ADVERTISEMENT

ರಟ್ಟೀಹಳ್ಳಿ| ದೇವಸ್ಥಾನ ವಿಚಾರಕ್ಕೆ ಗುಂಪು ಘರ್ಷಣೆ; ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:22 IST
Last Updated 20 ಫೆಬ್ರುವರಿ 2026, 7:22 IST
ರಟ್ಟೀಹಳ್ಳಿ ತಾಲ್ಲೂಕಿನ ಹಿರೇಯಡಚಿ-ಕ್ಯಾತನಕೇರಿ ಗ್ರಾಮಗಳ ವ್ಯಾಪ್ತಿಯ ದುರ್ಗಮ್ಮ ದೇವಸ್ಥಾನ ನಿರ್ಮಾಣ ವಿಚಾರವಾಗಿ ಗುರುವಾರ ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ
ರಟ್ಟೀಹಳ್ಳಿ ತಾಲ್ಲೂಕಿನ ಹಿರೇಯಡಚಿ-ಕ್ಯಾತನಕೇರಿ ಗ್ರಾಮಗಳ ವ್ಯಾಪ್ತಿಯ ದುರ್ಗಮ್ಮ ದೇವಸ್ಥಾನ ನಿರ್ಮಾಣ ವಿಚಾರವಾಗಿ ಗುರುವಾರ ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ   

ರಟ್ಟೀಹಳ್ಳಿ: ದೇವಸ್ಥಾನದ ವಿಚಾರವಾಗಿ ತಾಲ್ಲೂಕಿನ ಹಿರೇಯಡಚಿ-ಕ್ಯಾತನಕೇರಿ ಗ್ರಾಮಗಳ ಜನರ ನಡುವೆ ಗುರುವಾರ ಗುಂಪು ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಹಾಗೂ ಹಲ್ಲೆಯಿಂದಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಎರಡೂ ಗ್ರಾಮಗಳ ನಡುವಿನ ಗುಡ್ಡದ ಪ್ರದೇಶದಲ್ಲಿ ದುರ್ಗಮ್ಮ ದೇವಸ್ಥಾನವಿದೆ. ಇದು ತಮ್ಮೂರಿನ ದೇವಸ್ಥಾನವೆಂದು ಹಿರೇಯಡಚಿ ಗ್ರಾಮಸ್ಥರು, ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕ್ಯಾತನಕೇರಿ ಗ್ರಾಮಸ್ಥರು, ದೇವಸ್ಥಾನ ತಮ್ಮೂರಿನದ್ದು ಎಂದು ಹೇಳಿ ಗಲಾಟೆ ಮಾಡಿದೆ.

ADVERTISEMENT

ಗುಡ್ಡದ ಒಂದು ಬದಿಯಿಂದ ಹಿರೇಯಡಚಿ ಹಾಗೂ ಇನ್ನೊಂದು ಬದಿಯಿಂದ ಕ್ಯಾತನಕೇರಿ ಗ್ರಾಮಸ್ಥರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಗುಡ್ಡದ ಜಾಗದಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ಬೈಕ್‌ಗಳನ್ನು ಜಖಂಗೊಳಿಸಿದ್ದಾರೆ. ಗಲಾಟೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮಾಹಿತಿ ತಿಳಿದ ಹಿರೇಕೆರೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಲಾಟೆಗೆ ಕಾರಣ ಎನ್ನಲಾದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

‘ದೇವಸ್ಥಾನ ವಿಚಾರವಾಗಿ ಎರಡೂ ಗ್ರಾಮಗಳ ನಡುವೆ ಹಲವು ವರ್ಷಗಳಿಂದ ಜಗಳವಿದೆ. ಇದೇ ಜಗಳ ಗುರುವಾರ ವಿಕೋಪಕ್ಕೆ ಹೋಗಿ, ದೊಡ್ಡ ಗಲಾಟೆ ಆಗಿದೆ. ಒಬ್ಬರನ್ನೊಬ್ಬರು ಬೆನ್ನಟ್ಟಿ ಹೋಗಿ ಹಲ್ಲೆ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.