ADVERTISEMENT

‘ಬಾಂಬೆ ಕಲ್ಯಾಣಿ’; ಓಪನ್‌ಗೆ ಊಟವಿಲ್ಲ, ಕ್ಲೋಸ್‌ಗೆ ನಿದ್ದೆಯಿಲ್ಲ!

ಹಾವೇರಿಯಲ್ಲಿ ಹೆಚ್ಚುತ್ತಿದೆ ‘ಮಟ್ಕಾ’ ದಂಧೆ * ವಾರದಲ್ಲಿ ಹತ್ತಕ್ಕೂ ಹೆಚ್ಚು ದಂಧೆಕೋರರ ಸೆರೆ

ಎಂ.ಸಿ.ಮಂಜುನಾಥ
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಕೆ.ಜಿ.ದೇವರಾಜ್
ಕೆ.ಜಿ.ದೇವರಾಜ್   

ಹಾವೇರಿ: ಶರಣ ಸಂಸ್ಕೃತಿಯ ನಾಡು, ಭಕ್ತಿ ಪರಂಪರೆಯ ಬೀಡು ಎಂಬ ಗರಿಮೆಗಳನ್ನು ಹೊಂದಿರುವ ಹಾವೇರಿ ಜಿಲ್ಲೆಯಲ್ಲೀಗ ‘ಮಟ್ಕಾ’ ದಂಧೆ ಅವ್ಯಾಹತವಾಗಿದೆ. ಗಲ್ಲಿಯಲ್ಲಿ ಕೂತು ಸಿಗರೇಟಿನ ಸಿಲ್ವರ್ ಕಾಗದದ ಮೇಲೆ ನಂಬರ್ ಬರೆದುಕೊಡುವ ದಂಧೆಕೋರ, ಸಂಜೆ ಅದೇ ನಂಬರ್ ಆಯ್ಕೆಯಾದರೆ ಬಟವಾಡೆ ಮಾಡುತ್ತಾನೆ. ರಾತ್ರೋರಾತ್ರಿ ಶ್ರೀಮಂತರಾಗುವ ಆಸೆಯಲ್ಲಿ ಜನ ದುಡಿದ ಹಣವನ್ನೆಲ್ಲ ಸುರಿದು ಕೈ ಖಾಲಿ ಮಾಡಿಕೊಳ್ಳುತ್ತಿದ್ದಾರೆ!

ನ.16ರಂದು ಪೊಲೀಸರು ರಾಣೆಬೆನ್ನೂರಿನ ಅಂಕಸಾಪುರದಲ್ಲಿ ಚೀಟಿ ಬರೆಯುತ್ತಿದ್ದ ದಿಳ್ಳೇಪ್ಪ ಲೋಕಪ್ಪ ಲಮಾಣಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅದರ ಹಿಂದಿನ ದಿನ ಸಮೀಪದ ಮಾಕನೂರು ಕ್ರಾಸ್‌ನಲ್ಲಿ ಹನುಮಂತಪ್ಪ ಹಾಗೂ ಮಾರ್ಕಂಡೇಶ್ವರ ದೇವಸ್ಥಾನದ ಬಳಿ ಚೀಟಿ ಬರೆಯುತ್ತಿದ್ದ ರಾಮಣ್ಣ ಅಲಾಸಿ ಎಂಬುವರು ಸಿಕ್ಕಿಬಿದ್ದಿದ್ದಾರೆ.

ಅದೇ ರೀತಿ ಬಂಕಾಪುರದಲ್ಲಿ ಗಣಪತಿ ಬೂಲಪ್ಪ ಲಮಾಣಿ, ಐರಣಿ ಬಸ್ ನಿಲ್ದಾಣದಲ್ಲಿ ದುರ್ಗಪ್ಪ ಹುಜ್ಜೇರ,ಶಿಗ್ಗಾವಿ ಅಂಚೆ ಕಚೇರಿ ಬಳಿಚಿದಾನಂದಸ್ವಾಮಿಈರಯ್ಯಾಸಾರಂಗಿಮಠ,ಆಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಚನ್ನಪ್ಪ ಎಂಬುವರು ಸಹ ವಿಚಾರಣೆ ಎದುರಿಸುತ್ತಿದ್ದಾರೆ. ಮುಂಬೈನಲ್ಲಿರುವ ಈ ಜಾಲದ ಬೇರು, ಹುಬ್ಬಳ್ಳಿ ಹಾದಿಯಾಗಿ ಹಾವೇರಿಯ ಅಷ್ಟದಿಕ್ಕುಗಳಿಗೂ ಚಾಚಿಕೊಳ್ಳುತ್ತಿದೆ ಎಂಬುದನ್ನು ಸ್ವತಃ ಆರೋಪಿಗಳೇ ಒಪ್ಪಿಕೊಳ್ಳುತ್ತಾರೆ.

ADVERTISEMENT

ಜಿಲ್ಲೆಯ ಹಾನಗಲ್, ಶಿಗ್ಗಾವಿ ಹಾಗೂ ರಾಣೆಬೆನ್ನೂರು ತಾಲ್ಲೂಕುಗಳಲ್ಲಿ ದಂಧೆ ವ್ಯಾಪಕವಾಗಿದೆ. ಪೊಲೀಸರು ದಂಧೆಕೋರರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವಷ್ಟೇ ವೇಗದಲ್ಲಿ ಅವರು ಜಾಮೀನು ಪಡೆದು ಹೊರಗೆ ಬರುತ್ತಿದ್ದಾರೆ. ಏಜೆಂಟ್‌ಗಳನ್ನು ನೇಮಿಸಿಕೊಂಡಿರುವದಂಧೆಕೋರರು, 1 ರೂಪಾಯಿಗೆ ₹ 80ರಂತೆ ಹಣ ಕೊಡುವ ಆಮಿಷವೊಡ್ಡಿ ರೈತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಯುವಕರಿಗೆ ಜೂಜಿನ ಚಟ ಅಂಟಿಸುತ್ತಿದ್ದಾರೆ.

ಮುಂಬೈನ ಯಾವುದೋ ಮೂಲೆಯಲ್ಲಿ ಘೋಷಿಸಲ್ಪಡುವ ನಂಬರ್‌ಗೆ ಜನ ₹ 10, ₹ 20, ₹ 50, ₹ 100... ಹೀಗೆ ಹಣ ಕಟ್ಟುತ್ತಲೇ ಇದ್ದಾರೆ. ರಾಣೆಬೆನ್ನೂರಿನ ಸ್ಟೀಲ್ ಅಂಗಡಿ ವ್ಯಾಪಾರಿಯೊಬ್ಬರು 52 ಸಂಖ್ಯೆಗೆ ಬರೋಬ್ಬರಿ ₹ 5,200 ಕಟ್ಟಿದ್ದ ಹಾಗೂ ಆ ಹಣದ ವಿಚಾರಕ್ಕೆ ಜಗಳವಾಗಿ ಹಾನಗಲ್‌ನ ದಂಧೆಕೋರ ರವೀಶ್‌ ಶೆಟ್ಟಿ ಜತೆ ಜೈಲು ಸೇರಿದ ನಿದರ್ಶನವೂ ಇದೆ.

ಚೀಟಿ ಬರೆವಾತನ ಮಾತು: ‘ದಿನಕ್ಕೆ ನಮಗೆ ₹ 500 ಕೊಡುತ್ತಾರೆ. ಅದಕ್ಕೆ ‘ಬಾಂಬೆ ಕಲ್ಯಾಣಿ’ ಮಟ್ಕಾದ ಚೀಟಿ ಬರೆಯುತ್ತೇವೆ. ಜನ ದುಡ್ಡು ಕೊಟ್ಟಾಗ ಅವರು ಹೇಳಿದ (0–99ರ ನಡುವೆ) ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಕೊಡುತ್ತೇವೆ. ಮಧ್ಯಾಹ್ನದ ಹೊತ್ತಿಗೆ ಪೂರ್ತಿ ಚಾರ್ಟನ್ನು ಮೊಬೈಲ್ ಮೂಲಕವೇ ಮುಂಬೈಗೆ ಕಳುಹಿಸುತ್ತೇವೆ’ ಎಂದು ದಂಧೆಯ ಕಾರ್ಯವೈಖರಿಯನ್ನು ಹೆಸರು ಹೇಳಲಿಚ್ಛಿಸದ ಚೀಟಿ ಬರೆಯುವಾತನೊಬ್ಬ ‘ಪ್ರಜಾವಾಣಿ’ಗೆ ವಿವರಿಸುತ್ತಾನೆ.

‘ಮಧ್ಯಾಹ್ನ 3 ಗಂಟೆಗೆ ಮೊದಲ (ಓಪನ್) ನಂಬರ್ ಘೋಷಣೆಯಾದರೆ, ಸಂಜೆ 5 ಗಂಟೆಗೆ ಕೊನೆ (ಕ್ಲೋಸ್) ನಂಬರ್ ಘೋಷಣೆ ಆಗುತ್ತದೆ. ಆ ಸಂಖ್ಯೆಯನ್ನೇ ಆಯ್ಕೆ ಮಾಡಿದ್ದವರು, ನಮ್ಮ ಬಳಿ ಬಂದು ನಂಬರ್ ಚೀಟಿ ತೋರಿಸಿದ ಕೂಡಲೇ 80 ಪಟ್ಟು ಹೆಚ್ಚು ಹಣ ಬಟವಾಡೆ ಮಾಡುತ್ತೇವೆ. ಇಲ್ಲಿ ತೆರಿಗೆಯೂ ಇಲ್ಲ. ರಶೀದಿಯೂ ಇಲ್ಲ.ಇದು ನಂಬಿಕೆ ಹಾಗೂ ‘ಕೋಡ್‌ ವರ್ಡ್‌’ಗಳ ಮೇಲೆ ನಡೆಯುವ ವ್ಯವಹಾರ’ ಎನ್ನುತ್ತಾನೆ ಅವನು.

ಗ್ರಾಮಸ್ಥರ ಗಾದೆಗಳು: ‘ಓಪನ್‌ಗೆ ಊಟವಿಲ್ಲ, ಕ್ಲೋಸ್‌ಗೆ ನಿದ್ದೆಯಿಲ್ಲ’, ‘ಮಡಕಿ ತರಾಕೆ ರೊಕ್ಕ ಇಲ್ದಿದ್ರೂ ಮಟ್ಕಾ ಆಡ್ತಾಳಾ’... ಮಟ್ಕಾ ಗೀಳಿಗೆ ಸಂಬಂಧಿಸಿದಂತೆ ಇಂತಹ ಹತ್ತಾರು ಸ್ವಾರಸ್ಯಕರ ಪದಗಳನ್ನು ಗ್ರಾಮಸ್ಥರೇ ಕಟ್ಟಿದ್ದಾರೆ. ರಾತ್ರಿ ತಮ್ಮ ಕನಸಿನಲ್ಲಿ ಬರುವ ನಂಬರ್ ಮೇಲೂ ಬಾಜಿ ಕಟ್ಟುತ್ತಾರೆ. ಕೆಲವರು ದುಡಿದ ಹಣವನ್ನೆಲ್ಲ ಮಟ್ಕಾಕ್ಕೆ ಹಾಕುತ್ತಿದ್ದಾರೆ. ಇದರಿಂದ ನೊಂದ ರಾಣೆಬೆನ್ನೂರಿನ ಕೆಲ ಕುಟುಂಬಗಳು ‘ಮಟ್ಕಾ ದಂಧೆ ಮಟ್ಟ ಹಾಕಿ’ ಎಂದು ಪೊಲೀಸರನ್ನು ಮನವಿ ಮಾಡುತ್ತ ಆಂದೋಲನ ಪ್ರಾರಂಭಿಸಿವೆ.

ಗೋವಾ ಬುಕ್ಕಿ ಸಿಕ್ಕಿದ್ದಾನೆ

‘ಗೋವಾದಲ್ಲಿ ಕುಳಿತು ಇಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಬುಕ್ಕಿಯೊಬ್ಬನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಜಿಲ್ಲೆಯ ಅಪರಾಧ ವಿಭಾಗದ ಪೊಲೀಸರು ಈ ದಂಧೆ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ದಂಧೆಕೋರರ ಹಾಗೂ ಏಜೆಂಟ್‌ಗಳ ಕರೆ ವಿವರಗಳ ಮೇಲೆ ನಿಗಾ ವಹಿಸಲಾಗಿದೆ. ಯಾವುದೇ ಸ್ಥಳದಲ್ಲಿ ದಂಧೆ ಕಂಡುಬಂದರೂ ಜನ ತಕ್ಷಣ ಪೊಲೀಸರಿಗೆ ಮಾಹಿತಿ ಒದಗಿಸಿ’ ಎಂದು ಹಾವೇರಿ ಎಸ್ಪಿ ಕೆ.ಜಿ.ದೇವರಾಜು ‘ಪ್ರಜಾವಾಣಿ’ ಮೂಲಕ ಮನವಿ ಮಾಡಿದ್ದಾರೆ.

ದಂಧೆ ವ್ಯಾಪಕ; ಪ್ರಕರಣ ಕಡಿಮೆ

ಇಸ್ಲಾಂಪುರ ಗಲ್ಲಿ, ಸಿದ್ದೇಶ್ವರನಗರ, ಮೆಡ್ಲೇರಿ, ಹಲಗೇರಿ, ಮಾರುತಿನಗರ, ಕುಮಾರಪಟ್ಟಣ, ಕಾಕೋಳ ಸೇರಿದಂತೆ ರಾಣೆಬೆನ್ನೂರಿನ ಬಹುತೇಕ ಗಲ್ಲಿಗಳಲ್ಲಿ ಮಟ್ಕಾ ಬೇರು ಹರಡಿದೆ. ಆದರೆ, ತಾಲ್ಲೂಕಿನಲ್ಲಿ ಈ ವರ್ಷ ಮಟ್ಕಾ ಸಂಬಂಧ ಕೇವಲ 56 ‍ಪ‍್ರಕರಣಗಳಷ್ಟೇ ದಾಖಲಾಗಿವೆ. ಬೇರೆ ತಾಲ್ಲೂಕುಗಳಲ್ಲೂ ಪರಿಸ್ಥಿತಿ ಹೀಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.