮವಿಭೂಷಣ ಗಂಗೂಬಾಯಿ ಹಾನಗಲ್ಲ ಅವರ ಕುರಿತ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸಂಗೀತದ ವೈಭವ ಕಟ್ಟಿದ ಸಂಗೀತ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ಲ. 14 ರಾಷ್ಟ್ರಗಳಲ್ಲಿ ಸ್ವರ ಸಂಗೀತದ ಮಾಧುರ್ಯ ಬಿತ್ತಿ ಬೆಳೆದು, ಜಗದಗಲ ಉತ್ಕೃಷ್ಟ ಗಾನ ಹಂಚಿದ ಗಾನ ಗಂಧರ್ವ ಎಂದು ಹೇಳಿದರು.

ADVERTISEMENT

ಗಂಗೂಬಾಯಿ ಅವರ ನೆನಪಿಗಾಗಿ ಹಾನಗಲ್‌ನ ಅವರ ಮನೆ ಸ್ಮಾರಕವಾಗಬೇಕು. ಇಲ್ಲಿ ಪ್ರತಿವರ್ಷ ಅವರ ಹೆಸರಿನಲ್ಲಿ ಸಂಗೀತ ಕಛೇರಿ ನಡೆಯಬೇಕು. ಅವರ ಪ್ರತಿಮೆ ಅನಾವರಣಗೊಳ್ಳಬೇಕು. ನಾಳಿನ ಪೀಳಿಗೆಗೆ ಹಾನಗಲ್‌ನ ಗಂಗೂಬಾಯಿ ಸಂಗೀತದ ಮೇರು ವ್ಯಕ್ತಿತ್ವವಾಗಿ ಪರಿಚಯವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಾವೇರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ.ಎಸ್.ಟಿ.ಬಾಗಲಕೋಟೆ ಮಾತನಾಡಿ, ಬದುಕನ್ನೇ ಸಂಗೀತಮಯ ಮಾಡಿಕೊಂಡು, ಸರಳತೆಯನ್ನು ಮೈಗೂಡಿಸಿಕೊಂಡು, ಜಗಕೆ ಜೋಗುಳ ಹಾಡಿದ ತಾಯಿ ಗಂಗೂಬಾಯಿ ಹಾನಗಲ್ಲ ಈ ನೆಲದ ಹೆಮ್ಮೆ ಎಂದರು.

ಪ್ರಾಚಾರ್ಯ ಎನ್.ಸದಾಶಿವಪ್ಪ ಮಾತನಾಡಿ, ಮಧುರ ಮಾತು, ಮನಸ್ಸಿನ, ಸಂಗೀತ ಕ್ಷೇತ್ರದ ದೃವತಾರೆ ಗಂಗೂಬಾಯಿ ಹಾನಗಲ್ಲ. ನಮ್ಮ ಹಾನಗಲ್ಲ ನೆಲದವರು ಎಂಬ ಹೆಮ್ಮೆ ಅಭಿಮಾನಪಡುವಂತಹದ್ದು ಎಂದರು.

ವೇದಿಕೆಯಲ್ಲಿ ಸಾಹಿತಿಗಳಾದ ಮಾರುತಿ ಶಿಡ್ಲಾಪೂರ, ಉದಯ ನಾಸಿಕ್, ಕಸಾಪ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಬೋಂದಾಡೆ, ಐಕ್ಯೂಎಸಿ ಸಂಚಾಲಕ ಟಿ.ಟಿ.ಹರೀಶ, ಪ್ರಾಧ್ಯಾಪಕ ಪ್ರಕಾಶ ಹುಲ್ಲೂರ ಇದ್ದರು.

ಇದೇ ಸಂದರ್ಭದಲ್ಲಿ ಸಾಹಿತಿ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ ‘ಜಗಕೆ ಜೋಗುಳ ಹಾಡಿದ ತಾಯಿ’ ಕೃತಿಯ ಎರಡನೇ ಮುದ್ರಣದ ಬಿಡುಗಡೆ ನಡೆಯಿತು. ಗಂಗೂಬಾಯಿ ಹಾನಗಲ್ಲ ಅವರ ಕುರಿತು ಕಿರುನಾಟಕವನ್ನು ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.