ಮತದಾರರ ಪಟ್ಟಿ
– ಎ.ಐ ಚಿತ್ರ
ಹಾವೇರಿ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಸುವ ಕೆಲಸ ಆರಂಭಗೊಂಡಿದೆ. ಹೊಸದಾಗಿ ಮತದಾರರ ಪಟ್ಟಿ ಸೇರಲು ಅರ್ಹರಿರುವವರು ಅರ್ಜಿ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮತದಾರರ ಪಟ್ಟಿ ತಯಾರಿಗೆ ಸಂಬಂಧಪಟ್ಟಂತೆ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ, ‘ಮುಖ್ಯ ಚುನಾವಣಾಧಿಕಾರಿ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.
ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮತದಾರರ ಪಟ್ಟಿ ತಯಾರಿ ಬಗ್ಗೆ ಚರ್ಚಿಸಲಾಯಿತು.
‘ಹೊಸ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಬೇಕು. ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಸಂಬಣಧಪಟ್ಟಂತೆ ಹೊಸದಾಗಿ ತಯಾರಿಸುತ್ತಿರುವ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಲು ಸಾರ್ವಜನಿಕರು ಹಾಗೂ ಮತದಾರರಿಗೆ ಜಾಗೃತಿ ಮೂಡಿಸಬೇಕು’ ಎಂದು ಜಾನಕಿ ಅವರು ಸೂಚಿಸಿದ್ದಾರೆ.
‘ಈಗಾಗಲೇ ನೇಮಕಾತಿ ಹೊಂದಿದ ಸಹಾಯಕ ಮತದಾರರ ನೋಂದಾಣಾಧಿಕಾರಿಗಳು, ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ನಮೂನೆ 18ರ ಅರ್ಜಿ ಫಾರ್ಮ್‌ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಈ ಅರ್ಜಿಗಳನ್ನು ಅರ್ಹ ಎಲ್ಲ ಪದವೀಧರರಿಗೆ ನೀಡಬೇಕು. ಅರ್ಜಿ ಜೊತೆಯಲ್ಲಿ ಸೂಕ್ತ ದಾಖಲೆಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.