ADVERTISEMENT

ಹಾವೇರಿ: ಪಿಎಂ ಕಿಸಾನ್ ಖಾತೆಗೆ ಸೈಬರ್‌ ಕನ್ನ

ಬ್ಯಾಂಕ್ ಖಾತೆಯ ಹಣ ದೋಚುವ ಖದೀಮರು | ಠಾಣೆಗೆ ದೂರು ನೀಡಿದ ರೈತರು

ಸಂತೋಷ ಜಿಗಳಿಕೊಪ್ಪ
Published 20 ನವೆಂಬರ್ 2025, 2:40 IST
Last Updated 20 ನವೆಂಬರ್ 2025, 2:40 IST
Press enter button on the keyboard computer Shield cyber Key lock security system abstract technology world digital link cyber security on hi tech Dark blue background, Enter password to log in. lock finger Keyboard
Press enter button on the keyboard computer Shield cyber Key lock security system abstract technology world digital link cyber security on hi tech Dark blue background, Enter password to log in. lock finger Keyboard   

ಹಾವೇರಿ: ದೇಶದಲ್ಲಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿ.ಎಂ. ಕಿಸಾನ್ (ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್ ನಿಧಿ)’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಹೆಸರು ಬಳಸಿಕೊಂಡು ರೈತರ ದಾರಿ ತಪ್ಪಿಸುತ್ತಿರುವ ಸೈಬರ್ ವಂಚಕರು, ಎಪಿಕೆ ಫೈಲ್ ಕಳುಹಿಸಿ ಬ್ಯಾಂಕ್‌ ಖಾತೆಯಲ್ಲಿರುವ ಹಣ ದೋಚುತ್ತಿದ್ದಾರೆ.

ಪಿ.ಎಂ. ಕಿಸಾನ್ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ ₹ 6,000 ಮೊತ್ತವನ್ನು ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಹೀಗಾಗಿ, ಯೋಜನೆಯಡಿ ಹಣ ಪಡೆಯಲು ರೈತರು ಹೆಚ್ಚು ಉತ್ಸುಹಕರಾಗಿದ್ದಾರೆ. ನೋಂದಣಿ ಸಹ ಹೆಚ್ಚಾಗಿ ಮಾಡಿಸಿಕೊಂಡಿದ್ದಾರೆ.

ದೇಶದಾದ್ಯಂತ ರೈತರು ಪಿ.ಎಂ. ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು, ರೈತರ ಮೊಬೈಲ್‌ಗಳಿಗೆ ಅಪರಿಚಿತ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಹಣ ದೋಚಿ ವಂಚಿಸುತ್ತಿದ್ದಾರೆ.

ADVERTISEMENT

ರೈತರ ಮೊಬೈಲ್‌ನ ವಾಟ್ಸ್‌ಆ್ಯಪ್‌ ಸಂಖ್ಯೆಗೆ ‘ಪಿ.ಎಂ. ಕಿಸಾನ್’ ಹೆಸರಿನ ಎಪಿಕೆ (ಆಂಡ್ರಾಯ್ಡ್ ಅಪ್ಲಿಕೇಷನ್ ಪ್ಯಾಕೇಜ್) ಫೈಲ್ ಕಳುಹಿಸುತ್ತಿರುವ ವಂಚಕರು, ‘ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಹಾಗೂ ಯೋಜನೆಯಿಂದ ಮತ್ತಷ್ಟು ಲಾಭ ಪಡೆಯಲು ಲಿಂಕ್‌ ಕ್ಲಿಕ್ ಮಾಡಿ’ ಎಂಬ ಸಂದೇಶ ಹರಿಬಿಡುತ್ತಿದ್ದಾರೆ. ಸಂದೇಶ ನಂಬಿ ಕೆಲ ರೈತರು ತಮ್ಮ ಮೊಬೈಲ್‌ನಲ್ಲಿ ಎಪಿಕೆ ಫೈಲ್ ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ. ಇದಾಗಿ ಕೆಲ ಕ್ಷಣದಲ್ಲಿಯೇ ರೈತರ ಬ್ಯಾಂಕ್‌ ಖಾತೆಯಿಂದ ವಂಚಕರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿದೆ.

17 ಪ್ರಕರಣ ದಾಖಲು: ಹಾವೇರಿ ಜಿಲ್ಲೆಯಲ್ಲಿ ಪಿ.ಎಂ. ಕಿಸಾನ್ ಹೆಸರಿನಲ್ಲಿ 2025ರ ಜನವರಿಯಿಂದ ನವೆಂಬರ್ 15ರವರೆಗೆ 17 ರೈತರನ್ನು ವಂಚಿಸಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತಷ್ಟು ರೈತರು ವಂಚನೆಗೀಡಾಗಿರುವ ಮಾಹಿತಿಯಿದ್ದು, ಅವರೆಲ್ಲ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ.

‘ಒಟಿಪಿ, ಉಡುಗೊರೆ, ನಕಲಿ ಖಾತೆ ಸೇರಿದಂತೆ ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತಿದ್ದ ವಂಚಕರು, ಈಗ ರೈತರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿ್ದಾರೆ. ರೈತರ ಮೊಬೈಲ್‌ ನಂಬರ್‌ಗೆ ‘ಪಿಎಂ ಕಿಸಾನ್’ ಎಪಿಕೆ ಫೈಲ್‌ ಲಿಂಕ್ ಕಳುಹಿಸುತ್ತಿರುವ ವಂಚಕರು, ಅದನ್ನು ಇನ್‌ಸ್ಟಾಲ್ ಮಾಡಿಸಿ ಹಣ ದೋಚುತ್ತಿದ್ದಾರೆ’ ಎಂದು ಸೈಬರ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ ತಿಳಿಸಿದರು.

‘ಸಣ್ಣ ಹಾಗೂ ಅತೀ ಸಣ್ಣ ಹಿಡುವಳಿದಾರರು ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ. ₹ 50 ಸಾವಿರಕ್ಕಿಂತ ಹೆಚ್ಚು ಹಣ ಕಳೆದುಕೊಂಡ ಕೆಲವರಷ್ಟೇ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಆದರೆ, ಕೃತ್ಯ ಎಸಗಿದವರು ಯಾರು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಹೊರ ರಾಜ್ಯದಲ್ಲಿರುವ ವಂಚಕರೇ ಕೃತ್ಯ ಎಸಗಿರುವ ಶಂಕೆಯಿದೆ’ ಎಂದರು.

₹ 2,000 ಮೊತ್ತಕ್ಕೆ ಕುತ್ತು: ಜಿಲ್ಲೆಯಲ್ಲಿರುವ ಬಹುತೇಕ ರೈತರು, ಸಣ್ಣ ಹಾಗೂ ಅತೀ ಸಣ್ಣ ರೈತರು. ಇವರಿಗೆ ಪಿ.ಎಂ.ಕಿಸಾನ್ ಯೋಜನೆಯಡಿ ಬರುವ ₹2,000 ಅತೀ ಮುಖ್ಯವಾಗಿದೆ. ಇದೇ ಹಣದಲ್ಲಿ ಹಲವು ರೈತರು, ಬೀಜ ಹಾಗೂ ಇತರೆ ವಸ್ತುಗಳನ್ನು ಖರೀದಿಸಿ ಕೃಷಿ ಮಾಡುತ್ತಿದ್ದಾರೆ. ಇಂಥ ರೈತರು, ಸೈಬರ್ ವಂಚಕರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

‘ನನ್ನದು ಅರ್ಧ ಎಕರೆ ಜಮೀನಿದೆ. ಪಿ.ಎಂ. ಕಿಸಾನ್ ಯೋಜನೆಗೂ ಮುನ್ನ ಅವರಿವರ ಬಳಿ ಸಾಲ ಮಾಡಿ ಕೃಷಿ ಮಾಡುತ್ತಿದ್ದೆ. ಈಗ ಯೋಜನೆಯಿಂದ ಮೂರು ಕಂತಿನಲ್ಲಿ ₹6,000 ಬರುತ್ತದೆ. ಇದರಿಂದ ಸಾಲವಿಲ್ಲದೇ ಕೃಷಿ ಮಾಡುತ್ತಿದ್ದೇನೆ. ಮಗನ ಮೊಬೈಲ್‌ ನಂಬರ್‌ಗೆ ಖಾತೆ ಜೋಡಣೆ ಮಾಡಿದ್ದೇನೆ. ಕೆಲ ದಿನಗಳ ಹಿಂದೆಯಷ್ಟೇ ಖಾತೆಗೆ ₹2,000 ಬಂದಿತ್ತು. ಮೊಬೈಲ್‌ಗೂ ಎಪಿಕೆ ಫೈಲ್‌ ಬಂದಿತ್ತು. ಏನೂ ಇರಬಹುದೆಂದು ತಿಳಿದು ಮಗನಿಂದ ಇನ್‌ಸ್ಟಾಲ್ ಮಾಡಿಸಿದೆ. ಇದಾದ ಕೆಲ ಹೊತ್ತಿನಲ್ಲಿ ₹ 2,000 ಬೇರೆ ಖಾತೆಗೆ ಹೋಗಿದೆ. ಬ್ಯಾಂಕ್‌ನಲ್ಲಿ ಕೇಳಿದಾಗ, ವಂಚನೆ ಆಗಿರುವುದಾಗಿ ಹೇಳಿದರು. ₹2,000ಕ್ಕೆ ಠಾಣೆಗೆ ಅಲೆಯುವುದು ಬೇಡವೆಂದು ದೂರು ನೀಡಿಲ್ಲ’ ಎಂದು ರಾಣೆಬೆನ್ನೂರು ತಾಲ್ಲೂಕಿನ ರೈತರೊಬ್ಬರು ಹೇಳಿದರು.

ಶಿವಶಂಕರ ಗಣಾಚಾರಿ

Highlights - ಠಾಣೆಯಲ್ಲಿ 17 ಪ್ರಕರಣ ದಾಖಲು  ರೈತರ ₹ 2,000 ಮೊತ್ತಕ್ಕೆ ಕುತ್ತು 

ಸರ್ಕಾರಿ ಯೋಜನೆ ಬ್ಯಾಂಕ್‌ ವ್ಯವಹಾರ ಉಡುಗೊರೆ ಸೇರಿ ವಿವಿಧ ಆಮಿಷವೊಡ್ಡಿ ‘ಎಪಿಕೆ’ ಲಿಂಕ್ ಕಳುಹಿಸಿ ವಂಚಿಸುವ ಜಾಲವಿದೆ. ಮೊಬೈಲ್‌ಗೆ ಬರುವ ಲಿಂಕ್‌ಗಳ ಬಗ್ಗೆ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕು
ಶಿವಶಂಕರ ಗಣಾಚಾರಿ ಇನ್‌ಸ್ಪೆಕ್ಟರ್ ಹಾವೇರಿ ಸೈಬರ್ ಕ್ರೈಂ ಠಾಣೆ

ಪಿ.ಎಂ. ಕಿಸಾನ್ ವಂಚನೆಯ ಪ್ರಮುಖ ಪ್ರಕರಣಗಳು

ಪ್ರಕರಣ1: ಹಾವೇರಿಯ ಬಸವೇಶ್ವರನಗರದ ವೀರಯ್ಯ ಎಂಬುವವರ ಮೊಬೈಲ್‌ಗೆ ‘ಪಿ.ಎಂ. ಕಿಸಾನ್’ ಎಪಿಕೆ ಸಂದೇಶ ಬಂದಿತ್ತು. ಸಂದೇಶ ನಂಬಿದ್ದ ವೀರಯ್ಯ ಅವರು ಎಪಿಕೆ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಇದಾದ ನಂತರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಖಾತೆಯಲ್ಲಿದ್ದ ₹ 1.50 ಲಕ್ಷ ಹಣವನ್ನು ವಂಚಕರು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ಪ್ರಕರಣ 2: ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿಯ ಪ್ರವೀಣಕುಮಾರ ಎಂಬುವವರ ಮೊಬೈಲ್‌ಗೆ ‘ಪಿ.ಎಂ. ಕಿಸಾನ್’ ಎಪಿಕೆ ಸಂದೇಶ ಬಂದಿತ್ತು. ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಂತೆ ಮೊಬೈಲ್‌ ನಿರ್ವಹಣೆಯನ್ನು ತಮ್ಮ ಸುಪರ್ದಿಗೆ ಪಡೆದಿದ್ದ ಆರೋಪಿಗಳು ₹ 72999 ದೋಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.