ADVERTISEMENT

ಪಕ್ಷಿಗಳ ದಾಹ ನೀಗಿಸುತ್ತಲೇ ಬೇಸಿಗೆ ಕಳೆದ!

ಸಾವಿರಾರು ಪಕ್ಷಿಗಳ ದಾಹ ನೀಗಿಸಿದ ವಿದ್ಯಾರ್ಥಿ ರಾಜಶೇಖರ

ಎಂ.ಸಿ.ಮಂಜುನಾಥ
Published 20 ನವೆಂಬರ್ 2019, 17:04 IST
Last Updated 20 ನವೆಂಬರ್ 2019, 17:04 IST
ಮರವೇರಿ ಪಕ್ಷಿಗಳಿಗೆ ನೀರುಣಿಸುತ್ತಿರುವ ಬಾಲಕ
ಮರವೇರಿ ಪಕ್ಷಿಗಳಿಗೆ ನೀರುಣಿಸುತ್ತಿರುವ ಬಾಲಕ   

ಹಾವೇರಿ: ಜಿ‌ಲ್ಲೆಯಾದ್ಯಂತ ಕೆರೆ– ಕಟ್ಟೆಗಳು ಬತ್ತಿರುವುದರಿಂದ ಮನುಷ್ಯರಷ್ಟೇ ಅಲ್ಲದೇ, ಕುಡಿಯಲು ನೀರಿಲ್ಲದೆ ಪ್ರಾಣಿ– ಪಕ್ಷಿಗಳೂ ಹೈರಾಣಾಗಿವೆ. ಇಲ್ಲೊಬ್ಬ 15 ವರ್ಷದಬಾಲಕ ಮನೆ ಸುತ್ತಲಿನ ಸುಮಾರು 45 ಮರಗಳಿಗೆ 200ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿ, ಅವುಗಳಿಗೆ ನೀರು ಹಾಕುವ ಮೂಲಕ ಸಾವಿರಾರು ಪಕ್ಷಿಗಳ ದಾಹ ನೀಗಿಸುತ್ತಿದ್ದಾನೆ!

ಹಾವೇರಿ ತಾಲ್ಲೂಕು ಕರ್ಜಗಿ ಗ್ರಾಮದ ರಾಜಶೇಖರ ಕೋಡಬಾಳನ ಈ ಕಾರ್ಯಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 9ನೇ ತರಗತಿ ಮುಗಿಸಿ ಎರಡು ತಿಂಗಳು ಬೇಸಿಗೆ ರಜೆಯಲ್ಲಿದ್ದ ಆತ, ಕುಡಿಯಲು ನೀರಿಲ್ಲದೆ ಪಕ್ಷಿಗಳು ಸಾಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸಮೀಕ್ಷಾ ವರದಿಯೊಂದನ್ನು ನೋಡಿ ಅವುಗಳ ರಕ್ಷಣೆಗೆ ಪಣ ತೊಟ್ಟನು.

‘ಬೇಸಿಗೆಯ ಆರಂಭದಲ್ಲಿ ಕುಡಿಯಲು ಗುಟುಕು ನೀರು ಸಿಗದೆ ನಾವೆಲ್ಲ ತುಂಬ ಪರದಾಡಿದೆವು. ನಾವೇನೋ ದುಡ್ಡು ಕೊಟ್ಟು ನೀರಿನ ಬಾಟಲಿಯನ್ನು ಕೊಂಡುಕೊಳ್ಳಬಹುದು. ಅಥವಾ, ಶುದ್ಧೀಕರಣ ಘಟಕಕ್ಕೆ ಹೋಗಿ ಕ್ಯಾನ್‌ಗಳನ್ನೂ ತರಬಹುದು. ಆದರೆ, ಪಕ್ಷಿಗಳು ಏನು ಮಾಡುತ್ತವೆ? ಕೆರೆಗಳೆಲ್ಲ ಬತ್ತಿ ನೆಲ ಸೀಳು ಬಿಟ್ಟಿದೆ. ಆ ಖಾಲಿ ಕೆರೆಯಲ್ಲೇ ಪ್ರಾಣಿ– ಪಕ್ಷಿಗಳ ಕಳೇಬರಗಳನ್ನು ನೋಡಿದಾಗ ಜೀವ ಚುರುಗುಟ್ಟುತ್ತದೆ. ಹೀಗಾಗಿ, ಪಕ್ಷಿಗಳಿಗೆ ನೀರೊದಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ’ ಎನ್ನುತ್ತಾನೆ ರಾಜಶೇಖರ.

ADVERTISEMENT

‘ಬೇಸಿಗೆ ರಜೆ ಬಿಟ್ಟ ಕೂಡಲೇ ಮನೆ ಹಾಗೂ ಶಾಲೆ ಸಮೀಪದ ರಸ್ತೆಗಳಲ್ಲಿ ಓಡಾಡಿದೆ. ಹೆಚ್ಚು ಪಕ್ಷಿಗಳು ಬಂದು ಹೋಗುವ ಸ್ಥಳಗಳನ್ನು ಗುರುತಿಸಿಕೊಂಡೆ. ನಂತರ ನೂರಕ್ಕೂ ಹೆಚ್ಚು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಅವುಗಳನ್ನು ಮಧ್ಯಭಾಗಕ್ಕೆ ಕತ್ತರಿಸಿದೆ. ಒಂದು ಮರಕ್ಕೆ 5–6 ಡಬ್ಬಗಳನ್ನು ಕಟ್ಟುತ್ತ, ನೀರು ಹಾಕಲು ಶುರು ಮಾಡಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ.

‘ನೀರಿನ ಜತೆಗೆ ಅದರಲ್ಲಿ ಅನ್ನ ಅಥವಾ ಆಹಾರ ಧಾನ್ಯಗಳನ್ನೂ ಹಾಕಿರುತ್ತೇನೆ. ಹೀಗಾಗಿ, ಪಕ್ಷಿಗಳ ಜತೆಗೆ ಕೋತಿ ಹಾಗೂ ಅಳಿಲುಗಳೂ ಅದನ್ನು ತಿಂದು ನೀರು ಕುಡಿಯುತ್ತಿವೆ. ಎರಡು ದಿನಕ್ಕೊಮ್ಮೆ ಡಬ್ಬ ತೊಳೆದು ನೀರು ಬದಲಾಯಿಸುತ್ತಿದ್ದೇನೆ. ಈಗ ನಮ್ಮೂರಿಗೆ ಬರುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ’ ಎನ್ನುತ್ತ ಸಂತಸಪಡುತ್ತಾನೆ.

‘ಜೂನ್ 1ರಿಂದ ಶಾಲೆ ಶುರುವಾಗಿದೆ. ಆದರೂ, ನಾನು ಈ ಕಾಯಕ ಬಿಡುವುದಿಲ್ಲ. ಶಿಕ್ಷಕರ ಜತೆ ಮಾತನಾಡಿ ಶಾಲೆಯಲ್ಲೂ ಈ ವ್ಯವಸ್ಥೆ ತರುತ್ತೇನೆ. ನಮ್ಮಂತೆಯೇ ಪ್ರಾಣಿ– ಪಕ್ಷಿಗಳಿಗೂ ಜೀವವಿದೆ. ಅವುಗಳ ಗಂಟಲೂ ಒಣಗುತ್ತದೆ. ಹೀಗಾಗಿ, ಎಲ್ಲರೂ ಅವುಗಳಿಗಾಗಿ ಮನೆ ಮುಂದೆ ಹಾಗೂ ಮಹಡಿಗಳ ಮೇಲೆ ನೀರನ್ನು ಸಂಗ್ರಹಿಸಿಡಿ’ ಎಂದು ಮನವಿ ಮಾಡುತ್ತಾನೆ ಆತ.‌‌‌

ಬದುಕು ಸಾರ್ಥಕ

‘ಮರ ಹತ್ತಿ ಡಬ್ಬ ಕಟ್ಟುತ್ತಿದ್ದನ್ನು ನೋಡಿದ ಆರಂಭದಲ್ಲಿ ‘ಏನೋ ನಿನ್ನ ಹುಚ್ಚಾಟ’ ಎಂದು ಬೈಯ್ಯುತ್ತಿದ್ದೆವು. ಈಗ ಇಲ್ಲಿಗೆ ಬಂದು ಹೋಗುತ್ತಿರುವ ಪಕ್ಷಿಗಳ ಸಂಖ್ಯೆ ನೋಡಿದರೆ ಅಚ್ಚರಿಯಾಗುತ್ತದೆ. ಎಲ್ಲ ಪಕ್ಷಿಗಳೂ ನಮ್ಮ ಮನೆಯ ಸುತ್ತಲೇ ಸುತ್ತುವುದು, ಅವು ತಮ್ಮನಿಗೆ ಕೃತಜ್ಞತೆ ಸಲ್ಲಿಸುತ್ತಿರುವಂತೆ ಭಾಸವಾಗುತ್ತದೆ. ಮೂಕ ಹಕ್ಕಿಗಳಿಗೆ ಆಸರೆಯಾದ ಆತನದ್ದು ನಿಜಕ್ಕೂ ಸಾರ್ಥಕದ ಬದುಕು’ ಎನ್ನುತ್ತಾರೆ ರಾಜಶೇಖರನ ಅಣ್ಣ ಎಫ್‌.ಎಚ್.ಮಾಲತೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.