ADVERTISEMENT

ಹಾವೇರಿ: ಕಾರಿನ ಗಾಜು ಒಡೆದು ಕಳವು, ಆಂಧ್ರಪ್ರದೇಶದ ಮನೆಯಲ್ಲಿ ₹ 30 ಲಕ್ಷ ಜಪ್ತಿ

* ಒ.ಜಿ. ಕುಪ್ಪಂನ ನಾಲ್ವರು ಪರಾರಿ * ಹಣ ಇಟ್ಟುಕೊಂಡಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 4:36 IST
Last Updated 11 ಮಾರ್ಚ್ 2025, 4:36 IST
ಕಾರಿನ ಗಾಜು ಒಡೆದು ಕಳ್ಳತನ ಮಾಡಿದ್ದ ಹಣವನ್ನು ಜಪ್ತಿ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿದ ಹಾವೇರಿ ಜಿಲ್ಲಾ ಪೊಲೀಸರ ತಂಡ
ಕಾರಿನ ಗಾಜು ಒಡೆದು ಕಳ್ಳತನ ಮಾಡಿದ್ದ ಹಣವನ್ನು ಜಪ್ತಿ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿದ ಹಾವೇರಿ ಜಿಲ್ಲಾ ಪೊಲೀಸರ ತಂಡ   

ಹಾವೇರಿ: ಇಲ್ಲಿಯ ಬಸವೇಶ್ವರನಗರದ ಮನೆಯೊಂದರ ಎದುರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ₹33 ಲಕ್ಷ ಕಳ್ಳತನ ಮಾಡಿದ್ದ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯ ಎಸಗಿದ್ದ ಆಂಧ್ರಪ್ರದೇಶದ ಒ.ಜಿ.ಕುಪ್ಪಂ ತಂಡದ ಸದಸ್ಯನನ್ನು ಬಂಧಿಸಿ, ಆತನಿಂದ ₹ 30 ಲಕ್ಷ ಜಪ್ತಿ ಮಾಡಿದ್ದಾರೆ.

‘ಬಸವೇಶ್ವರನಗರದ 10ನೇ ಕ್ರಾಸ್‌ನಲ್ಲಿರುವ ಸಿವಿಲ್ ಗುತ್ತಿಗೆದಾರ ಸಂತೋಷ ಹಿರೇಮಠ ಮನೆ ಎದುರು ನಿಲ್ಲಿಸಿದ್ದ ಕಾರಿನ ಗಾಜು ಒಡೆದಿದ್ದ ಆರೋಪಿಗಳು, ಕಾರಿನಲ್ಲಿದ್ದ ₹ 33 ಲಕ್ಷ ಕದ್ದುಕೊಂಡು ಪರಾರಿಯಾಗಿದ್ದರು. ಮಾರ್ಚ್ 6ರಂದು ಮಧ್ಯಾಹ್ನ ನಡೆದಿದ್ದ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿ, ಹಣ ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳ್ಳತನ ಶೈಲಿ ಹಾಗೂ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿ ಕೃತ್ಯ ಎಸಗುತ್ತಿದ್ದ ಆಂಧ್ರಪ್ರದೇಶದ ಒ.ಜಿ.ಕುಪ್ಪಂ ತಂಡದ ಸದಸ್ಯರು ಕೃತ್ಯ ಎಸಗಿದ್ದ ಮಾಹಿತಿ ಲಭ್ಯವಾಗಿತ್ತು. ವಿಶೇಷ ತಂಡವೊಂದನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಸ್ಥಳೀಯ ಪೊಲೀಸರು ಸಹಾಯದಿಂದ ಆರೋಪಿ ಎ.ಜಗದೀಶ್ (28) ಮನೆಯಲ್ಲಿ ಶೋಧ ನಡೆಸಿದಾಗ, ₹ 30 ಲಕ್ಷ ಪತ್ತೆಯಾಯಿತು’ ಎಂದು ಹೇಳಿದರು.

ADVERTISEMENT

‘ಸುಳಿವು ಸಿಗುತ್ತಿದ್ದಂತೆ ಪೊಲೀಸರು, ಜಗದೀಶ್ ಮನೆಗೆ ಮೊದಲ ಬಾರಿಗೆ ಹೋದಾಗ ಸ್ಥಳೀಯರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ನಂತರ, ಸ್ಥಳೀಯ ಪೊಲೀಸರ ನೆರವಿನಿಂದ ಹಣದ ಸಮೇತ ಆರೋಪಿಯನ್ನು ಬಂಧಿಸಿ ಹಾವೇರಿಗೆ ಕರೆತರಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳು, ಉಳಿದ ₹3 ಲಕ್ಷದ ಸಮೇತ ಪರಾರಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ಬ್ಯಾಂಕ್‌ನಲ್ಲಿ ಕಾದು ಕೃತ್ಯ: ‘ಒ.ಜಿ.ಕುಪ್ಪಂನ ನಾಲ್ವರು ಆರೋಪಿಗಳು ಎರಡು ಬೈಕ್‌ನಲ್ಲಿ ಬೆಂಗಳೂರಿನಿಂದ ಹಾವೇರಿಗೆ ಬಂದಿದ್ದರು. ಅದರಲ್ಲಿ ಒಬ್ಬಾತ, ರಾಣಿ ಚನ್ನಮ್ಮ ವೃತ್ತದಲ್ಲಿರುವ ಯೂನಿಯನ್ ಬ್ಯಾಂಕ್‌ ಶಾಖೆಯಲ್ಲಿ ಕಾದು ಕುಳಿತಿದ್ದ. ಬ್ಯಾಂಕ್‌ಗೆ ಬಂದು ಹಣ ಡ್ರಾ ಮಾಡಿಕೊಂಡು ಹೋಗುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ. ಮಾ. 6ರಂದು ಅದೇ ಬ್ಯಾಂಕ್‌ಗೆ ಸಂತೋಷ ಹಿರೇಮಠ ಹೋಗಿದ್ದರು’ ಎಂದು ಎಸ್ಪಿ ಅಂಶುಕುಮಾರ ತಿಳಿಸಿದರು.

‘₹33 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದನ್ನು ಗಮನಿಸಿದ್ದ ಆರೋಪಿ, ಬ್ಯಾಂಕ್‌ನಿಂದ ಹೊರಗಿದ್ದವರಿಗೆ ಸಿಗ್ನಲ್ ಕೊಟ್ಟಿದ್ದ. ಸಂತೋಷ್ ಅವರು ಹೊರಗೆ ಬಂದು ಕಾರಿನಲ್ಲಿ ಹಣದ ಸಮೇತ ಮನೆಗೆ ತೆರಳಿದ್ದರು. ನಾಲ್ವರು ಆರೋಪಿಗಳು, ಕಾರು ಹಿಂಬಾಲಿಸಿದ್ದರು. ಅಕ್ಕ–ಪಕ್ಕದ ಮನೆ ಹಾಗೂ ಪ್ರದೇಶಗಳಲ್ಲಿ ವಾತಾವರಣ ತಿಳಿದುಕೊಂಡಿದ್ದರು. ನಂತರ, 15 ಸೆಕೆಂಡ್‌ನಲ್ಲಿ ಕಾರಿನ ಬಳಿ ಹೋಗಿ ಗಾಜು ಒಡೆದು ಹಣದ ಬ್ಯಾಗ್‌ ಸಮೇತ ಪರಾರಿಯಾದ್ದಾರೆ’ ಎಂದು ಹೇಳಿದರು.

‘ಹಣದ ಸಮೇತ ಬೈಕ್‌ಗಳಲ್ಲಿಯೇ ಬೆಂಗಳೂರಿಗೆ ಹೋಗಿದ್ದ ಆರೋಪಿಗಳು, ಅಲ್ಲಿಂದ ಒ.ಜಿ.ಕುಪ್ಪಂಗೆ ತೆರಳಿದ್ದರು. ತಮ್ಮದೇ ತಂಡದ ಸದಸ್ಯ ಜಗದೀಶ್‌ಗೆ ಹಣ ಕೊಟ್ಟಿದ್ದರು. ನಂತರ, ಮತ್ತೊಂದು ಊರಿನಲ್ಲಿ ಕೃತ್ಯ ಎಸಗಲು ಹೊರಟು ಹೋಗಿದ್ದಾರೆ. ಆರೋಪಿಗಳ ಪತ್ತೆಗಾಗಿ 150 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗಳಾದ ಮೋತಿಲಾಲ್ ಪವಾರ, ಸಂತೋಷ ಪವಾರ, ಸಿದ್ಧಾರೂಢ ಬಡಿಗೇರ, ಮಹಾಂತೇಶ ಲಂಬಿ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ, ಬೆಂಗಳೂರು ಹಾಗೂ ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿತ್ತು. ಹಣ ಇಟ್ಟುಕೊಂಡಿದ್ದ ಜಗದೀಶ್ ಮಾತ್ರ ಸಿಕ್ಕಿಬಿದ್ದ. ಉಳಿದ ನಾಲ್ವರನ್ನು ಸದ್ಯದಲ್ಲೇ ಬಂಧಿಸುವ ವಿಶ್ವಾಸವಿದೆ’ ಎಂದು ತಿಳಿಸಿದರು.

ಹಣ ಕದ್ದೊಯ್ದಿದ್ದ ನಾಲ್ವರಿಗಾಗಿ ಶೋಧ ಬೆಂಗಳೂರಿಗೆ ಬೈಕ್‌ನಲ್ಲಿ ಸಂಚಾರ ಆರೋಪಿ ಬಂಧನಕ್ಕೆ ಸ್ಥಳೀಯರ ಅಡ್ಡಿ 

‘100 ಕಿ.ಮೀ. ದೂರದಲ್ಲೇ ಸ್ವಿಚ್ ಆಫ್’

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒ.ಜಿಕುಪ್ಪಂ ಪ್ರದೇಶದ ಆರೋಪಿಗಳು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ದೂರದ ಊರುಗಳಿಗೆ ಬೈಕ್‌ಗಳಲ್ಲಿ ಹೋಗುವ ಆರೋಪಿಗಳು ಬ್ಯಾಂಕ್‌ಗಳ ಬಳಿ ಕಾದು ನಿಂತು ಹಣ ತೆಗೆದುಕೊಂಡು ಹೋಗುವವರನ್ನು ಹಿಂಬಾಲಿಸುತ್ತಾರೆ. ನಂತರ ಕಾರಿನ ಗಾಜು ಒಡೆದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾರೆ’ ಎಂದು ಹೆಚ್ಚುವರಿ ಎಸ್ಪಿ ಎಲ್‌.ವೈ. ಶಿರಕೋಳ ಹೇಳಿದರು. ‘ಕಳ್ಳತನ ಬಗ್ಗೆ ಯಾವುದೇ ಸುಳಿವು ಸಿಗಬಾರದೆಂದು ಆರೋಪಿಗಳು ಹಾವೇರಿಯಿಂದ 100 ಕಿ.ಮೀ ದೂರದಲ್ಲೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಟೋಲ್‌ ಗೇಟ್‌ಗಳ ಕ್ಯಾಮೆರಾದಲ್ಲಿ ಬೈಕ್ ಸೆರೆಯಾಗದ ರೀತಿಯಲ್ಲಿ ಬೆಂಗಳೂರಿಗೆ ಪರಾರಿಯಾಗಿದ್ದರು. ಆದರೆ ಮುಖಚಹರೆ ಹಾಗೂ ಇತರೆ ತಾಂತ್ರಿಕ ಸುಳಿವಿನಿಂದ ಆರೋಪಿಗಳ ವಿಳಾಸ ಪತ್ತೆಯಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.