ADVERTISEMENT

ದೊಡ್ಡ ಕಟ್ಟಡದಲ್ಲಿ ಹುದ್ದೆಗಳೇ ಖಾಲಿ!

ಹಾನಗಲ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಮಾರುತಿ ಪೇಟಕರ
Published 9 ಏಪ್ರಿಲ್ 2019, 20:00 IST
Last Updated 9 ಏಪ್ರಿಲ್ 2019, 20:00 IST
ಹಾನಗಲ್‌ ತಾಲ್ಲೂಕು ಸರ್ಕಾರಿ ಆಸ್ಪತ್ರೆ
ಹಾನಗಲ್‌ ತಾಲ್ಲೂಕು ಸರ್ಕಾರಿ ಆಸ್ಪತ್ರೆ   

ಹಾನಗಲ್:ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯು ₹9 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ಹೊಂದಿದ್ದರೂ, ಶೇ 75ರಷ್ಟು ಖಾಲಿ ಹುದ್ದೆಗಳಿಂದಾಗಿ ರೋಗಿಗಳುಪರದಾಡುವಂತಾಗಿದೆ.

ಸಿಬ್ಬಂದಿ ಕೊರತೆಯಿಂದ ಕರ್ತವ್ಯದಲ್ಲಿರುವ ವೈದ್ಯರು ಇಕ್ಕಟ್ಟಿಗೆ ಸಿಲುಕಿದರೆ, ದುಬಾರಿ ವೈದ್ಯಕೀಯ ಯಂತ್ರಗಳು ವ್ಯರ್ಥವಾಗಿ ಬಿದ್ದಿವೆ. ಆಸ್ಪತ್ರೆಯ ಸ್ವಚ್ಛತೆ ಕಾಯುವುದೇ ಆರೋಗ್ಯ ಇಲಾಖೆಗೆ ಸವಾಲಾಗಿದೆ.

ನಿತ್ಯ 600ಕ್ಕೂ ಅಧಿಕ ರೋಗಿಗಳು ಬರುತ್ತಾರೆ. ಆದರೆ, 11 ವೈದ್ಯ ಹುದ್ದೆಯ ಪೈಕಿ 6 ಮಂದಿ ಮಾತ್ರ ಇದ್ದಾರೆ. 18 ಶುಶ್ರೂಷಕಿಯರ ಹುದ್ದೆಗಳಿದ್ದು, 5 ಕಾಯಂ ಮತ್ತು 5 ಹೊರಗುತ್ತಿಗೆಯಲ್ಲಿ ಇದ್ದಾರೆ.

‘ಇದು ಹೆಸರಿಗೆ 100 ಹಾಸಿಗೆಗಳ ಆಸ್ಪತ್ರೆ. ಆದರೆ, 40 ಹಾಸಿಗೆಗಳಿದ್ದು, ಅವುಗಳೂ ಸುಸ್ಥಿತಿಯಲ್ಲಿ ಇಲ್ಲ. ಉತ್ತಮ ಚಿಕಿತ್ಸೆಗೂ ಬಡ ರೋಗಿಗಳು ಹೋರಾಡಬೇಕು’ ಎಂದು ದೂರುತ್ತಾರೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸಿದ್ಧಪ್ಪ ಹಿರಗಪ್ಪನವರ.

ADVERTISEMENT

ವೈದ್ಯರ ಕೊರತೆಯ ಕಾರಣ ರೋಗಿಗಳು ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿದರೆ, ವೈದ್ಯರೂ ಹೈರಾಣಾಗುತ್ತಾರೆ. ತುರ್ತು ಚಿಕಿತ್ಸಾ ಘಟಕಕ್ಕೆ ಇನ್ನೂ ವೈದ್ಯರ ನೇಮಕವಾಗಿಲ್ಲ. ಹೀಗಾಗಿ, ಅಪಘಾತ ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇತರೆ ವೈದ್ಯರು ತಮ್ಮ ‌ರೋಗಿಗಳನ್ನು ಬಿಟ್ಟು ಘಟಕಕ್ಕೆ ದೌಡಾಯಿಸುತ್ತಾರೆ. ಅತ್ತ ರೋಗಿಗಳ ಸರದಿಯೂ ಹೆಚ್ಚುತ್ತದೆ. ವೈದ್ಯರು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಪ್ರಯೋಗಾಲಯ ತಜ್ಞ, ರೆಡಿಯಾಲಜಿ‌, ಫಾರ್ಮಾಸಿಸ್ಟ್‌, ನೇತ್ರ ಆರೋಗ್ಯಾಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು 82 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 60 ಖಾಲಿ ಇವೆ. ದೊಡ್ಡ ಕಟ್ಟಡ ನಿರ್ಮಿಸಿದ್ದು, ಆಸ್ಪತ್ರೆಯ ಸ್ವಚ್ಚತೆ ಕಾಯ್ದುಕೊಳ್ಳುವುದೂ ಆರೋಗ್ಯ ಇಲಾಖೆಗೆ ಸವಾಲಾಗಿದೆ.

ದುಬಾರಿ ವೈದ್ಯಕೀಯ ಯಂತ್ರಗಳು ಇಲ್ಲಿವೆ. ತಜ್ಞ ಸಿಬ್ಬಂದಿ ಕೊರತೆಯಿಂದ ಯಂತ್ರಗಳು ಮೂಲೆ ಸೇರುತ್ತಿವೆ. ಎಲುಬು ಶಸ್ತ್ರಚಿಕಿತ್ಸೆಯ ಸಿ–ಆರ್ಮ್‌ ಎಂಬ ಯಂತ್ರಕ್ಕೆ ಹೆಚ್ಚಿನ ಉಪಕರಣ ಪೂರೈಕೆಯಾಗಿಲ್ಲ. ಹೀಗಾಗಿ ನಿಷ್ಕ್ರಿಯಗೊಂಡಿವೆ. ಪಿಡ್ರಿಯಾಟಿಕ್‌ ವೆಂಟಿಲೆಟರ್‌, ಸ್ಕ್ಯಾನಿಂಗ್‌ ಮೆಷಿನ್‌, ಅನಸ್ತೇಷಿಯಾಕ್ಕೆ ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ಇಸಿಜಿ, ಡಯಾಲಿಸಿಸ್‌, ಎಕ್ಸ್‌ರೇ ಯಂತ್ರಗಳು ಕೆಲಸ ಮಾಡುತ್ತಿವೆ.

ಪ್ರತಿಷ್ಠೆಗಾಗಿ ದೊಡ್ಡ ದೊಡ್ಡ ಕಟ್ಟಡ, ಯೋಜನೆ, ರಸ್ತೆಗಳನ್ನು ನಿರ್ಮಿಸುತ್ತಾರೆ. ಆದರೆ, ಅವುಗಳಿಂದ ಜನಕ್ಕೆ ನಿಜವಾಗಿಯೂ ಪ್ರಯೋಜನ ಸಿಗುತ್ತಿದೆಯೇ ಎಂಬುದನ್ನು ಜನಪ್ರತಿನಿಧಿಗಳು ಪರಿಶೀಲಿಸಬೇಕು ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.